More

    ಕಗ್ಗ ತಳಿ ರಕ್ಷಣೆಗೆ ಆದ್ಯತೆ ಇರಲಿ

    ಕುಮಟಾ: ನಿಸರ್ಗದ ವೈಪರೀತ್ಯಗಳು, ವಾತಾವರಣದ ವಿಷಮ ಸಂದರ್ಭಗಳನ್ನು ಎದುರಿಸುವ ಕಗ್ಗದಂತಹ ವಿಶೇಷ ಪಾರಂಪರಿಕ ತಳಿಗಳನ್ನು ಉಳಿಸಿ ಬೆಳೆಸುವುದು ರೈತರ ಮೊದಲ ಆದ್ಯತೆಯಾಗಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಪಿ.ಎಲ್. ಪಾಟೀಲ ಹೇಳಿದರು.

    ಕೃಷಿ ವಿಶ್ವವಿದ್ಯಾಲಯ ಧಾರವಾಡ, ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಚೆನ್ನೈ, ಕೃಷಿ ಇಲಾಖೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕುಮಟಾ, ಕಾಗಾಲ, ಅಘನಾಶಿನಿ, ಮಾಣಿಕಟ್ಟಾ ಮತ್ತು ಸಮಸ್ತ ಕಗ್ಗ ಭತ್ತ ಬೆಳೆಗಾರರ ಒಕ್ಕೂಟ ಆಶ್ರಯದಲ್ಲಿ ತಾಲೂಕಿನ ಕಿಮಾನಿಯಲ್ಲಿ ಗುರುವಾರ ಆಯೋಜಿಸಿದ್ದ ಕಗ್ಗ ಭತ್ತದ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಗಜನಿಯಲ್ಲಿ ಉಪ್ಪು ನೀರಿನ ಸಮತೋಲನ ಕಾಯ್ದುಕೊಂಡರೆ ಕಗ್ಗ ಬೇಸಾಯವನ್ನು ಸಂರಕ್ಷಿಸಬಹುದು. ಈ ನಿಟ್ಟಿನಲ್ಲಿ ಇಲಾಖೆ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ವೈಜ್ಞಾನಿಕ ರೀತಿಯಲ್ಲಿ ಬೇಸಾಯ ಕ್ರಮಗಳನ್ನು ಅನುಸರಿಸಿ ಕೃಷಿ ಮಾಡಿದರೆ ರೈತರಿಗೆ ಎಷ್ಟು ಅನುಕೂಲವಾಗಲಿದೆ ಎಂಬುದನ್ನು ತಿಳಿಸಲು ಇಂಥ ಕ್ಷೇತ್ರೋತ್ಸವ ಪೂರಕವಾಗುತ್ತದೆ ಎಂದರು.

    ಕೃಷಿ ಡಿಪ್ಲೊಮಾ ಕಾಲೇಜ್ ಪ್ರಾಚಾರ್ಯ ಡಾ. ಜಿ.ವಿ. ನಾಯಕ ಮಾತನಾಡಿ, ಕಗ್ಗ ಭತ್ತ ಪ್ರಕೃತಿ ವಿಕೋಪದಿಂದ ನಲುಗಿದೆ. ಉತ್ತಮ ಗದ್ದೆಯಲ್ಲಿ ಶೇ. 57ರಷ್ಟು ಉಪ್ಪು ನೀರಿನ ಅಂಶ ಕಂಡುಬರುತ್ತಿದೆ. ಏಷ್ಯಾದಲ್ಲೇ ಅತ್ಯಂತ ಅಪರೂಪವಾದ ಈ ಬೆಳೆ ಉಳಿಸಿಕೊಳ್ಳಲು ಹೋರಾಡಬೇಕಾಗಿದೆ. 50ಕ್ಕೂ ಹೆಚ್ಚು ಭತ್ತ ತಳಿಗಳನ್ನು ಇಲ್ಲಿಯ ಗಜನಿ ಭೂಮಿಯಲ್ಲಿ ಪ್ರಯೋಗ ಮಾಡಲಾಗಿತ್ತು. ಆದರೆ, ಕಗ್ಗ ತಳಿ ಹೊರತುಪಡಿಸಿ ಬೇರಾವುದೂ ಉಪ್ಪುನೀರಿನ ಸಹಿಷ್ಣುತೆಯಲ್ಲಿ ಬೆಳೆಯಲಿಲ್ಲ. ವಿವಿಧ ರೋಗ ತಡೆದುಕೊಂಡು ಬೆಳೆಯಬಲ್ಲ ಕಗ್ಗ ಭತ್ತದ ರಕ್ಷಣೆ ಅವಶ್ಯವಾಗಿದೆ ಎಂದರು.

    ಗಜನಿ, ಕಗ್ಗ ಬೇಸಾಯ ಕುರಿತು ಹೋರಾಡಿದ್ದ ದಿ. ಸಿ.ಆರ್. ನಾಯ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಪ್ರಗತಿಪರ ರೈತ ವಿ.ಆರ್. ಪಟಗಾರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಕೃಷಿ ವಿವಿ ಸಹ ಸಂಶೋಧನಾ ನಿರ್ದೇಶಕ ಡಾ. ಮೃತ್ಯುಂಜಯ ಸಿ. ವಾಲಿ, ಸಹ ವಿಸ್ತರಣಾ ನಿರ್ದೇಶಕ ಡಾ. ಪಿ.ಎಸ್. ಹೂಗಾರ, ಕಾರವಾರ ಉಪವಿಭಾಗ ಉಪಕೃಷಿ ನಿರ್ದೇಶಕ ಶಿವಪ್ರಸಾದ ಗಾಂವಕರ, ಶಿರಸಿ ಉಪವಿಭಾಗ ಉಪಕೃಷಿ ನಿರ್ದೇಶಕ ಟಿ.ಎಚ್. ನಟರಾಜ್, ಕುಮಟಾ ಸಹಾಯಕ ಕೃಷಿ ನಿರ್ದೇಶಕಿ ಚಂದ್ರಕಲಾ ಬರ್ಗಿ, ಮೀನುಗಾರಿಕೆ ಸಂಶೋಧನಾ ಕೇಂದ್ರದ ಚಂದ್ರಕಾಂತ ನಿಂಗದಾಳ, ಎನ್.ಜಿ. ಹನುಮರಟ್ಟಿ ಇದ್ದರು. ಸುಬ್ರಾಯ ಗುನಗಾ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts