More

    ಬಡಾವಣೆಗಳ ರಸ್ತೆ ಸ್ವಯಂಪ್ರೇರಿತ ಬಂದ್: ಪಾದರಾಯನಪುರ ದಾಂಧಲೆಯಿಂದ ಹೆಚ್ಚಿದ ಆತಂಕ, ವಾಹನ ತಪಾಸಣೆ ಕಟ್ಟುನಿಟ್ಟು

    ಬೆಂಗಳೂರು: ಪಾದರಾಯನಪುರದಲ್ಲಿ ಕಿಡಿಗೇಡಿಗಳ ದಾಂಧಲೆ ಬಳಿಕ ಜನರಲ್ಲಿ ಕರೊನಾ ಭೀತಿ ಹೆಚ್ಚಾಗಿದ್ದು, ಪ್ರತಿ ಏರಿಯಾದಲ್ಲಿನ ರಸ್ತೆಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿಕೊಂಡಿದ್ದಾರೆ.

    ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ದಿನಸಿ ಸಾಮಾಗ್ರಿ, ತರಾಕಾರಿ, ಹಣ್ಣು ಸೇರಿ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳಲ್ಲೇ ಸಂಚರಿಸುತ್ತಿದ್ದರು. ಅಲ್ಲದೆ, ರಸ್ತೆಬದಿಯಲ್ಲಿ ತಳ್ಳು ಗಾಡಿ ನಿಲ್ಲಿಸಿಕೊಂಡು ತರಕಾರಿ ಮತ್ತು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರಿಂದ ಜನರು ಗುಂಪಾಗಿ ಸೇರುತ್ತಿದ್ದರು. ಆದರೆ ಈಗ ಬಹುತೇಕ ಕಡೆ ರಸ್ತೆಗಳಿಗೆ ಕಲ್ಲು, ಕಟ್ಟಿಗೆ ತುಂಡು, ಬ್ಯಾರಿಕೇಡ್ ಹಾಗೂ ಇನ್ನಿತರ ವಸ್ತುಗಳನ್ನು ಅಡ್ಡಹಾಕಿ ಬಂದ್ ಮಾಡಿದ್ದಾರೆ.

    42 ಸಾವಿರ ವಾಹನ ಜಪ್ತಿ:

    ಕೆಲ ದಿನಗಳಿಂದ ಲಾಕ್​ಡೌನ್ ಬಂದೋಬಸ್ತ್ ಸಡಿಲಗೊಳಿಸಿದ್ದರಿಂದ ವಾಹನ ಸಂಚಾರ ಹೆಚ್ಚಾಗಿತ್ತು. ಚೆಕ್​ಪೋಸ್ಟ್​ಗಳಲ್ಲಿ ವಾಹನ ತಪಾಸಣೆ ಕಟ್ಟುನಿಟ್ಟಾಗಿ ಇಲ್ಲದಿರುವುದು ಇದಕ್ಕೆ ಕಾರಣ ವಾಗಿತ್ತು. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ಗೆ ಡಿಜಿಪಿ ಪ್ರವೀಣ್ ಸೂದ್ ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ತಪಾಸಣೆ ಕಟ್ಟುನಿಟ್ಟಾಗಿ ನಡೆಯುತ್ತಿದೆ. ವೈಟ್​ಫೀಲ್ಡ್ ಮತ್ತು ಪೂರ್ವ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೆಎಸ್​ಪಿ ಪಾಸ್ ಇಲ್ಲದೆ ಸಂಚರಿಸುವ ವಾಹನ ಸವಾರರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಬುಧವಾರ ಮಧ್ಯಾಹ್ನ 12 ಗಂಟೆವರೆಗೆ 2015ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಈವರೆಗೂ 41,731 ವಾಹನ ಜಪ್ತಿ ಮಾಡಲಾಗಿದೆ.

    ಬೇರೆ ವಿಭಾಗದ ಖಾಕಿ ಸಿಬ್ಬಂದಿ ನಿಯೋಜನೆ

    ಉತ್ತರ ಮತ್ತು ಪಶ್ಚಿಮ ವಿಭಾಗದ ಎಲ್ಲ ಠಾಣೆಗಳ ಬಹುತೇಕ ಸಿಬ್ಬಂದಿಗಳನ್ನು ಪಾದರಾಯನಪುರ ಮತ್ತು ಬಾಪೂಜಿನಗರದ ಬಂದೋಬಸ್ತ್​ಗೆ ನಿಯೋಜಿಸಲಾಗಿದೆ. ಆದರೂ ಸಿಬ್ಬಂದಿ ಕೊರತೆ ಕಾಣುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಪ್ರತಿ ಪೊಲೀಸ್ ಠಾಣೆಯಿಂದ ತಲಾ ಒಬ್ಬ ಪಿಎಸ್​ಐ, ಮುಖ್ಯ ಪೇದೆ ಹಾಗೂ ಪೇದೆಯನ್ನು ನಿಯೋಜಿಸಲಾಗಿದೆ. ‘ತೀರ ಅನಿವಾರ್ಯ ಪರಿಸ್ಥಿತಿ ಇದ್ದವರಿಗೆ ಮಾತ್ರ ಮನೆಯಿಂದ ಹೊರಬರಲು ಅವಕಾಶ ಕೊಡಿ. ನೆಪ ಹೇಳುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ’ ಎಂದು ಕಮಿಷನರ್ ಭಾಸ್ಕರ್ ರಾವ್ ಸೂಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಹಿರಿಯ ಪೊಲೀಸ್​ಅಧಿಕಾರಿಗಳ ಭೇಟಿ

    ಪಾದರಾಯನಪುರ ಮತ್ತು ಬಾಪೂಜಿನಗರದಲ್ಲಿ ಸೀಲ್​ಡೌನ್ ಬಂದೋಬಸ್ತ್​ಗೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿರುವುದರಿಂದ ಸಂಪೂರ್ಣ ಸ್ತಬ್ಧವಾಗಿವೆ. ಇವೆರಡು ಪ್ರದೇಶಗಳ ಪ್ರತಿ ರಸ್ತೆಯ ತಿರುವಿನಲ್ಲಿಯೂ ಪೊಲೀಸರು ಬೀಡುಬಿಟ್ಟಿದ್ದಾರೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಡಿಸಿಪಿ ರಮೇಶ್ ಬಾನೋತ್, ಸ್ಥಳೀಯ ಎಸಿಪಿ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಕಿಡಿಗೇಡಿಗಳ ಮೇಲೆ ಕಣ್ಣಿಡಲು ದಿನಕ್ಕೆ ಮೂರು ಬಾರಿ ಗಸ್ತು ತಿರುಗುವಂತೆ ಪೊಲೀಸ್ ಆಯುಕ್ತರು ನಿರ್ದೇಶನ ನೀಡಿದ್ದಾರೆ.

    ನಿಮಗೆ ತಿಳಿದಿರಲಿ… ಮೋದಿ ಸರ್ಕಾರ ಕೈಗೊಂಡದ್ದು ಬರೀ ಲಾಕ್​ಡೌನ್ ಕ್ರಮವಷ್ಟೇ ಅಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts