More

    ಪಾಂಗೂಳ್ ಗಲ್ಲಿಯ ಗೋಳು!

    ಬೆಳಗಾವಿ: ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ನಗರ ಪ್ರದೇಶಗಳು ಅಂದಗಾಣಲು, ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎನ್ನುವುದು ಸರ್ವವಿಧಿತ. ಸ್ಮಾರ್ಟ್‌ಸಿಟಿ ಹಣೆಪಟ್ಟಿ ಹೊತ್ತು ಪ್ರಗತಿಪಥದಲ್ಲಿ ದಾಪುಗಾಲಿಡುತ್ತಿರುವ ಬೆಳಗಾವಿ ನಗರದ ಹೃದಯಭಾಗದಲ್ಲಿರುವ ಕೆಲ ಪ್ರದೇಶಗಳು ಜನರಿಂದಲೇ ಅಂದಗೆಟ್ಟು ಅಧ್ವಾನವಾಗುತ್ತಿವೆ. ಸದಾ ಜನರಿಂದ ಗಿಜಿಗುಡುವ ನಗರದ ಪಾಂಗೂಳ್ ಗಲ್ಲಿ ಅದಕ್ಕೊಂದು ಸ್ಪಷ್ಟ ಉದಾಹರಣೆ.

    ಪಾಂಗೂಳ್ ಗಲ್ಲಿ ವ್ಯಾಪಾರ-ವಹಿವಾಟಿನಿಂದಾಗಿ ಅತ್ಯಂತ ಜನದಟ್ಟಣೆ ಕಂಡುಬರುವ ಪ್ರದೇಶ. ಆದರೆ ಇಲ್ಲಿ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸಲಾಗುತ್ತಿದೆ ಎಂಬ ಬಲವಾದ ಆರೋಪ ಕೇಳಿಬರುತ್ತಿದೆ. ಒತ್ತುವರಿಯಿಂದ ರಸ್ತೆ ಕಿರಿದಾಗಿದ್ದು, ಗಣಪತಿ ಗಲ್ಲಿಯಿಂದ ಬೆಂಡಿ ಬಜಾರ್‌ಗೆ ಸಂಪರ್ಕ ಕಲ್ಪಿಸುವ ಪಾಂಗೂಳ್ ಗಲ್ಲಿ ರಸ್ತೆ ಸಂಚಾರ ದಟ್ಟಯಿಂದ ಸ್ಥಳೀಯರು ಹಾಗೂ ಸಾರ್ವಜನಿಕರು ರೋಸಿ ಹೋಗಿದ್ದಾರೆ.

    ಮಾರುಕಟ್ಟೆ ಪ್ರದೇಶದಲ್ಲಿ ಮಾಲೀಕರು ತಮ್ಮ ಸ್ವಂತ ಅಂಗಡಿಗಳನ್ನು ಬಾಡಿಗೆಗೆ ನೀಡಿ, ಅದೇ ಅಂಗಡಿಗಳ ಎದುರು ಟೆಂಟ್ ಹಾಕಕೊಂಡು ಸಣ್ಣ ಪುಟ್ಟ ವ್ಯಾಪಾರಕ್ಕಿಳಿದಿದ್ದರಿಂದ ರಸ್ತೆ ಅತಿಕ್ರಮಣವಾಗಿದೆ ಎಂದು ಸ್ಥಳೀಯರು ದೂರುತ್ತಾರೆ. ರಸ್ತೆ ಅತಿಕ್ರಮಿಸಿ ವ್ಯಾಪಾರ-ವಹಿವಾಟು ಮಾಡುತ್ತಿರುವುದರಿಂದ ಪ್ರತಿದಿನ ಸಂಚಾರ ದಟ್ಟಣೆಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ಸಾರ್ವಜನಿಕರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮವಾಗಿಲ್ಲ. ರಸ್ತೆ ಅತಿಕ್ರಮಣ ಮಾಡಿದವರಿಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ವ್ಯಾಪಾರಸ್ಥರು ಕ್ಯಾರೇ ಎನ್ನುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಮೃದು ಧೋರಣೆ ತೋರುತ್ತಿರುವುದೇಕೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

    ಸುಮಾರು ಒಂದು ಕಿ.ಮೀ ವ್ಯಾಪ್ತಿ ಹೊಂದಿರುವ ಈ ರಸ್ತೆಯು ಮೊದಲು 20 ಅಡಿ ಅಗಲವಿತ್ತು. ಸಂಚಾರ ದಟ್ಟಣೆಯಾಗುತ್ತಿದ್ದ ಕಾರಣ ಐದೂವರೆ ವರ್ಷದ ಹಿಂದೆ ಮಾಸ್ಟರ್‌ಪ್ಲಾೃನ್ ಯೋಜನೆಯಡಿ ರಸ್ತೆ ಒತ್ತುವರಿ ತೆರವುಗೊಳಿಸಿ 30 ಅಡಿಗೆ ಅಗಲ ಹೆಚ್ಚಿಸಲಾಗಿದೆ. ಗಟಾರ, ಪೈಪ್‌ಲೈನ್ ಕೂಡ ಅಳವಡಿಸಲಾಗಿದೆ. ಆದರೂ ಮತ್ತೆ ರಸ್ತೆ ಒತ್ತುವರಿಯಾಗಿ ಸಂಚಾರಕ್ಕೆ ಕಿರಿಕಿರಿಯುಂಟಾಗುತ್ತಿದೆ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ ಮೀಸಲಿಟ್ಟಿದ್ದ ಪಾರ್ಕಿಂಗ್ ಜಾಗವನ್ನೂ ವ್ಯಾಪಾರಸ್ಥರು ಅತಿಕ್ರಮಿಸಿಕೊಳ್ಳುತ್ತಿರುವುದರಿಂದ ಸವಾರರಿಗೆ ತೀವ್ರ ತೊಂದರೆಯಾಗಿದೆ. ಈ ಸಮಸ್ಯೆಗೆ ಅಧಿಕಾರಿಗಳು ಶೀಘ್ರ ಇತಿಶ್ರೀ ಹಾಡಬೇಕು ಎನ್ನುವುದು ಸಾರ್ವಜನಿಕರ ಅಂಬೋಣ.

    ಪಾಂಗೂಳ್ ಗಲ್ಲಿಯಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಸಿ 6 ವರ್ಷಗಳು ಕಳೆದರೂ ಸಂಪರ್ಕ ಕೊಟ್ಟಿಲ್ಲ. ಗಲ್ಲಿಯಲ್ಲಿ ವ್ಯಾಪಾರಸ್ಥರ ಅಂಗಡಿ, ಮನೆಗಳು ಇರುವ ಕಾರಣ ಗಟಾರ ಮೇಲೆ ಕಲ್ಲು ಹಾಕಿದ್ದಾರೆ. ಇದರಿಂದ ಗಟಾರನಲ್ಲಿ ಹೂಳು ಸಂಗ್ರಹವಾಗಿದ್ದು, ಗಬ್ಬು ನಾರುತ್ತಿವೆ. ಪಾಂಗೂಳ್ ಗಲ್ಲಿ, ಭೋವಿ ಗಲ್ಲಿಯ ಬಂಗಿ ಬೋಳನಲ್ಲಿ ಬೇಕಾಬಿಟ್ಟಿ ಬೈಕ್ ಪಾರ್ಕಿಂಗ್ ಮಾಡಲಾಗುತ್ತಿದೆ. ಗಣಪತಿ ಗಲ್ಲಿ, ಖಡೇಬಜಾರ್, ಬೆಂಡಿ ಬಜಾರ್‌ನಿಂದ ಕೊಳಚೆ ನೀರು ಬಂದು ಪಾಂಗೂಳ್ ಗಲ್ಲಿಯ ಜೈನ್ ದೇವಸ್ಥಾನ, ಗಣಪತಿ ಮಂದಿರ ಎದುರು ಹಾಗೂ ಭೋವಿ ಗಲ್ಲಿಯಲ್ಲಿ ಸಂಗ್ರಹವಾಗುತ್ತಿದ್ದು, ಗಬ್ಬು ನಾತಕ್ಕೆ ಜನರು ಬೇಸತ್ತಿದ್ದಾರೆ.

    ಅಂದರ್ ಗಯಾ ತೋ ಬಾಹರ್

    ಪಾಂಗೂಳ್ ಗಲ್ಲಿಯಲ್ಲಿ ರಸ್ತೆ ಮೇಲೆ ವ್ಯಾಪಾರ ಮಾಡುವವರನ್ನು ಪಾಲಿಕೆ ಸಿಬ್ಬಂದಿ ಚದುರಿಸಿ ಎಚ್ಚರಿಕೆ ನೀಡಿದರೂ ಅವರು ಬಗ್ಗುತ್ತಿಲ್ಲ. ಪಾಲಿಕೆ ಸಿಬ್ಬಂದಿಯು ರಸ್ತೆ ಮೇಲೆ ವ್ಯಾಪಾರ ಮಾಡುವವರನ್ನು ತೆರವು ಮಾಡಿಸಿ, ಮತ್ತೊಂದು ಅಂಗಡಿ ಮುಂದಿನ ರಸ್ತೆ ತೆರವು ಮಾಡುವುದಕ್ಕೆ ಹೋದ ವೇಳೆ ಮತ್ತೆ ಹಿಂದಿನ ಅಂಗಡಿಗಳ ಮುಂದೆ ವ್ಯಾಪಾರ ಶುರು ಹಚ್ಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಖಡಕ್ ಕ್ರಮ ಕೈಗೊಳ್ಳದಿರುವುದೇ ಕಾರಣ ಎಂದು ಸಾರ್ವಜನಿಕರು ಹೇಳುತ್ತಾರೆ.

    ಪಾಂಗೂಳ್ ಗಲ್ಲಿಯಲ್ಲಿ ಮಾಸ್ಟರ್ ಪ್ಲಾೃನ್ ಯೋಜನೆಯಡಿ ರಸ್ತೆ, ಗಟಾರ ನಿರ್ಮಿಸಲಾಗಿದೆ. ಈಗ ರಸ್ತೆ ಒತ್ತುವರಿಯಾಗಿದೆ. ಗಟಾರಗಳು ನಿರ್ವಹಣೆ ಆಗುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
    | ರಾಯಮನ್ ವಾಝ ಪಾಲಿಕೆ ಮಾಜಿ ಸದಸ್ಯ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts