More

    ಕರೊನಾ ಲಸಿಕೆ ವಿತರಣೆಗೆ ಪೂರ್ವಾಭ್ಯಾಸ

    ವಿಜಯಪುರ: ಮಹಾಮಾರಿ ಕರೊನಾ ಲಸಿಕೆ ಸಂಗ್ರಹ ಹಾಗೂ ಪ್ರಯೋಗಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು ಜಿಲ್ಲೆಯ 6 ಸ್ಥಳಗಳಲ್ಲಿ ಜ.8ರಂದು ಡ್ರೈರನ್ (ಪೂರ್ವಾಭ್ಯಾಸ) ಹಮ್ಮಿಕೊಳ್ಳಲಾಗಿದೆ.
    ಜಿಲ್ಲಾಸ್ಪತ್ರೆ, ಬಿಎಲ್‌ಡಿಇ ವೈದ್ಯಕೀಯ ಕಾಲೇಜು, ಬ.ಬಾಗೇವಾಡಿ ತಾಲೂಕು ಆಸ್ಪತ್ರೆ, ಮನಗೂಳಿ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿಜಯಪುರ ದರ್ಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಕೋ-ವಿನ್ ತಂತ್ರಾಂಶದಲ್ಲಿ ನೋಂದಣಿಯಾದ ಆರೋಗ್ಯ ಕಾರ್ಯಕರ್ತರಿಗೆ ಡ್ರೈರನ್ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ತಿಳಿಸಿದ್ದಾರೆ.
    ಡ್ರೈ ರನ್ ಕುರಿತು ಈಗಾಗಲೇ ಪೂರ್ವಸಿದ್ಧತಾ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಥಮ ಹಂತದಲ್ಲಿ ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ 5 ಅಧಿಕಾರಿಗಳನ್ನೊಳಗೊಂಡ ತಂಡಕ್ಕೆ ತರಬೇತಿ ನೀಡಲಾಗಿದೆ. ಇದಕ್ಕಾಗಿ 3 ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಈ ಸಂದರ್ಭದಲ್ಲಿ ಕರೊನಾ ಲಸಿಕೆ ಹೊರತುಪಡಿಸಿ ಉಳಿದೆಲ್ಲ ಪೂರ್ವಾಭ್ಯಾಸ ಕೈಗೊಳ್ಳಲಾಗುವುದು. ಯಾವುದಾದರೊಂದು ಲಸಿಕಾ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಹಕ್ಕಿಜ್ವರ ಆತಂಕ ಬೇಡ

    ಕೇರಳದಲ್ಲಿ ಕಂಡು ಬಂದ ಹಕ್ಕಿಜ್ವರ ರಾಜ್ಯದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದ ಹಿನ್ನೆಲೆ ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಲಾಗಿದೆ. ಜಿಲ್ಲೆಗೆ ಆ ರಾಜ್ಯದಿಂದ ಕೋಳಿ ಉತ್ಪನ್ನಗಳು ಬರದ ಕಾರಣ ಜನತೆ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.

    ಪ್ರತಿ ತಾಲೂಕಿನಲ್ಲಿ ರ‌್ಯಾಪಿಡ್ ರೆಸ್ಪಾನ್ಸ್ ಟೀಮ್ ಸನ್ನದ್ಧಗೊಳಿಸಲಾಗಿದೆ. ಜಿಲ್ಲೆಯಲ್ಲಿ ನಿಯಮಿತವಾಗಿ ಹಕ್ಕಿಜ್ವರ ಸರ್ವೇಕ್ಷಣಾ ಕಾರ್ಯಕ್ರಮ ಜಾರಿಯಲ್ಲಿದೆ. ಪ್ರತಿ ತಿಂಗಳು ಬೆಂಗಳೂರಿನ ಪ್ರಾಣಿ ಆರೋಗ್ಯ ಸಂಸ್ಥೆಯ ಲ್ಯಾಬ್‌ಗೆ ಸೀರಂ ಕಳುಹಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಸತ್ತರೆ, ರೋಗದ ಬಗ್ಗೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
    ಜಿಲ್ಲೆಯ ಗಡಿಭಾಗದಲ್ಲಿ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿ ನಿಯೋಜಿಸಿ ಬೇರೆ ರಾಜ್ಯ, ಜಿಲ್ಲೆಯಿಂದ ಬರುವ ಕೋಳಿ, ಮೊಟ್ಟೆ ಮೇಲೆ ನಿಗಾವಹಿಸಲಾಗಿದೆ. ವಲಸೆ ಬರುವ ಪಕ್ಷಿಗಳ ಕೆರೆ, ನೀರಿನ ಸಂಗ್ರಹಗಳು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮೃತಪಟ್ಟ ಪಕ್ಷಿಗಳ ಬಗ್ಗೆ ಇಲಾಖೆ ನಿಗಾ ವಹಿಸಿದೆ. ಕೋಳಿ ಮಾಂಸ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ (165ಎಫ್) ತಿನ್ನುವುದರಿಂದ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts