More

    ಮನಸ್ಸಾಕ್ಷಿಯನ್ನು ಮೂಡಿಸುವ ಚಿತ್ರಕಲೆ

    ಶಿರಸಿ: ಕಲಾವಿದನ ಜತೆ ವೀಕ್ಷಕನಲ್ಲಿ ಮನಸ್ಸಾಕ್ಷಿಯನ್ನು ಮೂಡಿಸುವ ಕಲೆ ಚಿತ್ರಕಲೆಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಗಣಪತಿ ಭಟ್ಟ ವರ್ಗಾಸರ ಹೇಳಿದರು.

    ನಗರದ ನೆಮ್ಮದಿ ಕುಟೀರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ದೃಶ್ಯಕಲಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಕಲ್ಪನೆಯ ಭೂಮಿಕೆ ಭದ್ರವಾದಷ್ಟೂ ಆ ಕಲಾವಿದನ ಚಿತ್ರ ವಿಶಿಷ್ಟ ಆಗಿರುತ್ತದೆ. ನಿರಂತರ ಅಭ್ಯಾಸದ ಮೂಲಕವೇ ಚಿತ್ರಕಲೆ ಮೇರು ಸ್ಥಾನಕ್ಕೇರುತ್ತದೆ. ಸಂಗೀತಕ್ಕೆ ನೀಡುವ ಪರಿಶ್ರಮ ಚಿತ್ರಕಲೆಗೂ ಬೇಕು ಎಂದ ಅವರು, ಸರಳತೆ ಹಾಗೂ ಸೌಂದರ್ಯದ ಅನುಭೂತಿ, ಕಲೆಯ ಕುರಿತ ಆಸಕ್ತಿ ಕಲಾವಿದರಿಗೆ ಇರಬೇಕು. ಹಾಗಿದ್ದರೆ ತಂತಾನೇ ಕಲಾವಿದ ಮೇಲೇಳುತ್ತಾನೆ ಎಂದರು. ಯಾವ ಕಲಾವಿದನೂ ಶ್ರೇಷ್ಠವೂ ಅಲ್ಲ, ಜೇಷ್ಠವೂ ಅಲ್ಲ ಎಂಬುದನ್ನು ಮೊದಲು ಅರಿಯಬೇಕು. ಜತೆ, ಸ್ವಪ್ರತಿಭೆಯ ಮೂಲಕ ಶ್ರೇಯಸ್ಸು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

    ಲಲಿತಕಲಾ ಅಕಾಡೆಮಿ ಸದಸ್ಯ ಸಂಚಾಲಕ ಗಣೇಶ ಧಾರೇಶ್ವರ ಮಾತನಾಡಿ, ವಿಶ್ವ ಶ್ರೇಷ್ಠ ಚಿತ್ರ ಕಲಾವಿದ ಲಿಯೊನಾರ್ಡೆ ಡಾವಿಂಚಿ ಜನ್ಮದಿನದ ಅಂಗವಾಗಿ ವಿಶ್ವ ದೃಶ್ಯಕಲಾ ದಿನಾಚರಣೆ ಆಚರಿಸಲಾಗುತ್ತಿದೆ. ಆಯಾ ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಯಬೇಕು, ಆಮೂಲಕ ಚಿತ್ರ ಪ್ರಪಂಚದ ಪರಿಚಯ ಆಗಬೇಕು ಎಂಬ ಉದ್ದೇಶಕ್ಕೆ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.

    ನೆಮ್ಮದಿ ಕುಟೀರದ ವಿ.ಪಿ.ಹೆಗಡೆ, ಪತ್ರಕರ್ತ ಅಶೋಕ ಹಾಸ್ಯಗಾರ, ವ್ಯಂಗ್ಯಚಿತ್ರಕಾರ ನೀರ್ನಳ್ಳಿ ಗಣಪತಿ ಇದ್ದರು. ಇದಕ್ಕೂ ಪೂರ್ವದಲ್ಲಿ ನಡೆದ ಚಿತ್ರ ರಚನೆಯಲ್ಲಿ ಜಿ.ಎಂ.ಹೆಗಡೆ ತಾರಗೋಡ, ಸತೀಶ ಯಲ್ಲಾಪುರ, ಜಿ.ಎಂ.ಬೊಮ್ನಳ್ಳಿ, ಕೌಶಿಕ ಹೆಗಡೆ, ಕಿಶೋರ ನೇತ್ರೇಕರ, ಪ್ರಕಾಶ ನಾಯಕ, ಸತೀಶ ಎಲೆಸರ, ನೀರ್ನಳ್ಳಿ ಗಣಪತಿ, ರಂಜಿತಾ ಭಟ್ಟ ಕಲ್ಲಳ್ಳಿ ಹಾಗೂ ಇತರರಿದ್ದರು. ಜಿ.ಎಂ.ಬೊಮ್ನಳ್ಳಿ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಉತ್ತರ ಕನ್ನಡ ಜಿಲ್ಲಾ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts