More

    ಪಕ್ಷಭೇದ ಮರೆತು ಅರ್ಹರಿಗೆ ಸೌಲಭ್ಯ ನೀಡಿ: ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳಿಗೆ ಸೂಚನೆ

    ಹೊಸಕೋಟೆ: ಆತ್ಮಸಾಕ್ಷಿಗೆ ವಿರುದ್ಧವಾದ ಕೆಲಸ ಮಾಡಲು ನಾನು ಯಾರಿಗೂ ಒತ್ತಾಯ ಮಾಡೊದಿಲ್ಲ, ಆದರೆ ಪಕ್ಷಬೇಧ ಮರೆತು ಎಲ್ಲ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಎಲ್ಲ ಸವಲತ್ತುಗಳನ್ನು ನೀಡಲೇಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಇಒ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
    ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು ಒಂದಾಗಿ ಯೋಜನೆಗಳಲ್ಲಿ ಬರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳಿದ್ದು, ಮುಂದೆ ಈ ರೀತಿಯ ದೂರು ಬಾರದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

    ತಾಲೂಕಿನಲ್ಲಿ ನೀರಿನ ಸಮಸ್ಯೆ ಇದ್ದು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳ ಮಾಹಿತಿ ಪಡೆದು ಸರಿಪಡಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಿ ಆದಷ್ಟು ಬೇಗ ಟ್ಯಾಂಕರ್ ನೀರಿನ ಸರಬರಾಜನ್ನು ನಿಲ್ಲಿಸಿ ಗ್ರಾಮಗಳಿಗೆ ಸೂಕ್ತ ಕೊಳವೆ ಬಾವಿ ನೀರಿನ ಸರಬರಾಜಿಗೆ ಕ್ರಮ ಕೈಗೊಳ್ಳಬೇಕಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.

    ತಾಲೂಕಿನಾದ್ಯಂತ ಸುಮಾರು 286 ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಅದರಲ್ಲಿ ಕೇವಲ 8 ಘಟಕಗಳು ರಿಪೇರಿಯಾಗಿವೆ, ಉಳಿದವುಗಳನ್ನು ಆದಷ್ಟು ಬೇಗ ರಿಪೇರಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ ಬೇಸಿಗೆಯಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬಾರದಂತೆ ಕ್ರಮವಹಿಸಬೇಕಿದೆ ಎಂದರು.

    2018-19ನೇ ಸಾಲಿನ ವಸತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಯೋಜನೆಯ ಸಂಪೂರ್ಣ ಪ್ರಗತಿ ಸಾಧಿಸಲಾಗಿಲ್ಲ ಹಾಗೂ 2019-20ರ ಹಣಕಾಸು ವರ್ಷದಲ್ಲಿ ವಸತಿ ಯೋಜನೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಮನವಿ ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

    ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ್‌ಗೌಡ, ಜಿಪಂ ಸದಸ್ಯ ಮಂಜುನಾಥ್, ತಾಪಂ ಸದಸ್ಯ ಡಿ.ಟಿ.ವೆಂಕಟೇಶ್, ಸರ್ಕಾರಿ ಆಸ್ಪತ್ರೆ ಆರೋಗ್ಯಾಧಿಕಾರಿ ಡಾ.ಸತೀಶ್ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts