More

    ಕಲೆ ಉಳಿಸಿ ಘೊಷಣೆ ಭಾಷಣಕ್ಕಷ್ಟೇ ಸೀಮಿತ ಬೇಡ

    ಸಾಗರ: ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಎಂಬ ಘೊಷಣೆ ಭಾಷಣಕ್ಕೆ ಸೀಮಿತವಾಗದೇ ಅಕ್ಷರಶಃ ಅನುಷ್ಟಾನಕ್ಕೆ ಬಂದು ನೆಲಮೂಲದ ಕಲೆ ಉಳಿದರೆ ನಮ್ಮತನವನ್ನು ಶಾಶ್ವತವಾಗಿ ಉಳಿಸಿಕೊಳ್ಳಬಹುದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದರು.

    ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಕರ್ನಾಟಕ ಜಾನಪದ ಅಕಾಡೆಮಿ ಆಯೋಜಿಸಿದ್ದ ಜಾನಪದ ವರ್ತಮಾನದ ಸವಾಲುಗಳು, ಜನಪದ ಸಾಹಿತ್ಯ ಮತ್ತು ಮಹಿಳೆ ವಿಷಯ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

    ಜಾನಪದದಲ್ಲಿ ವೃತ್ತಿನಿರತ, ಪ್ರದರ್ಶನ, ಆರಾಧನಾ ಕಲೆಗಳಿವೆ. ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸುವ ಕೆಲಸ ಆಗಬೇಕು. ಶಕ್ತಿದೇವತೆಗಳ ಆರಾಧನೆ ಮೂಲಕ ಸಾಕಷ್ಟು ಸಂಪ್ರದಾಯಗಳು ಉಳಿದುಕೊಂಡು ಬಂದಿವೆ. ಜನಪದದ ನಂಬಿಕೆಗಳನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕು ಎಂದರು.

    ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಬಿ.ಟಾಕಪ್ಪ ಮಾತನಾಡಿ, ಜಾನದಪ ಕಲೆಯನ್ನು ಒಗ್ಗೂಡಿಸುವಲ್ಲಿ ವಿದ್ವಾಂಸರ ಪಾತ್ರ ಎಷ್ಟು ಮುಖ್ಯವೋ, ಕಲಾವಿದರ ಪಾತ್ರವೂ ಅಷ್ಟೇ ಮುಖ್ಯ. ಇಬ್ಬರನ್ನು ವರ್ಗೀಕರಿಸಿ ನೋಡುವ ಮನೋಭಾವ ಬಿಡಬೇಕು. ಜನಪದ ಕಲೆ ಬೆಳಗಾಗುವುದರಲ್ಲಿ ಕಲಿಯಲು ಸಾಧ್ಯವಿಲ್ಲ. ಅದಕ್ಕೆ ನಿರಂತರ ತಾಲೀಮು ಅವಶ್ಯ ಎಂದು ತಿಳಿಸಿದರು.

    ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಕಾರ್ಯಕ್ರಮ ಉದ್ಘಾಟಿಸಿದರು. 2019ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಉತ್ತರ ಕನ್ನಡ ಜಿಲ್ಲೆಯ ಹುಸೇನಾಬಿ ಬುಡೇನ್ ಸಾಬ್ ಸಿದ್ಧಿ ಮತ್ತು ಶಿವಮೊಗ್ಗ ಜಿಲ್ಲೆಯ ಸೋಬಾನೆ ಪದ ಕಲಾವಿದೆ ನಾಗಮ್ಮ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಬಿ.ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಲಾಯಿತು.

    ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿದರು. ನಗರಸಭೆ ಸದಸ್ಯರಾದ ಬಿ.ಎಚ್.ಲಿಂಗರಾಜ್, ಸಂತೋಷ್ ಶೇಟ್, ಜಾನಪದ ಅಕಾಡೆಮಿಯ ಪ್ರಕಾಶ್, ಪ್ರಾಚಾರ್ಯ ಡಾ. ಅಶೋಕ್ ಡಿ. ರೇವಣಕರ್, ಕನ್ನಡ ವಿಭಾಗದ ಮುಖಸ್ಥ ಡಾ. ಜಿ.ಸಣ್ಣಹನುಮಪ್ಪ ಇದ್ದರು. ಅಮೃತಾ ಪ್ರಾರ್ಥಿಸಿದರು. ಡಿ.ರಮೇಶ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯೆ ಪುಷ್ಪಲತಾ ಪ್ರಾಸ್ತಾವಿಕ ಮಾತನಾಡಿದರು. ವಸುಮತಿ ಸಿ. ಗೌಡ ವಂದಿಸಿದರು. ಎಸ್.ಎಂ.ಗಣಪತಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts