More

    ಗಡಿಯಲ್ಲಿ ಮರಳು ದಂಧೆ ಚುರುಕು

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ರಾಜ್ಯಾದ್ಯಂತ ರಣಕೇಕೆ ಹಾಕುತ್ತಿರುವ ಕರೊನಾ ಮಹಾಮಾರಿ ನಿಯಂತ್ರಿಸಲು ಜಿಲ್ಲಾಡಳಿತ ಹಗಲಿರುಳು ಹೈರಾಣ ಆಗುತ್ತಿದ್ದರೆ, ಸದ್ದಿಲ್ಲದೆ ಗಡಿಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ.

    ಗುರುಮಠಕಲ್ ಮತಕ್ಷೇತ್ರದ ಕಡೇಚೂರ ವಲಯದ ಹಳ್ಳ-ಕೊಳ್ಳಗಳಲ್ಲಿ ಮರಳು ದಂಧೆಕೋರರು ರಾತ್ರೋರಾತ್ರಿ ಜೆಸಿಬಿಗಳಿಂದ ಅಗೆದು ಟಿಪ್ಪರ್ಗಳ ಮೂಲಕ ತೆಲಂಗಾಣದ ನಾರಾಯಣಪೇಟ, ಮಹೆಬೂಬನಗರ, ಕನರ್ೂಲ್ ಜಿಲ್ಲೆಗಳಿಗೆ ಸಾಗಿಸುತ್ತಿದ್ದು, ಇದಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ಇಷ್ಟು ದಿನ ಕೇವಲ ಕೃಷ್ಣಾ ಮತ್ತು ಭೀಮಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವಾಗಲೇ ಗಡಿಭಾಗದ ಸಣ್ಣಪುಟ್ಟ ಹಳ್ಳಗಳನ್ನು ಸಹ ದಂಧೆಕೋರರು ಬಿಡುತ್ತಿಲ್ಲ.

    ಕೆಐಎಡಿಬಿ ವ್ಯಾಪ್ತಿಯ ಕಡೇಚೂರ ಕೈಗಾರಿಕಾ ವಲಯದ 546-547-548 ಪ್ಲಾಟ್ಗಳಲ್ಲಿನ ಸಣ್ಣಪುಟ್ಟ ಹಳ್ಳಗಳಲ್ಲಿ ಪ್ರತಿದಿನ ಸಂಜೆಯಾದರೆ ಸಾಕು, ದೊಡ್ಡ ದೊಡ್ಡ ಯಂತ್ರಗಳು ಸದ್ದು ಮಾಡಲು ಆರಂಭಿಸುತ್ತವೆ ಎಂಬ ಆರೋಪ ಕೇಳಿ ಬರುತ್ತಿವೆ. ಈ ದಂಧೆ ಎರಡ್ಮೂರು ತಿಂಗಳಿಂದ ನಿರಂತರ ನಡೆಯುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಇದಕ್ಕೂ ತನಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿರುವುದು ವರ್ತಮಾನದ ದುರಂತ. ಮತ್ತೊಂದೆಡೆ ಈ ದಂಧೆಗೆ ಪೊಲೀಸ್ ಇಲಾಖೆಯ ಕೆಲವರು ಒಳಗೊಳಗೆ ಸಾಥ್ ಕೊಡುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದು, ಮೇಲಧಿಕಾರಿಗಳು ಒಮ್ಮೆ ನಜರ್ ಹರಿಸುವ ಅಗತ್ಯವಿದೆ.

    ಒಣಭೂಮಿಯಿಂದ ಕೂಡಿರುವ ಗುರುಮಠಕಲ್ ಕ್ಷೇತ್ರದ ಜನತೆ ನೀರಾವರಿಗಾಗಿ ಕೆರೆ ಮತ್ತು ಹಳ್ಳಗಳನ್ನು ಅವಲಂಬಿಸಿದ್ದಾರೆ. ಹೀಗೆ ಮನಸ್ಸಿಗೆ ಬಂದಂತೆ ಪ್ರಕೃತಿ ಸಂಪತ್ತು ಕೊಳ್ಳೆ ಹೊಡೆಯುತ್ತ ಹೋದರೆ ಮುಂದೊಂದು ದಿನ ಅಂತರ್ಜಲ ಬತ್ತಿ ಕೃಷಿ ಇರಲಿ, ಕುಡಿಯುವ ನೀರಿಗೂ ಹಾಹಾಕಾರ ಎದ್ದರೂ ಅಚ್ಚರಿಪಡುವಂತಿಲ್ಲ.
    ಈಗಾಗಲೇ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಬೇಸಿಗೆ ಬಂದರೆ ಸಾಕು, ಬೋರ್ವೆಲ್ಗಳು ಬತ್ತಿ ರೈತರು ಒದ್ದಾಡುತ್ತಿದ್ದಾರೆ. ಇದಕ್ಕೆ ಕಾರಣ ಅಂತರ್ಜಲ ಕಮ್ಮಿ ಆಗುತ್ತಿರುವುದು. ಆರೇಳು ವರ್ಷಗಳಿಂದ ಮಳೆ ಎಂಬುದು ಗಗನ ಕುಸುಮವಾಗಿದೆ.

    ಪರಿಸ್ಥಿತಿ ಹೀಗಿದ್ದರೂ ಆಡಳಿತ ಎಚ್ಚತ್ತುಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಅದರಲ್ಲೂ ದಂಧೆಕೋರರು ಮರಳು ಎಂದರೆ ಅಪ್ಪಟ ಚಿನ್ನ ಎಂದೇ ಭಾವಿಸಿದ್ದು, ಅಕ್ರಮದಲ್ಲಿ ಕೆಲ ಛೋಟಾ-ಮೋಟಾ ಲೀಡರ್ಗಳಿಗೂ ಪಾಲು ಸಂದಾಯವಾಗುತ್ತಿದೆ ಎಂದರೆ ನಂಬಲೇಬೇಕಾಗಿದೆ.
    ಮೇಲಧಿಕಾರಿಗಳು ಒಮ್ಮೆಯಾದರೂ ಹವಾನಿಯಂತ್ರಿತ ಕೋಣೆ ಬಿಟ್ಟು ಇಂಥ ಅಕ್ರಮಗಳತ್ತ ಕಣ್ಣು ಹಾಯಿಸಿ ದಂಧೆಕೋರರಿಗೆ ಚಾಟಿ ಏಟು ಬೀಸುವ ಅಗತ್ಯವಿದೆ. ಭೂ ತಾಯಿ ಒಡಲು ಬಗೆಯುತ್ತಿರುವ ಕಳ್ಳರಿಗೆ ತಕ್ಕ ಶಾಸ್ತಿ ಮಾಡಬೇಕು ಎಂಬುದು ಜಿಲ್ಲೆಯ ಜನರ ಒತ್ತಾಸೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts