More

    ಬಾಲಕರ ಸಹಿತ 7 ಮಂದಿ ದುರ್ಮರಣ, ಕಾಸರಗೋಡಿನ ಪಾಣತ್ತೂರು ಬಳಿ ಅಪಘಾತ

    ಸುಳ್ಯ/ಬದಿಯಡ್ಕ: ಮದುವೆಗೆ ಹೋಗುತ್ತಿದ್ದ ದಿಬ್ಬಣದ ಬಸ್ ಕಾಸರಗೋಡು ಜಿಲ್ಲೆಯ ಪಾಣತ್ತೂರು ಬಳಿ ಭಾನುವಾರ ಪಲ್ಟಿಯಾಗಿ, ಇಬ್ಬರು ಬಾಲಕರ ಸಹಿತ ಏಳು ಮಂದಿ ಮೃತಪಟ್ಟಿದ್ದಾರೆ. ಪುತ್ತೂರು ಕಡೆಯಿಂದ ಸುಳ್ಯ ಅಲೆಟ್ಟಿ ಮೂಲಕ ಪಾಣತ್ತೂರು ಕರಿಕೆ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಪಲ್ಟಿಯಾಯಿತು. ಪುತ್ತೂರಿನ ಬಲ್ನಾಡ್ ಗ್ರಾಮದ ಚನಿಲ ನಿವಾಸಿ ಕೊಗ್ಗು ನಾಯ್ಕ ಅವರ ಪುತ್ರಿಯ ವಿವಾಹ ಕೊಡಗು ಜಿಲ್ಲೆಯ ಚೆತ್ತುಕಯ ಎಂಬಲ್ಲಿ ವರನ ಮನೆಯಲ್ಲಿ ನಡೆಯುತ್ತಿತ್ತು. ಸಮಾರಂಭಕ್ಕೆ ವಧುವಿನ ಊರಾದ ಈಶ್ವರಮಂಗಲದಿಂದ ವಧುವಿನ ಮನೆಯವರು ಖಾಸಗಿ ಬಸ್‌ನಲ್ಲಿ ದಿಬ್ಬಣ ತೆರಳುತ್ತಿದ್ದರು. ಬಸ್‌ನಲ್ಲಿ 89 ಮಂದಿ ಇದ್ದರು ಎನ್ನಲಾಗಿದೆ. ಕಲ್ಲಪಳ್ಳಿ-ಪಾಣತ್ತೂರು ಮಧ್ಯೆ ಪೆರಿಯಾರಂ ಎಂಬಲ್ಲಿ ಬೆಳಗ್ಗೆ 11.30ರ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್ 10 ಮೀಟರ್ ಆಳದಲ್ಲಿದ್ದ ಮನೆ ಮೇಲೆ ಬಿದ್ದಿದೆ.

    ಘಟನೆಯಲ್ಲಿ ಬಾಲಕರಿಬ್ಬರ ಸಹಿತ ಏಳು ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಅಧರ್ಮೂಲೆ ನಾರಾಯಣ ನಾಯ್ಕರ ಪುತ್ರ ಶ್ರೇಯಸ್(13), ಸುಳ್ಯದ ಕುಕ್ಕಂದೂರಿನ ರವಿಚಂದ್ರ(40), ಬೆಟ್ಟಂಪಾಡಿ ವಸಂತ ನಾಯ್ಕರ ಪತ್ನಿ ಸೇಸಮ್ಮ ಅಲಿಯಾಸ್ ಜಯಲಕ್ಷ್ಮೀ (39), ರಾಜೇಶ್(45), ಅವರ ಪುತ್ರ ಆದರ್ಶ(12), ಪುತ್ತೂರಿನ ಸುಮತಿ(50), ಹಾಗೂ ಬಂಟ್ವಾಳ ನಿವಾಸಿ ಶಶಿಧರ ಪೂಜಾರಿ(43) ಮೃತಪಟ್ಟವರು. ಶಶಿಧರ್ ಪೂಜಾರಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನಷ್ಟು ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಪಾಣತ್ತೂರು, ಪೂಡಂಕಲ್ಲು, ಕಾಞಂಗಾಡ್ ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್ ಬಿದ್ದ ಪರಿಣಾಮ, ಜೋಸ್ ಎಂಬುವರ ಮನೆ ಭಾಗಶಃ ಹಾನಿಗೊಂಡಿದೆ. ಮನೆಯಲ್ಲಿ ಯಾರೂ ಇರಲಿಲ್ಲ. ವಧುವಿನ ಕಡೆಯವರು ಮೊದಲೇ ಬೇರೆ ವಾಹನದಲ್ಲಿ ತೆರಳಿದ್ದರಿಂದ ಮದುವೆ ಸಾಂಗವಾಗಿ ನೆರವೇರಿದೆ.

    ಅಗತ್ಯ ಕ್ರಮಕ್ಕೆ ಸಿಎಂ ಆದೇಶ: ಅಪಘಾತ ವಿಷಯ ತಿಳಿಯುತ್ತಿದ್ದಂತೆ ಸ್ಪಂದಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಗಾಯಾಳುಗಳ ಚಿಕಿತ್ಸೆ ಹಾಗೂ ಮೃತರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಜಿತ್‌ಬಾಬು ಅವರಿಗೆ ಸೂಚಿಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಗಳನ್ನು ತಕ್ಷಣವೇ ಕೈಗೊಂಡು ವಾರಸುದಾರರಿಗೆ ಬಿಟ್ಟುಕೊಡುವಂತೆ ಕಂದಾಯ ಸಚಿವ ಇ. ಚಂದ್ರಶೇಖರನ್ ಹಾಗೂ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಕಾಸರಗೋಡು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.

    ಬಸ್ ಅಪಘಾತ ಪ್ರಕರಣದ ಸಮಗ್ರ ತನಿಖೆಗೆ ಆದೇಶ ನೀಡಲಾಗಿದೆ. ಅಪರ ಜಿಲ್ಲಾಧಿಕಾರಿಗೆ ತನಿಖೆಯ ಉಸ್ತುವಾರಿ ವಹಿಸಲಾಗಿದೆ. ಬಸ್ ಅನಾಹುತಕ್ಕೆ ಏನುಕಾರಣ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
    – ಡಾ.ಸಜಿತ್‌ಬಾಬು, ಜಿಲ್ಲಾಧಿಕಾರಿ, ಕಾಸರಗೋಡು

    ಅಪಘಾತದ ಗಾಯಾಳುಗಳಿಗೆ ಅಗತ್ಯ ನೆರವು, ವೈದ್ಯಕೀಯ ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿ, ವೈದ್ಯಾಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
    – ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವ, ದ.ಕ.ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts