More

    ಪಣಂಬೂರು ಬೀಚ್‌ಗಿಲ್ಲ ಕಣ್ಗಾವಲು

    ಮಂಗಳೂರು: ನಾಡಿನ ಪ್ರಮುಖ ಕಡಲತೀರ ಪಣಂಬೂರು ಬೀಚ್‌ಗೆ ಕಣ್ಗಾವಲಿಲ್ಲ. ತಣ್ಣೀರುಬಾವಿ ನಿರ್ವಹಣೆ ವಿಚಾರವೂ ಕೋರ್ಟ್ ಮೆಟ್ಟಿಲೇರಿದೆ.
    ಪಣಂಬೂರು ಕಡಲತೀರವನ್ನು 12 ವರ್ಷ ನಿರ್ವಹಿಸಿರುವ ಸಂಸ್ಥೆಯ ಗುತ್ತಿಗೆ ಕೊನೆಗೊಳಿಸಲಾಗಿದೆ. ಇನ್ನೊಂದೆಡೆ ತಣ್ಣೀರುಬಾವಿಯ ಎರಡೂ ಕಡಲತೀರಗಳಿಗೆ ಎರಡು ವರ್ಷ ಹಿಂದೆಯೇ ಗುತ್ತಿಗೆ ನವೀಕರಣವಾಗಿದ್ದರೂ ಅಧಿಕೃತ ಆದೇಶವಾಗಿಲ್ಲ.

    ಇದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮದ ಕಥೆ. ದೇಶ ವಿದೇಶಗಳಿಂದ ಮಂಗಳೂರಿಗೆ ಬರುವ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವುದು ಇದೇ ಬೀಚ್‌ಗಳಿಗೆ. ಬರುವ ಪ್ರವಾಸಿಗರಿಗೆ ಬೇಕಾದ ಸೌಲಭ್ಯ ಒದಗಿಸುವುದು, ನಿರ್ವಹಣೆ ಮಾಡುವುದು, ಸುರಕ್ಷತೆ ಕಾಯ್ದುಕೊಳ್ಳುವುದು ಬಹಳ ಅಗತ್ಯ.
    ದಶಕದ ಹಿಂದೆ ಪ್ರವಾಸೋದ್ಯಮ ಈಗಿನಷ್ಟು ಬೆಳೆದಿರಲಿಲ್ಲ, ಜನ ಹೆಚ್ಚು ಬರುತ್ತಿರಲಿಲ್ಲ, ಆಗ ನಿರ್ವಹಣೆ ಅಗತ್ಯವಿರಲಿಲ್ಲ. ಆದರೆ ಈಗ ಹಾಗಿಲ್ಲ. ಬರುವ ಪ್ರವಾಸಿಗರ ಸಂಖ್ಯೆ, ಅವರ ವರ್ತನೆ ಬಹಳಷ್ಟು ಬದಲಾಗಿದೆ. ಹಾಗಾಗಿ ಸೂಕ್ತ ನಿರ್ವಹಣೆ ಇಲ್ಲವಾದರೆ ಸ್ಥಳಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ.

    ಪಣಂಬೂರು ಬೀಚ್‌ನ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆಯವರು ಕೆಲವು ದಿನಗಳ ಹಿಂದೆ ಕೆಲಸ ಸ್ಥಗಿತಗೊಳಿಸಿದ್ದಾರೆ. ಆದರೆ ಜನ ಹೆಚ್ಚು ಬರುವ ಕಾರಣ ಕೆಲ ದಿನಗಳ ಕಾಲ ಅಲ್ಲಿ ಜೀವ ರಕ್ಷಕರು ಇರಬೇಕು ಎಂದು ತಿಳಿಸಲಾಗಿದೆ. ಆದರೆ ನಿರ್ವಹಣೆ ನೋಡಿಕೊಳ್ಳುವುದಕ್ಕೆ ಜನವಿಲ್ಲ.
    ನಮಗೆ ಮೊದಲು 10 ವರ್ಷ ಅವಧಿಗೆ ಟೆಂಡರ್ ವಹಿಸಲಾಗಿತ್ತು, ಬಳಿಕ ಐದು ವರ್ಷಕ್ಕೆ ನವೀಕರಣ ಮಾಡುತ್ತ ಹೋಗಬೇಕು. ಸೇವೆ ಕೆಟ್ಟದಾಗಿದ್ದರೆ ಮಾತ್ರವೇ ಸ್ಥಗಿತಗೊಳಿಸಬಹುದಷ್ಟೇ. 380ರಷ್ಟು ಮಂದಿಯ ಜೀವ ರಕ್ಷಣೆ ಮಾಡಿದ್ದೇವೆ. ನಾವು ಉತ್ತಮ ನಿರ್ವಹಣೆ ಮಾಡಿದ್ದರೂ 12 ವರ್ಷಕ್ಕೇ ಸ್ಥಗಿತಗೊಳಿಸಿದ್ದಾರೆ ಎನ್ನುತ್ತಾರೆ ಯೋಜನೆ ಮುಖ್ಯಸ್ಥ ಯತೀಶ್ ಬೈಕಂಪಾಡಿ.

    ತಣ್ಣೀರುಬಾವಿಯಲ್ಲೂ ಸಮಸ್ಯೆ
    ತಣ್ಣೀರುಬಾವಿಯಲ್ಲಿ ಎರಡು ಕಡಲತೀರಗಳಿವೆ. ಎರಡನ್ನೂ ಹಿಂದೆ ಯೋಜಕ ಸಂಸ್ಥೆಯವರು ನಿರ್ವಹಿಸುತ್ತಿದ್ದರು. ಎರಡು ವರ್ಷದ ಹಿಂದೆ ಅದರ ಅವಧಿ ಮುಗಿದು ಟೆಂಡರ್ ಕರೆಯಲಾಗಿದ್ದು, ಅದರಲ್ಲಿ ಯತೀಶ್ ಅವರ ಸಂಸ್ಥೆಗೆ ಟೆಂಡರ್ ಆಗಿತ್ತು. ಆದರೆ ಆದೇಶ ಮಾಡಿರಲಿಲ್ಲ. ಈ ನಡುವೆ ಯೋಜಕ ಸಂಸ್ಥೆ ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದೆ. ಅಲ್ಲಿ ಮಧ್ಯಂತರ ಆದೇಶವಿದ್ದು ಮುಂದಿನ ಆದೇಶದ ವರೆಗೆ ಯೋಜಕದವರೇ ನಿರ್ವಹಣೆ ಮಾಡಿಕೊಂಡು ಬರಬೇಕು.

    ನಿರ್ವಹಣೆ ಸಮಿತಿ: ಪಣಂಬೂರು ಬೀಚ್ ನಿರ್ವಹಣೆ ಖಾಸಗಿ ಗುತ್ತಿಗೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ನಿರ್ವಹಣಾ ಗುತ್ತಿಗೆ ಆರಂಭವಾಗುವವರೆಗೆ ಈ ಕುರಿತು ನಿಗಾ ಇರಿಸುವುದಕ್ಕೆ ಮಂಗಳೂರು ಮನಪಾ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಪಣಂಬೂರು ಕಡಲತೀರ ನಿರ್ವಹಣಾ ಸಮಿತಿ ರಚಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಬೀಚ್‌ಗಳನ್ನು ನಡೆಸಿಕೊಂಡು ಬಂದಿದ್ದರೆ ಟೆಂಡರ್ ಮುಂದುವರಿಸುವ ಬಗ್ಗೆ ತೀರ್ಮಾನಿಸಬಹುದಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಬೀಚ್ ನಿರ್ವಹಣೆ ಆಗಿಲ್ಲ. ಉಡುಪಿ ಜಿಲ್ಲೆಯ ಬೀಚ್‌ಗಳಿಗೆ ಹೋಲಿಸಿದರೆ ಸಾಲದು. ಮುಂದೆ ಪಣಂಬೂರು, ತಣ್ಣೀರುಬಾವಿ ಎರಡಕ್ಕೂ ಹೊಸದಾಗಿ ಟೆಂಡರ್ ಕರೆಯಲಾಗುವುದು.
    ಸೋಮಶೇಖರ್, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts