More

    ಗುಡ್ಡಕ್ಕೆ ಸುರಂಗ ಕೊರೆದ ಕೃಷಿ ಸಾಹಸಿ ಅಮೈ ಮಹಾಲಿಂಗ ನಾಯ್ಕಗೆ ಪದ್ಮಶ್ರೀ ಪ್ರಶಸ್ತಿ

    ಮಂಗಳೂರು: ಗುಡ್ಡಕ್ಕೆ ಸುರಂಗ ಕೊರೆದು ಜೀವಜಲ ಪಡೆದು ಬೋಳುಗುಡ್ಡೆಯಲ್ಲಿ ಹಸಿರೆಬ್ಬಿಸಿದ ಅಪರೂಪದ ಸಾಹಸಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಅಡ್ಯನಡ್ಕ ಸಮೀಪದ ಅಮೈ ನಿವಾಸಿ 77 ವರ್ಷದ ಮಹಾಲಿಂಗ ನಾಯ್ಕ ಕೃಷಿಗೆ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದು ನೀರು ಪಡೆದು, ಅದನ್ನು ಕೆರೆಯಲ್ಲಿ ಸಂಗ್ರಹಿಸಿ ಅದನ್ನು ಗುರುತ್ವ ಬಲದ ಮೂಲಕ ತುಂತುರು ನೀರಾವರಿಯಾಗಿ ಕೃಷಿಗೆ ಹರಿಸಿ ಯಶಸ್ವಿಯಾದವರು.

    ಮೊದಲು ಅಡಕೆ, ತೆಂಗಿನ ಮರ ಏರುತ್ತ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡವರು 40 ವರ್ಷ ಹಿಂದೆ ಸ್ವಂತ ತೋಟದ ಕನಸುಕಂಡಿದ್ದರು, ಆದರೆ ಅವರಲ್ಲಿ ಭೂಮಿ ಇರಲಿಲ್ಲ. ಅವರು ಕೂಲಿಗೆ ಹೋಗುತ್ತಿದ್ದ ಅಮೈ ಮಹಾಬಲ ಭಟ್ಟರೇ 2 ಎಕರೆ ಭೂಮಿಯನ್ನು ನಾಯ್ಕರಿಗೆ ನೀಡಿದರು. ಹೀಗೆ 1978ರಲ್ಲಿ ಅವರಿಗೆ ಭೂಮಿ ಸಿಕ್ಕಿತು. ಆದರೆ ಬೋಳುಗುಡ್ಡ ಜಾಗವದು, ಅಲ್ಲಿ ನೀರು ಸಿಗುವ ಸಾಧ್ಯತೆ ಇಲ್ಲ. ಹಾಗೆ ಮೆಲ್ಲನೆ ಗುಡಿಸಲು ಕಟ್ಟಿದರು, ಕುಡಿಯುವ ನೀರಿಗಾಗಿ ಪಕ್ಕದ ಮನೆಯ ಅವಲಂಬನೆ. ಅಲ್ಲಿ ಬಾವಿ ತೋಡುವುದೂ ಅಸಾಧ್ಯ. ಹಾಗಾಗಿ ಇದ್ದ ದಾರಿ ಒಂದೇ ಸುರಂಗ ಕೊರೆಯುವುದು. ಅರ್ಧದಿನ ಕೂಲಿ ಕೆಲಸ, ಉಳಿದ ಹೊತ್ತು ರಾತ್ರಿಯೂ ಸೇರಿ ಸುರಂಗ ಕೊರೆತ. ಸೀಮೆ ಎಣ್ಣೆ, ತೆಂಗಿನೆಣ್ಣೆ ದೀಪದ ಬೆಳಕಲ್ಲೇ ಸುರಂಗ ಕೊರೆದರು.

    ಮೊದಲ ಸುರಂಗದಲ್ಲಿ ನೀರು ಸಿಗಲಿಲ್ಲ. ಆ ಬಳಿಕ ಸತತ 25 ಮೀಟರ್ ಉದ್ದದ ಐದು ಸುರಂಗಗಳನ್ನು ಕೊರೆದರೂ ನೀರು ಸಿಗದೆ ಊರಿನವರಿಂದ ಗೇಲಿಗೊಳಗಾಗುವ ಸ್ಥಿತಿ. ನಿರಾಶರಾಗದೆ 6ನೇ ಸುರಂಗದ ಕೆಲಸಕ್ಕೆ ಹೊರಟ ಅವರಿಗೆ ನೀರು ಸಿಕ್ಕಿತು. ಆದರೆ ಕೃಷಿಗೆ ಅದೂ ಸಾಲದು. ಅದರ ಪಕ್ಕ 7ನೇ ಸುರಂಗ ಕೊರೆದಾಗ ಉತ್ತಮ ನೀರಿನ ಸೆಲೆ ಸಿಕ್ಕಿತು. ಅದರಿಂದ ನೀರು ಸಂಗ್ರಹಿಸಲು ಮಣ್ಣಿನ ಕೆರೆ ನಿರ್ಮಿಸಿದರು. ಭತ್ತ, ಅಡಕೆ, ತೆಂಗು, ಬಾಳೆ ನೆಟ್ಟರು. ಆ ಮೂಲಕ ಯಶಸ್ವೀ ಜಲಸಾಧಕ, ಕೃಷಿಕರೆನಿಸಿಕೊಂಡವರಿಗೆ ಹಿಂದೆ 2018ರ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts