More

    ಮಕ್ಕಳ ಪರೀಕ್ಷೆ; ತಾಯಂದಿರ ಅಗ್ನಿಪರೀಕ್ಷೆ

    ನೂರು ಸಾರಿ ಸೋತಿದ್ದರೇನಂತೆ? ನೂರೊಂದು ಸಾರಿ ಬಿದ್ದಿದ್ದರೇನಂತೆ? ಸೋಲು ಗೆಲುವಿಗೆ ಮೆಟ್ಟಿಲು! ಬಿದ್ದರಲ್ಲವೆ ಮರಳಿ ಏಳುವುದು! ಬೀಳದಿದ್ದವನು ಎಂದೂ ಮೇಲೆದ್ದವನಲ್ಲ! ಎಂಬ ಕುವೆಂಪು ಅವರ ವಾಣಿಯಂತೆ ಸೋಲೇ ಗೆಲುವಿನ ರಹದಾರಿ, ಬಿದ್ದವನು ಮೇಲೇಳಲೇಬೇಕು ಎಂಬ ಆತ್ಮವಿಶ್ವಾಸವನ್ನು ಮಕ್ಕಳಿಗೆ ತುಂಬುವ ಜವಾಬ್ದಾರಿಯುತ ಪಾಲಕರು ನಾವಾಗಬೇಕೇ ಹೊರತು, ಅಂಕಗಳ ನಾಗಾಲೋಟದ ಒತ್ತಡಕ್ಕೆ ಮಕ್ಕಳನ್ನು ತಳ್ಳುವ, ನಾವೂ ಆತಂಕದ ಮನೋಭಾವದಿಂದ ಪರೀಕ್ಷಾ ದಿನಗಳನ್ನು ಎದುರಿಸುವ ಪಾಲಕರು ನಾವಾಗದಿರೋಣವಲ್ಲವೆ?

    ಭಾರತಿ.ಎ ಕೊಪ್ಪ

    ಬಹಳಷ್ಟು ತಾಯಂದಿರು ಪೂರ್ವ ಪ್ರಾಥಮಿಕ ಹಂತದಿಂದ ಮೊದಲ್ಗೊಂಡು 5-6ನೇ ತರಗತಿಯವರೆಗೂ ಮಕ್ಕಳ ಜೊತೆಯಲ್ಲೇ ಇದ್ದು, ಪರೀಕ್ಷಾ ಆತಂಕವನ್ನು ತಾವೂ ಅನುಭವಿಸುತ್ತ, ಮಕ್ಕಳೂ ಓದಿನಲ್ಲೇ ತಲ್ಲೀನರಾಗಿರುವಂತೆ ಮಾಡುತ್ತಾರೆ. ಅನೇಕರು ಇನ್ನೇನು ಪ್ರೌಢಶಾಲಾ ಹಂತ ಮತ್ತು ಪಬ್ಲಿಕ್ ಪರೀಕ್ಷೆ ಎದುರಿಸುವ ಸಮಯಕ್ಕೆ ಮಕ್ಕಳು ಬಂದಾಗಲಂತೂ ಓದುವ, ಅಂಕಗಳಿಕೆಯ ಒತ್ತಡವನ್ನು ಮಕ್ಕಳ ಮೇಲೆ ಹೇರುತ್ತಾ, ಪರೀಕ್ಷಾ ಫಲಿತಾಂಶದ ಬಗ್ಗೆ ಅನಗತ್ಯ ಆತಂಕದಲ್ಲಿರುತ್ತಾರೆ. ಮಕ್ಕಳ ಪರೀಕ್ಷಾ ಫಲಿತಾಂಶದ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಒತ್ತಡಕ್ಕೆ ಕಾರಣವಾಗುತ್ತದೆ. ಮಗುವಿನ ಕಲಿಕಾ ಸಾಮರ್ಥ್ಯದ ಮೇಲೆ ನಂಬಿಕೆ ಇಡುವುದು, ಕಲಿಕೆಗೆ ಪೋ›ತ್ಸಾಹ ನೀಡುವುದು ಮಾತ್ರ ನಮ್ಮ ಕರ್ತವ್ಯವಾಗಬೇಕು. ಮಗುವಿನ ಸಾಮರ್ಥ್ಯಕ್ಕೆ ಮೀರಿದ ಅಂಕ ಗಳಿಕೆಯ ನಿರೀಕ್ಷೆ ನಮ್ಮದಾಗಬಾರದು. ಪ್ರತಿ ಮಗುವೂ ತನ್ನದೇ ಆದ ಬುದ್ಧಿಮತ್ತೆಯ ಪ್ರಮಾಣ ಹೊಂದಿರುತ್ತದೆ. ಅದಕ್ಕನುಸಾರವಾಗಿಯೇ ಮಗು ಕಲಿತ ವಿಷಯಗಳನ್ನು ಗ್ರಹಿಸಿ, ಅದನ್ನು ಪರೀಕ್ಷಾ ಸಂದರ್ಭದಲ್ಲಿ ತೆರೆದಿಡಲು ಸಾಧ್ಯ ಎಂಬುದನ್ನು ಪಾಲಕರು ಅರ್ಥಮಾಡಿಕೊಳ್ಳಬೇಕು.

    ಹಾಸ್ಟೆಲ್ ಕಾಲ್ ಆಗದಿರಲಿ ಒತ್ತಡದ ಕಾಲ್

    ಸಾಮಾನ್ಯವಾಗಿ ಪಿಯುಸಿ ಮತ್ತು ಅದರ ನಂತರದ ಶಿಕ್ಷಣಕ್ಕೆ ಹಾಸ್ಟೆಲ್​ಗಳಲ್ಲಿ ಮಕ್ಕಳನ್ನು ಬಿಟ್ಟು ಓದಿಸುವವರು ಅನೇಕರಿದ್ದಾರೆ. ಕೆಲವು ಹಾಸ್ಟೆಲ್​ಗಳಲ್ಲಿ ಸೀಮಿತ ನಿಮಿಷಗಳಿಗೆ, ಸೀಮಿತ ದಿನಗಳಲ್ಲಿ ಮಕ್ಕಳಿಗೆ ಕರೆ ಮಾಡುವ ಅವಕಾಶ ಇರುತ್ತದೆ. ಮಕ್ಕಳು ಕರೆ ಮಾಡಿದಾಗ ಕೇವಲ ಪರೀಕ್ಷಾ ತಯಾರಿ, ಅಂಕಗಳ ಪೈಪೋಟಿ ಇಷ್ಟಕ್ಕೇ ಮಾತುಗಳನ್ನು ಕೇಂದ್ರೀಕರಿಸಿ ಅವರಿಗೆ ಒತ್ತಡ ಹೇರುವಂತಾಗಬಾರದು. ಮನೆಯ ಆಗುಹೋಗುಗಳ ಬಗ್ಗೆ, ಮಕ್ಕಳ ಬೇಕು-ಬೇಡಗಳ ಬಗ್ಗೆ ಮಾತನಾಡಿದಾಗ ಮಕ್ಕಳು ಭಾವನಾತ್ಮಕವಾಗಿ ಬಲಗೊಳ್ಳುತ್ತಾರೆ.

    ಪ್ರೀತಿಯಿಂದ ಪ್ರೋತ್ಸಾಹಿಸೋಣ

    ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಎಂಬ ಜಿ.ಎಸ್.ಶಿವರುದ್ರಪ್ಪ ಅವರ ಸೊಲ್ಲಿನಂತೆ, ಪ್ರೀತಿಯಿಂದ ತಿಳಿಸಿ ಹೇಳದಿದ್ದರೆ ಮಕ್ಕಳ ಮನಸ್ಸೆಂಬ ಹೂ ಅರಳಲು ಸಾಧ್ಯವಿಲ್ಲ. ಪದೇ ಪದೆ ಓದಿನ ವಿಚಾರವಾಗಿ ಗದರುವುದು, ಕಟ್ಟುನಿಟ್ಟಾಗಿ ಇಂತಿಷ್ಟೇ ಅಂಕ ಗಳಿಸಬೇಕೆಂದು ಒತ್ತಡ ಹೇರುವುದು, ಇಂತಹ ನಕಾರಾತ್ಮಕ ಕೆಲಸಗಳನ್ನು ತಾಯಂದಿರು ಮಾಡಬಾರದು. ಮುಂದಿನ ಜೀವನದ ಕನಸು ನನಸಾಗಿಸಿಕೊಳ್ಳುವಲ್ಲಿ ಪ್ರಸ್ತುತ ಓದಿಗಾಗಿ ಕೊಡುವ ಸಮಯ ಬಹಳ ಮುಖ್ಯ ಎಂಬುದನ್ನು ಮಕ್ಕಳಿಗೆ ಪ್ರೀತಿಯಿಂದ ತಿಳಿಸಿ ಹೇಳಬೇಕು. ಮಕ್ಕಳ ಸಣ್ಣ-ಪುಟ್ಟ ಸಾಧನೆಗಳನ್ನು, ಕಳೆದ ಬಾರಿಗಿಂತ ಈ ಬಾರಿ ಉತ್ತಮ ಸಾಧನೆ ತೋರಿದ್ದರೆ ಅಂತಹವುಗಳನ್ನು ಮೆಚ್ಚಿ ಪೋ›ತ್ಸಾಹ ನೀಡುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸಬಹುದು.

    ಹೋಲಿಕೆ ಸಲ್ಲದು

    ಸ್ನೇಹಿತರ ಮಕ್ಕಳ ಜೊತೆಗೆ, ಬಂಧುಗಳ ಮಕ್ಕಳ ಜೊತೆಗೆ ಓದಿನ ವಿಚಾರದಲ್ಲಿ ತುಲನೆ ಮಾಡಬಾರದು. ಮಗು ಕಡಿಮೆ ಸಮಯ ಓದಿದರೂ, ಗ್ರಹಿಕೆ ಸಾಮರ್ಥ್ಯ ಉತ್ತಮವಾಗಿದೆ ಎಂತಾದರೆ ಅವರಿಗೆ ಇನ್ನಷ್ಟು ಕಾಲ ಓದಬೇಕೆಂದು ಒತ್ತಡ ಹೇರಬಾರದು.

    ಮುಕ್ತ ಮಾತು

    ಮಕ್ಕಳ ಓದಿಗೆ ತೊಂದರೆ ಆಗದಿರಲಿ ಎಂದು ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡುವುದು ಸಾಮಾನ್ಯ. ಓದಿನ ನಡುವೆ ಆಗಾಗ್ಗೆ ಪಾಲಕರು ಮುಕ್ತವಾಗಿ ಅವರೊಂದಿಗೆ ಮಾತನಾಡುವುದು, ಅವರ ಬೇಕು-ಬೇಡಗಳ ಬಗ್ಗೆ ಗಮನ ಹರಿಸುವುದು ಕೂಡ ಮುಖ್ಯ.

    ಪಾಲಕರಿಗೆ ಸಲಹೆಗಳು

    • ಪರೀಕ್ಷೆಯ ಅಂಕಗಳ ಆಚೆಗೂ ಜೀವನ ಕಟ್ಟಿಕೊಳ್ಳಲು ಅವಕಾಶವಿದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಿ.
    • ಅಂಕಗಳ ಟಾರ್ಗೆಟ್ ನೀಡದಿರಿ. ಉತ್ತಮ ಸಾಧನೆಯತ್ತ ಪ್ರಯತ್ನವಿರಲಿ ಎಂಬ ಪೋ›ತ್ಸಾಹ ನೀಡಿ.
    • ಮಕ್ಕಳ ಪರೀಕ್ಷಾ ದಿನಗಳು ಸಮೀಪಿಸಿದಾಗ ಶಾಪಿಂಗ್, ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು, ಪ್ರವಾಸ ಇತ್ಯಾದಿಗಳನ್ನು ಕಡಿಮೆ ಮಾಡಿ.
    • ಕುಟುಂಬದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮಕ್ಕಳ ಮುಂದೆ ತೆರೆದಿಡಬೇಡಿ.
    • ಟಿ.ವಿ,ಸಾಮಾಜಿಕ ಜಾಲತಾಣಗಳ ಬಳಕೆ ಹಿತಮಿತವಾಗಿಸಿಕೊಳ್ಳಿ.
    • ಮನೆಯಲ್ಲಿ ಪ್ರಶಾಂತ ವಾತಾವರಣವಿರಲಿ.
    • ಮಕ್ಕಳಿಗೆ ಓದಿನ ವೇಳಾಪಟ್ಟಿ ತಯಾರಿಸಿ, ಅದನ್ನು ಪಾಲಿಸಲು ಸಹಕರಿಸಿ.
    • ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಿ.
    • ಹಾಸ್ಟೆಲ್​ನಲ್ಲಿ ಓದುತ್ತಿರುವ ಮಕ್ಕಳ ಪಾಲಕರಾಗಿದ್ದಲ್ಲಿ ಅವರಿಗೆ ಆರೋಗ್ಯದ ಕಿವಿಮಾತು ಮತ್ತು ಹೆಚ್ಚಿನ ಭಾವನಾತ್ಮಕ ಬೆಂಬಲ ನೀಡಿ.
    • ಮಕ್ಕಳ ವರ್ತನೆಯಲ್ಲಿ ಅಹಿತಕರ ಬದಲಾವಣೆ, ಖಿನ್ನತೆ ಕಂಡುಬಂದಲ್ಲಿ ಆಪ್ತ ಸಮಾಲೋಚಕರನ್ನು ಭೇಟಿ ಮಾಡಿಸಿ,ವರ್ತನಾ ಸಮಸ್ಯೆ ಪರಿಹರಿಸಿಕೊಳ್ಳಲು ಸಹಕರಿಸಿ.
    • ಪರೀಕ್ಷಾ ದಿನದಂದು ಸರಿಯಾದ ಸಮಯದಲ್ಲಿ ಪರೀಕ್ಷಾ ಕೊಠಡಿ ತಲುಪುವಂತೆ ವ್ಯವಸ್ಥೆ ಮಾಡಿ.
    • ಅಗತ್ಯ ಸಾಮಗ್ರಿ ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಲು ಜ್ಞಾಪಿಸಿ.
    • ಅಂಕಗಳ ಬೆನ್ನತ್ತಿ ಪರೀಕ್ಷಾ ಅಕ್ರಮ ಎಸಗದಂತೆ ಎಚ್ಚರವಹಿಸಿ.

    ಪರೀಕ್ಷೆ ಪ್ರತಿಷ್ಠೆ ಆಗದಿರಲಿ

    ಪಬ್ಲಿಕ್ ಪರೀಕ್ಷೆ ಎದುರಿಸುವ ಮಕ್ಕಳು ಮನೆಯಲ್ಲಿ ಇದ್ದರಂತೂ ಓರಗೆಯವರು, ಬಂಧುಗಳು ಎಲ್ಲರೂ ಮುಂದಿನ ಶಿಕ್ಷಣ ಎಲ್ಲಿ? ಏನು? ಎಂಬೆಲ್ಲಾ ಪ್ರಶ್ನೆಗಳನ್ನು ಸಹಜವಾಗಿಯೇ ಕೇಳುತ್ತಿರುತ್ತಾರೆ. ಇಂತಹ ಪ್ರಶ್ನೆಗಳು ಮಕ್ಕಳ ಭವಿಷ್ಯದ ಶಿಕ್ಷಣ, ಉದ್ಯೋಗದ ಬಗ್ಗೆ ಇನ್ನಷ್ಟು ಆತಂಕ ಸೃಷ್ಟಿ ಮಾಡುತ್ತವೆ. ಆ ರೀತಿಯ ಆತಂಕ ಅನಗತ್ಯವಾದುದು. ನಮ್ಮ ಮಕ್ಕಳಿಗೆ ದೊರೆತ ಅಂಕಗಳನ್ನು ಹೆಚ್ಚುಗಾರಿಕೆಯಿಂದ ಹೇಳಿಕೊಳ್ಳಲೇಬೇಕು, ಅವರು ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟ್ ಪಡೆಯಲೇಬೇಕು, ಇವೆಲ್ಲವೂ ಕುಟುಂಬದ ಘನತೆಯ ವಿಚಾರ ಎಂಬ ಮನಸ್ಥಿತಿ ಒಳ್ಳೆಯದಲ್ಲ. ಮಕ್ಕಳಿಗೆ ಅಂಕ ಗಳಿಕೆಯಿಂದ ಆಚೆಗೂ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಹತ್ತಾರು ಅವಕಾಶಗಳಿರುತ್ತವೆ. ಅಂತಹ ಅವಕಾಶಗಳನ್ನು ಪಡೆಯುವಲ್ಲಿ ಪಾಲಕರು ಮಾರ್ಗದರ್ಶಕರಾಗಬೇಕು.

    ಆರೋಗ್ಯದ ಕಾಳಜಿ ಇರಲಿ

    ಮಕ್ಕಳ ಪರೀಕ್ಷಾ ಸಮಯದಲ್ಲಿ ಅವರ ಆರೋಗ್ಯದ ಕಾಳಜಿ ವಹಿಸುವ ಜವಾಬ್ದಾರಿ ಪಾಲಕರದಾಗಿರುತ್ತದೆ. ಮಕ್ಕಳು ಡಿಹೈಡ್ರೇಟ್ ಆಗದಂತೆ ತಡೆಯಲು ನೀರನ್ನು ಕುಡಿಯಲು ನೀಡಬೇಕು. 9-13 ವಯಸ್ಸಿನ ಮಕ್ಕಳಿಗೆ ದಿನಕ್ಕೆ ಸರಿಸುಮಾರು ಎರಡರಿಂದ ಎರಡೂವರೆ ಲೀಟರ್​ನಷ್ಟು ನೀರು ಬೇಕಾದರೆ, 14-18 ವಯಸ್ಸಿನ ಹದಿಹರೆಯದ ಮಕ್ಕಳಿಗೆ ಸರಿಸುಮಾರು ಎರಡೂವರೆಯಿಂದ ಮೂರೂವರೆ ಲೀಟರ್​ನಷ್ಟು ನೀರು ಬೇಕಾಗುತ್ತದೆ. ಪೌಷ್ಟಿಕ ಆಹಾರ ತಯಾರಿಸಿ ಕೊಡುವುದು ಹಾಗೂ ಕಾಲಕಾಲಕ್ಕೆ ನಿಯಮಿತವಾಗಿ ತಿನ್ನಲು ಅವಕಾಶ ಮಾಡಿಕೊಡುವುದು ಕೂಡ ಅತ್ಯವಶ್ಯಕ. ಯೋಗಾಸನ, ಪ್ರಾಣಾಯಾಮ, ವ್ಯಾಯಾಮಗಳನ್ನೂ ಮಕ್ಕಳು ಮಾಡುವಂತೆ ಮಾರ್ಗದರ್ಶನ ನೀಡುವುದು ಮತ್ತು ತಾವೂ ಮಕ್ಕಳೊಂದಿಗೆ ತೊಡಗಿಕೊಳ್ಳುವುದರಿಂದ ಮಕ್ಕಳ ಏಕಾಗ್ರತೆಗೆ ಸಹಕಾರಿಯಾಗುತ್ತದೆ. ಓದಿನ ನಡುವೆ ತುಸು ವಿರಾಮ ನೀಡಲು, ಮನಸ್ಸು ತಿಳಿಯಾಗಲು ಮಕ್ಕಳೊಂದಿಗೆ ಕೆಲಕಾಲ ಆಟ, ವಾಯುವಿಹಾರ ಇವೆಲ್ಲವೂ ಅತ್ಯಗತ್ಯ. ಪಾಲಕರ ಭಾವನಾತ್ಮಕ ಬೆಂಬಲ ಮಕ್ಕಳ ಏಕಾಗ್ರತೆಯನ್ನು ಉತ್ತಮಪಡಿಸಬಲ್ಲದು.

    ಶಿಕ್ಷಕರೊಂದಿಗೆ ಚರ್ಚೆ

    ತಮ್ಮ ಮಕ್ಕಳ ಕಲಿಕಾ ಪ್ರಗತಿ, ಕಲಿಕೆಯ ಪ್ರಯತ್ನಗಳು ಹೇಗೆ ಉತ್ತಮಗೊಳಿಸಿಕೊಳ್ಳಬೇಕೆಂಬ ಬಗ್ಗೆ ಶಿಕ್ಷಕರು ಅಥವಾ ಉಪನ್ಯಾಸಕರೊಂದಿಗೆ ಆಗಾಗ್ಗೆ ರ್ಚಚಿಸಬೇಕು. ಪರೀಕ್ಷಾ ಸಮಯದಲ್ಲಿ ನಡೆಸುವ ಪುನರಾವರ್ತನೆ ತರಗತಿಗಳಲ್ಲಿ ನಮ್ಮ ಮಕ್ಕಳ ಸ್ಪಂದನೆ, ಕಲಿಕೆಯಲ್ಲಿನ ಸುಧಾರಣೆಯ ಅಂಶಗಳ ಬಗೆಗೆ ಶಿಕ್ಷಕರು ಅಥವಾ ಉಪನ್ಯಾಸಕರ ಬಳಿ ರ್ಚಚಿಸಿ, ಮನೆಯಲ್ಲಿ ಅವರ ಸಲಹೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮಕ್ಕಳಿಗೆ ಸಹಕರಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts