ಪಾಕಿಸ್ತಾನವೇ ದಿವಾಳಿ..ಇನ್ನು ಮಾಲ್ಡೀವ್ಸ್‌ಗೆ ನೆರವು ನೀಡುತ್ತದೆಯಂತೆ!

pak
Published on

ಇಸ್ಲಾಮಾಬಾದ್​: 'ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ' ಎಂಬ ಮಾತು ಪಾಕಿಸ್ತಾನಕ್ಕೆ ಸರಿಹೊಂದುತ್ತದೆ. ಆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ದಿವಾಳಿಯಾಗಿದೆ. ಆದರೂ ಬಿಲ್ಡಪ್​ ಕೊಟ್ಟುಕೊಳ್ಳುವುದರಲ್ಲಿ ಬಹುಷಃ ಈ ದೇಶ ಬಿಟ್ಟರೆ ಜಗತ್ತಿನಲ್ಲಿ ಮತ್ತಿನ್ಯಾವ ದೇಶವೂ ಸಿಗುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ದಿವಾಳಿಯಾಗಿರುವ ದೇಶ ಇದೀಗ ಮಾಲ್ಡೀವ್ಸ್‌ಗೆ ಸಹಾಯ ಮಾಡುವುದಾಗಿ ಘೋಷಿಸಿ ನಗೆಪಾಟಲಿಗೆ ಈಡಾಗಿದೆ.

ಪಾಕಿಸ್ತಾನದಲ್ಲಿ ಜನ ಒಪ್ಪೊತ್ತಿನ ರೊಟ್ಟಿಗೂ ಪರದಾಡುತ್ತಿದ್ದರೆ, ಗುರುವಾರ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಮತ್ತು ಪಾಕಿಸ್ತಾನದ ಪ್ರಧಾನಿ ಅನ್ವರ್ ಉಲಕ್ ಕಾಕರ್ ಅವರು ದೂರವಾಣಿ ಸಂಭಾಷಣೆ ನಡೆಸಿದ್ದು, ಈ ಸಂದರ್ಭದಲ್ಲಿ, ಎರಡೂ ದೇಶಗಳ ಆದ್ಯತೆಗಳು ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸಹಕಾರದ ಬಗ್ಗೆ ಚರ್ಚಿಸಲಾಯಿತು. ಮಾಲ್ಡೀವ್ಸ್ ಅಭಿವೃದ್ಧಿಗೆ ಅಗತ್ಯ ನೆರವು ನೀಡುವುದಾಗಿ ಪಾಕಿಸ್ತಾನದ ಪ್ರಧಾನಿ ಭರವಸೆ ನೀಡಿದ್ದಾರೆ.

ಇದಲ್ಲದೆ, ಪರಿಸರ ಬದಲಾವಣೆಗಳ ಸವಾಲುಗಳನ್ನು ಎದುರಿಸಲು ದೇಶಕ್ಕೆ ಸಹಾಯ ಮಾಡುತ್ತದೆ ಎಂದು ಮಾಲ್ಡೀವ್ಸ್​ಗೆ ಅನ್ವರ್​ ಭರವಸೆ ನೀಡಿದ್ದಾರೆ.

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು 1966 ರಲ್ಲಿ ಪ್ರಾರಂಭವಾದವು. ಮಾಲ್ಡೀವ್ಸ್‌ನ ಪ್ರಸ್ತುತ ಅಧ್ಯಕ್ಷ ಮುಯಿಝು ಚೀನಾಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಮತ್ತೊಂದೆಡೆ, ಇಸ್ಲಾಮಾಬಾದ್ ಮತ್ತು ಬೀಜಿಂಗ್ ನಡುವೆ ಬಲವಾದ ಸಂಪರ್ಕವಿದೆ.

ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇತ್ತೀಚೆಗೆ ಚೀನಾಗೆ 2 ಬಿಲಿಯನ್ ಡಾಲರ್ ಸಾಲ ಕೇಳಿತ್ತು. ಈ ಕುರಿತು ಹಂಗಾಮಿ ಪ್ರಧಾನಿ ಅನ್ವರ್ ಅವರು ಚೀನಾದ ಪ್ರಧಾನಿ ಕಿಯಾಂಗ್ ಅವರಿಗೆ ಪತ್ರ ಬರೆದಿದ್ದಾರೆ. ಐಎಂಎಫ್​ ಪಾಕಿಸ್ತಾನದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 2 ರಷ್ಟು ಕಡಿತಗೊಳಿಸಿದೆ. ಮತ್ತು ಅಲ್ಲಿನ ಸರ್ಕಾರವು ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಅನ್ನು ಮಾರಾಟ ಮಾಡಲು ಮತ್ತು ಕೆಲವು ಹಣಕಾಸಿನ ತೊಂದರೆಗಳನ್ನು ಪರಿಹರಿಸಲು ಆಶಿಸುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಮಾಲ್ಡೀವ್ಸ್​ಗೆ ಸಾಲ ಘೋಷಿಸಿರುವುದು ಪಾಕಿಸ್ತಾನಿಗಳೇ ಅಪಹಾಸ್ಯ ಮಾಡುತ್ತಿದ್ದಾರೆ.

ಬಜೆಟ್‌ನಲ್ಲಿ ಕಡಿತ: ಇತ್ತೀಚೆಗೆ ಭಾರತದ ತಾತ್ಕಾಲಿಕ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ನೀಡಲಾಗುತ್ತಿದ್ದ ವಾರ್ಷಿಕ ನೆರವನ್ನು ಕಡಿತಗೊಳಿಸಲಾಗಿದೆ. 2024-25ನೇ ಹಣಕಾಸು ವರ್ಷಕ್ಕೆ 600 ಕೋಟಿ ಮಂಜೂರು ಮಾಡಲಾಗಿದೆ. 2023-24ರಲ್ಲಿ 770.90 ಕೋಟಿ ರೂ. ಆರಂಭದಲ್ಲಿ ಇದನ್ನು ರೂ.400 ಕೋಟಿಗೆ ಸೀಮಿತಗೊಳಿಸಲಾಗಿತ್ತು, ಆದರೆ ನಂತರ ಅದನ್ನು ಪರಿಷ್ಕರಿಸಿ ಹೆಚ್ಚಿಸಲಾಯಿತು. 2022-23 ರಲ್ಲಿ ರೂ. 183 ಕೋಟಿ ಮಾತ್ರ. ಹಲವಾರು ವರ್ಷಗಳಿಂದ ಭಾರತವು ಆ ದೇಶಕ್ಕೆ ಅತ್ಯಧಿಕ ನೆರವು ನೀಡುತ್ತಿದೆ. ವಿಶೇಷವಾಗಿ ರಕ್ಷಣೆ, ಶಿಕ್ಷಣ, ವೈದ್ಯಕೀಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನವದೆಹಲಿ ಕೊಡುಗೆ ನೀಡುತ್ತಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ ಇತ್ತೀಚೆಗೆ ನೆರವನ್ನು ಕಡಿತಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net