More

    ಪರಮಹಂಸ, ವಿವೇಕಾನಂದರ ಸಂದೇಶದಿಂದ ಶಾಂತಿ ಸ್ಥಾಪನೆ: ಕುವೆಂಪು ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ.ರಾಜೇಂದ್ರ ಅಭಿಮತ

    ಮೈಸೂರು: ಶ್ರೀರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ಸಂದೇಶದಿಂದ ಮಾತ್ರ ವಿಶ್ವ ಶಾಂತಿ ಸಾಧ್ಯ ಎಂದು ಕುವೆಂಪು ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ.ರಾಜೇಂದ್ರ ಅಭಿಪ್ರಾಯಪಟ್ಟರು.
    ಶ್ರೀರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದಿಂದ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ‘ತಿಂಗಳ ತಿಳಿವು’ ಕಾರ್ಯಕ್ರಮದಲ್ಲಿ ಕುವೆಂಪು ಅವರ ಮೇಲೆ ರಾಮಕೃಷ್ಣ ಪರಮಹಂಸರ ಪ್ರಭಾವ ವಿಷಯ ಕುರಿತು ಉಪನ್ಯಾಸ ನೀಡಿದರು.
    ತಮ್ಮ ಆಧ್ಯಾತ್ಮಿಕ ಚಿಂತನೆ ಮೂಲಕ ಸ್ವಾಮಿ ವಿವೇಕಾನಂದರು ಭಾರತದ ಕೀರ್ತಿಯನ್ನು ವಿಶ್ವಕ್ಕೆ ಪರಿಚಯಿಸಿದರು. ಇದಕ್ಕೆ ಶ್ರೀರಾಮಕೃಷ್ಣ ಪರಮಹಂಸರು ಪ್ರೇರಣೆ ಆಗಿದ್ದರು. ಹೀಗಾಗಿ ಜಗತ್ತಿನಲ್ಲಿ ಈಗ ನಡೆಯುತ್ತಿರುವ ಅಶಾಂತಿ ಘಟನೆಗಳಿಗೆ ದಿವ್ಯಾತ್ರಯರ ಸಂದೇಶ ಶಾಂತಿಯನ್ನು ಸ್ಥಾಪಿಸಲು ನೆರವಾಗುತ್ತದೆ ಎಂದರು.
    ಯಾವುದೇ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳಲು ಅನೇಕ ಜನರ ಪ್ರಭಾವ ಇರುತ್ತದೆ. ಹಾಗೆಯೇ ಸ್ವಾಮಿ ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರ ವ್ಯಕ್ತಿತ್ವ ಪ್ರಭಾವ ಬೀರಿತು. ಇವರಿಬ್ಬರ ಪ್ರಭಾವ ಕುವೆಂಪು ಅವರ ಮೇಲೆಯೂ ಬೀರಿದ್ದರಿಂದ ಶ್ರೀಮಠದೊಂದಿಗೆ ನಿಕಟ ಬಾಂಧವ್ಯ ಬೆಳೆಯಿತು. ಇದನ್ನು ಕುವೆಂಪು ಅವರ ಹಲವು ಕೃತಿಗಳಲ್ಲಿಯೂ ಕಾಣಬಹುದು ಎಂದು ಹೇಳಿದರು.
    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ರಾಮಕೃಷ್ಣ ಆಶ್ರಮದ ಪ್ರಕಟಣಾ ವಿಭಾಗದ ಮುಖ್ಯಸ್ಥರಾದ ಸ್ವಾಮಿ ಸರ್ವಜಯಾನಂದ ಮಹಾರಾಜ್, ಜಗತ್ತು ಅತೃಪ್ತಿಯಿಂದ ಬೇಯುತ್ತಿದ್ದು, ಜನರಿಗೆ ನೆಮ್ಮದಿ ಬೇಕಾಗಿದೆ. ಅದಕ್ಕೆ ಶ್ರೀರಾಮಕೃಷ್ಣ ಪರಮಹಂಸ, ಶಾರದಾದೇವಿ ಮತ್ತು ವಿವೇಕಾನಂದರ ಆಧ್ಯಾತ್ಮಿಕ ಚಿಂತನೆ ಆಗತ್ಯವಾಗಿದೆ ಎಂದರು.
    ರಾಮಕೃಷ್ಣ ಪರಮಹಂಸರ ಸ್ಮರಣೆಯಿಂದ ಭಕ್ತಿಯ ಜಲ ಉದ್ಭವವಾಗಲಿದೆ. ಶಾಂತಿ ಮೂಡಲಿದೆ. ಮತ ಜಾತಿ ಕಲಹ ದೂರವಾಗಲಿದೆ. ಇವರ ಸ್ಮರಣೆಯಿಂದ ಜನಸಾಮಾನ್ಯರು ಭಕ್ತವಂತನ ಕೃಪೆಗೆ ಪಾತ್ರರಾಗಬಹುದು. ಜನಸಾಮಾನ್ಯರ ನೆಮ್ಮದಿ ಬದುಕಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯವಾಗಿದೆ ಎಂದರು.
    ಅಂತರಂಗದಲ್ಲಿ ದೈವತ್ವದ ಆನಂದ ಮೂಡಲಿದ್ದು, ರಾಮಕೃಷ್ಣರ ಸ್ಮರಣೆಯಲ್ಲಿ ಅಂತಹ ಶಕ್ತಿ ಇದೆ. ಈ ಮೂಲಕ ದೇವರಿಗೆ ಹತ್ತಿರವಾಗಲಿದ್ದು, ಜೀವನ ಸಾರ್ಥಕವಾಗಲಿದೆ. ಮನಸ್ಸು ಪರಿಶುದ್ಧವಾಗಲಿದೆ ಎಂದರು.
    ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಪ್ರತಿಷ್ಠಾನದಿಂದ ಪ್ರತಿ ತಿಂಗಳು ಹುಣ್ಣಿಮೆಯಂದು ಒಂದೊಂದು ವಿಚಾರಗಳ ಮೇಲೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ನಿರಂತರವಾಗಿ ನಡೆಸಿಕೊಂಡು ಹೋಗಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
    ಮನಸ್ಸು ಪರಿಪಕ್ವವಾಗಲು ಆಧ್ಯಾತ್ಮದಿಂದ ಮಾತ್ರ ಸಾಧ್ಯ. ಮನಸ್ಸು ಸರಿ ಇದ್ದರೆ ಆರೋಗ್ಯ ಸರಿ ಇರುತ್ತದೆ. ಹಾಗಾಗಿ, ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ ಚಿಂತನೆ ಮೂಡುವಂತೆ ಮಾಡಲು ಶಾಲಾ, ಕಾಲೇಜುಗಳಲ್ಲಿಯೂ ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ತತ್ವವನ್ನು ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.
    ಶ್ರೀರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ.ಮಾದೇಗೌಡ, ನಗರಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀ ಕಿರಣ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts