More

    ಭಾಷಾ ಪ್ರೇಮಕ್ಕೆ ನಿದರ್ಶನ ಪಂಪ

    ಶಿವಮೊಗ್ಗ: ಕಾವ್ಯ ರಚನೆಯ ಇಕ್ಕಟ್ಟಿನ ಸಂದರ್ಭದಲ್ಲೂ ಕ್ರಿಯಾಶೀಲತೆ ಮೆರೆದವರು ಪಂಪ. ಮಹಾಕಾವ್ಯ ರಚಿಸುವಾಗ ಹೆಚ್ಚು ಸ್ವತಂತ್ರೃವಿಲ್ಲದೇ ಇದ್ದರೂ ಸಂದರ್ಭ ಸಿಕ್ಕಾಗ ತನ್ನ ನಾಡು, ನುಡಿಯ ಪ್ರೇಮ ಮೆರೆಯುವ ಮೂಲ ಎಲ್ಲ ಸಾಹಿತಿಗಳಿಗೂ ಆತ ಮೇಲ್ಪಂಕ್ತಿಯಾಗಿದ್ದಾನೆ ಎಂದು ಕವಿ, ವಿಮರ್ಶಕ ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ ತಿಳಿಸಿದರು.
    ಕರ್ನಾಟಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಮಾಲಿಕೆಯಲ್ಲಿ ಕನ್ನಡ ಚಿಂತನೆ ಅಂದು-ಇಂದು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರೂ ಪಂಪ ಮಹಾಕಾವ್ಯ ರಚನೆ ಮಾಡಿದ್ದು ಕನ್ನಡದಲ್ಲೇ. ಇದು ಆತನ ಭಾಷಾ ಪ್ರೇಮಕ್ಕೆ ನಿದರ್ಶನವಾಗಿದೆ ಎಂದರು.
    ತನ್ನ ಕಾವ್ಯದ ನಾಯಕ ಅರ್ಜುನನೊಂದಿಗೆ ಆಶ್ರಯದಾತ ಅರಿಕೇಸರಿಯನ್ನೂ ಸಮೀಕರಿಸಿ ಸಾಹಿತ್ಯ ರಚಿಸಿದ ಪಂಪ ನಾಡು, ನುಡಿಯ ಹಿರಿಮೆ ಸಾರಿದ್ದಾನೆ. ಅನೇಕ ಕಟ್ಟುಗಳ ನಡುವೆಯೂ ಪಟ್ಟು ಬಿಡದ ಜಟ್ಟಿಯಂತೆ ಪಂಪ ಸೃಜನಶೀಲತೆ ಮೆರೆದಿದ್ದಾನೆ ಎಂದು ಅಭಿಪ್ರಾಯಪಟ್ಟರು.
    ಎಲ್ಲ ಭಾಷೆಗಳು ನಮಗೆ ಆಗತ್ಯ. ಆದರೆ ಮಾತೃಭಾಷೆ ಅನಿವಾರ್ಯ. ಎಷ್ಟೇ ಭಾಷಾ ಪಾಂಡಿತ್ಯ ಹೊಂದಿದ್ದರೂ ತಮ್ಮ ಮಾತೃಭಾಷೆಯಲ್ಲಿ ಪ್ರೀತಿ, ಸಿಟ್ಟು ವ್ಯಕ್ತಪಡಿಸುವುದು ಸುಲಲಿತವೆನಿಸುತ್ತದೆ. ಇದನ್ನು ನಮ್ಮ ಸಾಹಿತಿಗಳ ಕೃತಿ ರಚನೆಯಲ್ಲೂ ಕಾಣಬಹುದಾಗಿದೆ. ಯಾವುದೋ ದೇಶ, ರಾಜ್ಯದ ತನ್ನ ಕಥಾನಾಯಕನನ್ನು ತಮ್ಮ ಪ್ರದೇಶಕ್ಕೆ ಸಮೀಕರಿಸಿ ಅನೇಕರು ಸಾಹಿತ್ಯ ರಚಿಸಿರುವುದನ್ನು ನಾವು ಕಾಣಬಹುದಾಗಿದೆ ಎಂದರು.
    ಹಂಪಿ ಹೊರತಾದ ರಾಘವಾಂಕನ ಕಾವ್ಯ, ಸಾಧನಕೇರಿಯನ್ನು ಬಿಟ್ಟು ದ.ರಾ.ಬೇಂದ್ರ ಅವರ ಸಾಹಿತ್ಯ, ಮಲೆನಾಡಿನಿಂದ ಹೊರತಾದ ಕುವೆಂಪು ಅವರ ಸಾಹಿತ್ಯವನ್ನು ಕಾಣಲು ಸಾಧ್ಯವಿಲ್ಲ. ರಾಘವಾಂಕನ ಕಾವ್ಯದ ನಾಯಕ ಹರಿಶ್ಚಂದ್ರ ಮೂಲತಃ ಉತ್ತರ ಭಾರತದವನು. ಆದರೆ ಆತ ಬೇಟೆಯಾಡುತ್ತಾ ಕರ್ನಾಟಕದ ಹಂಪಿಗೆ ಬರುತ್ತಾನೆ ಎಂಬ ಪರಿಕಲ್ಪನೆಯೇ ವಿಶಿಷ್ಟ ಎಂದು ಹೇಳಿದರು.
    ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts