More

    ಸುಗ್ಗಿ ಭತ್ತ ನಾಟಿ ಆರಂಭ: ಅಕಾಲಿಕ ಮಳೆಯಿಂದ ತುಸು ವಿಳಂಬ

    ಭರತ್ ಶೆಟ್ಟಿಗಾರ್, ಮಂಗಳೂರು
    ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರಿನ ಬಳಿಕ ಎರಡನೇ ಬೆಳೆಯಾಗಿ ಸುಗ್ಗಿ ಭತ್ತ ನಾಟಿ ಕಾರ್ಯ ಆರಂಭವಾಗಿದೆ. ಉಭಯ ಜಿಲ್ಲೆಗಳಲ್ಲಿ ನಿಗದಿತ ಗುರಿಯ ಅಂದಾಜು ಶೇ.15ರಷ್ಟು ನಾಟಿ ಕಾರ್ಯ ನಡೆದಿದೆ.

    ಉಡುಪಿಯಲ್ಲಿ ನಿಗದಿತ ಗುರಿ 5300 ಹೆಕ್ಟೇರ್‌ನಲ್ಲಿ 615 ಹೆಕ್ಟೇರ್‌ನಲ್ಲಿ ನಾಟಿಯಾಗಿದೆ. ಈ ಪೈಕಿ ಕಾರ್ಕಳದಲ್ಲಿ 600 ಹೆಕ್ಟೇರ್ ಮತ್ತು ಕುಂದಾಪುರದಲ್ಲಿ 15 ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ. ಉಡುಪಿಯಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ. ದ.ಕ. ಜಿಲ್ಲೆಯಲ್ಲಿ 3259 ಹೆಕ್ಟೇರ್ ಗುರಿಯಲ್ಲಿ 363 ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ. ಮಂಗಳೂರಿನಲ್ಲಿ 112, ಬಂಟ್ವಾಳ 25, ಬೆಳ್ತಂಗಡಿ 150 ಪುತ್ತೂರು 41 ಮತ್ತು ಸುಳ್ಯದಲ್ಲಿ 35 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿದೆ.
    ಭತ್ತದ ಜತೆಗೆ ಇತರ ಬೆಳೆಗಳಾಗಿ ಉಡುಪಿಯಲ್ಲಿ ಉದ್ದು 3350 ಹೆಕ್ಟೇರ್ ಗುರಿಯಲ್ಲಿ 250 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹುರುಳಿ 30, ಹೆಸರು 75, ಅಲಸಂಡೆ 2,350, ನೆಲಗಡಲೆ 1,800 ಹೆಕ್ಟೆರ್‌ನಲ್ಲಿ ಬೆಳೆಸಲು ಉದ್ದೇಶಿಸಲಾಗಿದೆ. ಕಟಾವು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ವೈಪರೀತ್ಯ ಕಾರಣದಿಂದಾಗಿ ಈ ಬಾರಿ ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯಕ್ಕೂ ಹಿನ್ನೆಡೆಯಾಗಿದೆ. ಡಿಸೆಂಬರ್ ಮಧ್ಯಂತರದ ಬಳಿಕ ಪ್ರಕ್ರಿಯೆ ವೇಗ ಪಡೆಯುವ ಸಾಧ್ಯತೆಯಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಬಿತ್ತನೆ ಬೀಜ ಲಭ್ಯ: ಸುಗ್ಗಿ(ರಬಿ)ಗೆ ಸಂಬಂಧಿಸಿದಂತೆ ಉಭಯ ಜಿಲ್ಲೆಗಳಲ್ಲಿ ಜಯ ಮತ್ತು ಜ್ಯೋತಿ ತಳಿಯ ಭತ್ತದ ಬೀಜಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 120 ಕ್ವಿಂಟಾಲ್ ಬೀಜವನ್ನು ರೈತ ಸೇವಾ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗಿದೆ. 200 ಕ್ವಿಂಟಾಲ್ ಹೆಚ್ಚುವರಿ ಬೇಡಿಕೆ ಇದ್ದು, ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಉಡುಪಿಯಲ್ಲೂ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ದ್ವಿದಳ ಧಾನ್ಯಗಳ ವಿತರಣೆಯೂ ಆರಂಭವಾಗಿದೆ.

    ಶೇ.95ರಷ್ಟು ಕಟಾವು ಪೂರ್ಣ: ಮುಂಗಾರು (ಏಣೆಲು) ಕಟಾವು ಅಂತಿಮ ಹಂತಕ್ಕೆ ಬಂದಿದ್ದು, ಉಭಯ ಜಿಲ್ಲೆಗಳಲ್ಲಿ ಶೇ.95ಕ್ಕೂ ಅಧಿಕ ಪ್ರಮಾಣದಲ್ಲಿ ಕಟಾವು ಪೂರ್ಣಗೊಂಡಿದೆ. ತಡವಾಗಿ ನಾಟಿ ಮಾಡಿದ ಕಡೆಗಳಲ್ಲಿ ಮಾತ್ರ ಕಟಾವಿಗೆ ಬಾಕಿ ಇದ್ದು, ಇನ್ನು 10-15 ದಿನದಲ್ಲಿ ಶೇ.100ರಷ್ಟು ಮುಗಿಯಲಿದೆ. ಮಳೆಯಿಂದಾಗಿ ಕೆಲವೆಡೆ ಕಟಾವಿಗೆ ವಿಳಂಬವಾಗಿದ್ದು, ಸದ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ.

    ಈ ಬಾರಿ ಮಳೆಯಿಂದಾಗಿ ಕಟಾವು ವಿಳಂಬವಾಗಿದ್ದು, ರಬಿಯಲ್ಲಿ ಭತ್ತ ನಾಟಿ ಈಗಷ್ಟೇ ಆರಂಭವಾಗಿದೆ. ದ.ಕ. ಜಿಲ್ಲೆ ಜಿಲ್ಲೆಯಲ್ಲಿ ಮುಖ್ಯವಾಗಿ ಕಿಂಡಿ ಅಣೆಕಟ್ಟು, ಕೆರೆಗಳಿಂದ ಸುಗ್ಗಿ ಬೆಳೆಗೆ ಹೆಚ್ಚು ಪೂರಕವಾಗಿದೆ. ಕರಾವಳಿ ಮಳೆ ಆಶ್ರಯಿಸಿದ ಪ್ರದೇಶ ಆಗಿರುವುದರಿಂದ ನೀರಾವರಿ ಸೌಲಭ್ಯ ಇರುವಲ್ಲಿ ಮಾತ್ರ ಎರಡನೇ ಭತ್ತ ಬೆಳೆ ತೆಗೆಯುತ್ತಾರೆ.
    ಡಾ.ಸೀತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ, ದ.ಕ. ಜಿಲ್ಲೆ

    ತಾಲೂಕುವಾರು ಮಾಹಿತಿ (ಹೆಕ್ಟೇರ್‌ಗಳಲ್ಲಿ)
    ತಾಲೂಕು ಗುರಿ ಸಾಧನೆ
    ಮಂಗಳೂರು 2500 112
    ಬಂಟ್ವಾಳ 179 25
    ಬೆಳ್ತಂಗಡಿ 350 150
    ಪುತ್ತೂರು 120 41
    ಸುಳ್ಯ 110 35
    ಉಡುಪಿ 800 —
    ಕುಂದಾಪುರ 2500 15
    ಕಾರ್ಕಳ 2000 600

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts