ತುಮಕೂರು : ಗೂಗಲ್ ಮೀಟ್ ಆಪ್ನಲ್ಲಿ ಆಯೋಜಿಸಿದ್ದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಗೊಂದಲದ ಗೂಡಾಗಿತ್ತು. ಅಧಿಕೃತ ವರ್ಚುಚಲ್ ಸಭೆಯಲ್ಲಿ ಪತಿರಾಯ ಕಾಣಿಸಿಕೊಂಡಿದ್ದು ಸಭೆಯ ಗಂಭೀರತೆಗೆ ಕನ್ನಡಿ ಹಿಡಿದಂತಿತ್ತು. ಸಾಮೂಹಿಕವಾಗಿ ಬೇನಾಮಿ ಹೆಸರಲ್ಲಿ ನಂದಿನಿ ಹಾಲಿನ ಬೂತ್ ಆರಂಭಿಸುವ ಕಾಪೋರೇಟರ್ಗಳ ಆಸೆ ಸದ್ಯಕ್ಕೆ ಕೈಗೂಡಲಿಲ್ಲ. ಇನ್ನೂ ರಸ್ತೆ, ವೃತ್ತಗಳ ನಾಮಕರಣ ಪ್ರಸ್ತಾವನೆ ವಿಷಯವನ್ನು ಸಹ ಮುಂದೂಡಲಾಯಿತು.
ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುಕೊಳ್ಳುವ ಹಿತದೃಷ್ಟಿಯಿಂದ ಗೂಗಲ್ ಮೀಟ್ ಆಪ್ ಮೂಲಕ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಬ್ಬರು ಚರ್ಚೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮತ್ತೊಬ್ಬರು ಮ್ಯೂಟ್ ಮಾಡಿಕೊಳ್ಳದೇ ಇದ್ದದು ಯಾರು ಏನು ಹೇಳುತ್ತಾರೆ ಎಂಬುದು ಕೇಳಿಸದಂತಾಯಿತು. ಇನ್ನೂ ಸದಸ್ಯರು ಅಜೆಂಡಾದಲ್ಲಿ ಪ್ರಸ್ತಾಪಿಸಿದ್ದ ಯಾವುದೇ ಅಭಿವೃದ್ಧಿ ವಿಷಯಗಳನ್ನು ಕೈಗೆತ್ತಿಕೊಳ್ಳಲಾಗಲಿಲ್ಲ. ಸ್ಮಾರ್ಟ್ಸಿಟಿ, ಲೋಕೋಪಯೋಗಿ, ಬೆಸ್ಕಾಂ ಅಧಿಕಾರಿಗಳು ಆನ್ಲೈನ್ ಸಭೆಗೂ ಗೈರಾಗಿದ್ದರಿಂದ ಕರೊನಾ ವಿಚಾರ ಚರ್ಚೆಗಷ್ಟೇ ಸಭೆ ಸೀಮಿತವಾಯಿತು.
ಪ್ರತೀ ವಾರ್ಡ್ಗೆ 1500 ಆಹಾರ ಕಿಟ್: ನೂತನ ಪ್ರತಿಪಕ್ಷ ನಾಯಕ ಕಾಂಗ್ರೆಸ್ನ ಜೆ.ಕುಮಾರ್ ಮಾತನಾಡಿ, ಪ್ರತೀ ವಾರ್ಡ್ನ 1500 ಅರ್ಹ ಬಡಕುಟುಂಬಗಳಿಗೆ ಪಾಲಿಕೆಯ ಅಥವಾ ಜಿಲ್ಲಾಡಳಿತ ನೆರವಿನಿಂದ ನೀಡಬೇಕಿದೆ ಎಂದು ಸಲಹೆಯಿತ್ತರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಂಸದ ಜಿ.ಎಸ್.ಬಸವರಾಜು, ಇದು ಒಳ್ಳೆಯ ಸಲಹೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸೂಚಿಸಿದರು. ನಗರದ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಪಿಡ್ ಆಂಟಿಜನ್ ಟೆಸ್ಟ್ (ರ್ಯಾಟ್) ಮಾಡಲು ಕ್ರಮವಹಿಸಬೇಕು. ಇದರಿಂದ ಸೋಂಕು ಹರಡದಂತೆ ಎಚ್ಚರವಹಿಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಭೆಯಲ್ಲೂ ಪ್ರಸ್ತಾಪಿಸಿದ್ದು ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಬೇಸರಿಸಿದರು. ಪಾಲಿಕೆ ಆಯುಕ್ತೆ ರೇಣುಕಾ ಪ್ರತಿಕ್ರಿಯಿಸಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಟ್ ಟೆಸ್ಟ್ ನಡೆಸಲು ಆರೋಗ್ಯಾಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ ಕೋವಿಡ್ ನಿರ್ವಹಣೆ ಮತ್ತಷ್ಟು ಸಮರ್ಪಕವಾಗಿ ನಡೆಯಬೇಕು. ಕನಿಷ್ಠ 3 ವಾರ್ಡ್ ಗಳಿಗೆ ಒಂದರಂತೆ ಕರೊನಾ ಆರೈಕೆ ಕೇಂದ್ರ ಆರಂಭಿಸಿ ಹೋಂ ಐಸೋಲೇಷನ್ನಲ್ಲಿರೊ ಸೋಂಕಿತರಿಗೆ ಆರೈಕೆ ಕೇಂದ್ರಲ್ಲಿಯೇ ಚಿಕಿತ್ಸೆ ನೀಡಬೇಕು. ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆಯೂ ಸಮರ್ಪಕವಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜಿಮಾಬಿ, ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ನಯಾಜ್, ನಳಿನಾ, ಧರಣೇಂದ್ರಕುಮಾರ್ ಉಪಸ್ಥಿತರಿದ್ದರು. ಸಭೆ ಆರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಕರೊನಾದಿಂದ ಮೃತಪಟ್ಟ ಪಾಲಿಕೆ ಪೌರಕಾರ್ವಿುಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪತಿರಾಯ ಪ್ರತ್ಯಕ್ಷ : ಅಧಿಕೃತ ವರ್ಚುಯಲ್ ಸಭೆಯಲ್ಲಿ ಬಿಜೆಪಿ ಕಾಪೋರೇಟರ್ ಚಂದ್ರಕಲಾ ಬದಲು ಅವರ ಪತಿ ಪುಟ್ಟರಾಜು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು. ಸಭೆಯ ಗಂಭೀರತೆಯನ್ನೇ ಅರಿಯದ ಪುಟ್ಟರಾಜು ಪತ್ನಿಗೆ ಮಾತನಾಡಲು ಅವಕಾಶ ನೀಡದೆ ತಾವು ವಿಷಯಗಳನ್ನು ಪ್ರಸ್ತಾಪಿಸಿದ್ದು ಎಲ್ಲರನ್ನೂ ತಬ್ಬಿಬ್ಬುಗೊಳಿಸಿದರು. ಪಕ್ಷಪಾತಕ್ಕೆ ಆಕ್ಷೇಪ ನನ್ನ ವಾರ್ಡ್ನಲ್ಲಿ 24 ಮಣ್ಣಿನ ರಸ್ತೆಗಳಿವೆ. ಉಳಿದಂತೆ ಇರುವ 21 ಡಾಂಬರ್ ಹಾಗೂ 3 ಸಿಮೆಂಟ್ ರಸ್ತೆಗಳು ಶಿಥಿಲಗೊಂಡಿವೆ. ಚರಂಡಿಗಳು ಸಮರ್ಪಕವಾಗಿಲ್ಲ. ಯುಜಿಡಿ ಕಥೆ ಕೇಳುವಂತಿಲ್ಲ. ಕೆಲವು ವಾರ್ಡ್ಗಳಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆದರೆ, ನನ್ನ ವಾರ್ಡ್ ಅಭಿವೃದ್ಧಿ ಕಾಮಾಗಾರಿಗಳಿಂದ ದೂರ ಉಳಿದಿದೆ. ತಾರತಮ್ಯ ಮಾಡಲಾಗುತ್ತಿದೆ ಎಂದು ಜೆಡಿಎಸ್ ಸದಸ್ಯ ಲಕ್ಷ್ಮೀನರಸಿಂಹರಾಜು ಅಸಮಾಧಾನ ಹೊರಹಾಕಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಸಹ ಧ್ವನಿಗೂಡಿಸಿದರು. ಮೇಯರ್ ಬಿ.ಜಿ.ಕೃಷ್ಣಪ್ಪ ಪ್ರತಿಕ್ರಿಯಿಸಿ ಎಲ್ಲ ವಾರ್ಡ್ಗಳಿಗೂ ಸಮಾನವಾಗಿ ಕಾಮಗಾರಿ ಹಂಚಿಕೆ ಮಾಡಲಾಗುವುದು. ಉಳಿಕೆ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕ್ರಮವಹಿಸುವುದಾಗಿ ಭರವಸೆಯಿತ್ತರು.
ಆಯುಕ್ತರ ಕಚೇರಿಯಲ್ಲಿ ಮೇಯರ್ ಟೀಂ : ಆಯುಕ್ತರ ಕಚೇರಿಯಲ್ಲಿ ಮೇಯರ್ ಬಿ.ಜಿ.ಕೃಷ್ಣಪ್ಪ ಆಂಡ್ ಟೀಂ ಸಭೆಯಲ್ಲಿ ಭಾಗವಹಿಸಿತ್ತು. ಆಯುಕ್ತೆ ರೇಣುಕಾ, ಉಪಮೇಯರ್ ನಾಜಿಮಾಬಿ ಜತೆಗೆ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕ ಜೆ.ಕುಮಾರ್ ಭಾಗವಹಿಸಿದ್ದರು. ಇವರನ್ನು ಸಂಸದ ಜಿ.ಎಸ್.ಬಸವರಾಜು ಸೇರಿಕೊಂಡರು.