More

    ಪಡುಮಲೆ ಕ್ಷೇತ್ರದಲ್ಲಿ ನಿಂತು ಹೋಗಿದ್ದ ಪೂಜೆ ಆರಂಭಗೊಳ್ಳುತ್ತಿದ್ದಂತೆ ಕಂಡುಬಂತು ನಾಗ ಸಂಚಾರ

    ಪುತ್ತೂರು: 500 ವರ್ಷದಿಂದ ಪಡುಮಲೆ ಸಾನ್ನಿಧ್ಯದಲ್ಲಿ ನಿಂತಿದ್ದ ಪೂಜಾ ವಿಧಿ ವಿಧಾನಗಳಿಗೆ ಏ.24ರ ಮೀನ ಮುಹೂರ್ತದಲ್ಲಿ ಸೀಮಿತ ಭಕ್ತರ ಸಮ್ಮುಖದಲ್ಲಿ ಚಾಲನೆ ದೊರೆಯಿತು. ಕುಂಬಳೆ ಸೀಮೆ ಅರ್ಚಕರ ವೇದಘೋಷ ಆರಂಭಗೊಳ್ಳುತ್ತಿದ್ದಂತೆ ಪಡುಮಲೆ ಸಾನ್ನಿಧ್ಯದ ಸುತ್ತಮುತ್ತ ನಾಗಗಳ ಸಂಚಾರ ಕಂಡುಬಂದಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿತು.

    ದೈವಜ್ಞರಿಂದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ತಲೆಯಲ್ಲಿ ನಾಗಾಭರಣದ ಕಿರೀಟವನ್ನು ಧರಿಸಿ ಅಶ್ವಾರೂಢ ಭಂಗಿಯಲ್ಲಿರುವ, ಪ್ರತೀ ಕೋಟಿಚೆನ್ನಯ ಗರಡಿಗಳಲ್ಲಿ ಆರಾಧನೆಯಾಗುತ್ತಿರುವ (ಬೆರ್ಮೆರೆ ಗುಂಡ), ಕೋಟಿಚೆನ್ನಯರ ಕುಲದೇವರಾದ ನಾಗಬೆರ್ಮೆರ್ ಅವರ ಶಿಲಾಮಯವಾದ ಮೂಲಸ್ಥಾನ, ಜತೆಗೆ ಬಲಬದಿಯಲ್ಲಿ ಚಿತ್ರಕೂಟ ಸಂಕಲ್ಪದಲ್ಲಿ ನಾಗಬ್ರಹ್ಮ, ನಾಗಕನ್ನಿಕೆ, ನಾಗರಾಜ ಮತ್ತು ನಾಗ ಸನ್ನಿಧಿ ಮತ್ತು ಎಡಬದಿಯಲ್ಲಿ ರಕ್ತೇಶ್ವರಿ ದೈವಸ್ಥಾನ ನಿರ್ಮಾಣವಾಗಿದೆ. ಮುಂಭಾಗದಲ್ಲಿ ಅರಮನೆ ವತಿಯಿಂದ ಅಂತ್ಯ ಸಂಸ್ಕಾರಗೊಂಡ ದೇಯಿಬೈದೆತಿಯ ಸಮಾಧಿ ಸ್ಥಳ, ದೈವೀಶಕ್ತಿಯ ನಾಗಗಳು ನೀರು ಕುಡಿಯುವ ಪವಿತ್ರ ತೀರ್ಥ ಸ್ಥಳ ನವೀಕರಣಗೊಂಡಿದೆ.

    ಪ್ರತಿಷ್ಠಾಪನೆ ಮುಂದೂಡಲು ಅಸಾಧ್ಯ: ಪಡುಮಲೆ ಕೋಟಿ- ಚೆನ್ನಯ ಜನ್ಮಸ್ಥಾನ ಹಾಗೂ ಮೂಲಸ್ಥಾನದಲ್ಲಿ ನಾಗಬೆರ್ಮೆರ ಗುಡಿ, ನಾಗಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಹಾಗೂ ದೇಯಿ ಬೈದೆತಿ ಸಾನ್ನಿಧ್ಯದ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಏ.22ರಿಂದ 24 ರವರೆಗೆ ನಡೆಸಲು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ತೀರ್ಮಾನಿಸಿದ್ದು, ಕೋವೀಡ್ ನಿಯಮದಿಂದ ಕಾರ್ಯಕ್ರಮ ಮುಂದೂಡಲು ಚಿಂತನೆ ನಡೆಸಲಾಗಿತ್ತು. ಆದರೆ 500 ವರ್ಷದಿಂದ ಪಡುಮಲೆ ಸಾನ್ನಿಧ್ಯದಲ್ಲಿ ನಿಂತಿದ್ದ ಆರಾಧನೆ ಆರಂಭಕ್ಕೆ ಏ.24ರ ಮೀನ ಸುಮುಹೂರ್ತವೇ ಶ್ರೇಷ್ಠ ಕಾಲ. ಒಂದು ವೇಳೆ ಈ ಕಾಲಗಟ್ಟದಲ್ಲಿ ಪಡುಮಲೆ ಸಾನ್ನಿಧ್ಯದಲ್ಲಿ ಆರಾಧನಾ ಕ್ರಮಗಳು ಆರಂಭಗೊಳ್ಳದಿದ್ದರೆ ಮುಂದಿನ 5-6 ಶತಮಾನಗಳವರೆಗೆ ಮತ್ತೆ ಕಾಯಬೇಕಿದೆ ಎಂಬ ಮಾತು ಪ್ರಶ್ನಾ ಚಿಂತನೆಯಲ್ಲಿ ಮೂಡಿಬಂತು.

    ಕುಂಬ್ಳೆ ಸೀಮೆಗೆ ಮೂಲ ನಾಗಸ್ಥಾನ: 500 ವರ್ಷಗಳ ಹಿಂದೆಯೇ ಪಡುಮಲೆಯಲ್ಲಿ ನಾಗಾರಾಧನೆ ಕ್ಷೇತ್ರವಿತ್ತು. ಸಾವಿರಾರು ನಾಗಗಳು ಜನರಿಗೆ ದರುಶನ ನೀಡುತ್ತಿದ್ದವು ಎಂಬ ಪ್ರತೀತಿ ಇದೆ. ಕಾಲಾನಂತರ ಪೂಜಾ ವಿಧಿವಿಧಾನ ನಿಂತು ಹೋಗಿ ಕ್ಷೇತ್ರ ಪಾಳುಬಿದ್ದಿತ್ತು. ಈ ಹಿಂದೆ ಪಡುಮಲೆಯಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಪಡುಮಲೆಯಲ್ಲಿ ಕೋಟಿಚೆನ್ನಯರು ಆರಾಧಿಸಿಕೊಂಡು ಬರುತ್ತಿದ್ದ ನಾಗಬ್ರಹ್ಮ ನಾಗರಾಜ ನಾಗಯಕ್ಷಿಣಿ ಮತ್ತು ನಾಗ ಕೆತ್ತನೆಗಳಿರುವ ಅದ್ಭುತವಾದ ನಾಗಪ್ರತಿಮೆಗಳು ಪತ್ತೆಯಾದವು. ಆ ಸಂದರ್ಭ ಅಲ್ಲಿ ಸಾಕ್ಷಾತ್ ನಾಗರಹಾವೇ ಗೋಚರಿಸಿ ಭಕ್ತರಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರೇರೇಪಿಸಿತು.

    ನಾಗಗಳಿಂದ ದರುಶನ: ಸುಮಾರು 40 ವರ್ಷಗಳ ಹಿಂದೆ ಮಂಗಳೂರಿನ ಹಂಪನಕಟ್ಟೆ ಉದ್ಯಮಿ ಜೆ.ವಿ ಸೀತಾರಾಮ್ ಅವರು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ನಾಗನ ನೆಲೆಯನ್ನು ಅಭಿವೃದ್ಧಿಪಡಿಸಲು ಮುಂದಾದರು. ಆದರೆ ಸುತ್ತು ಮುತ್ತಲಿನಲ್ಲಿ ನಾಗರಹಾವುಗಳ ಬರುವಿಕೆ ಮತ್ತು ಇರುವಿಕೆಯಿಂದ ಕೆಲಸಗಾರರು ಬೆದರಿ ಕ್ಷೇತ್ರ ನಿರ್ಮಾಣ ಸ್ಥಗಿತಗೊಂಡಿತು. ಏ.23ರ ಸಾಯಂಕಾಲ ಸಾನ್ನಿಧ್ಯದ ಪೂಜಾ ಕೈಂಕರ್ಯ ನಡೆಯುತ್ತಿರುವ ವೇಳೆ ನಾಗ, ಕೃಷ್ಣಸರ್ಪಗಳು ಅಲ್ಲಲ್ಲಿ ಗೋಚರಿಸಿ ಭಕ್ತರಲ್ಲಿ ಅಚ್ಚರಿ ಮೂಡಿಸಿತು. 500 ವರ್ಷಗಳ ಹಿಂದೆ ಸತ್ಯಧರ್ಮ ನ್ಯಾಯಗಳಿಂದ ಕೂಡಿದ್ದ ಪಡುಮಲೆ ರಾಜ್ಯದ ಜನರಿಗೆ ನಾಗಗಳು ದರುಶನ ನೀಡುತ್ತಿದ್ದಂತೆ ಪಡುಮಲೆ ಕ್ಷೇತ್ರದಲ್ಲಿ ಆರಾಧನೆ ಆರಂಭಗೊಳ್ಳುತ್ತಿತ್ತು ಎಂಬ ನಂಬಿಕೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts