More

    ಹೊರ ಗುತ್ತಿಗೆ ಸಿಬ್ಬಂದಿಗೆ ಆತಂಕ

    ಬೆಳಗಾವಿ: ಬೆಳಗಾವಿ ನಗರ ನೀರು ಸರಬರಾಜು ಉಪ ವಿಭಾಗ ವ್ಯಾಪ್ತಿಯ ಜಲಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಈಗ ಢವ ಢವ ಶುರುವಾಗಿದೆ.! ಹೊರ ಗುತ್ತಿಗೆ ಮುಂದುವರಿಯುತ್ತದೆಯೋ? ಇಲ್ಲವೋ ಎಂಬ ಚಿಂತೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ)ಯು ಬೆಳಗಾವಿ ಮಹಾನಗರಕ್ಕೆ ನಿರಂತರ ನೀರು (24/7) ಸರಬರಾಜು ವ್ಯವಸ್ಥೆ ಮಾಡಲು ಚೆನ್ನೈ ಮೂಲದ ಎಲ್‌ಎನ್‌ಟಿ ಕಂಪನಿಗೆ ಗುತ್ತಿಗೆ ನೀಡಿದೆ. ಹೀಗಾಗಿ, ನಗರದಲ್ಲಿ ಮಧ್ಯಂತರ ನೀರು ಸರಬರಾಜು ದಕ್ಷಿಣ ಮತ್ತು ಉತ್ತರ ವಿಭಾಗದ ನೀರು ಸರಬರಾಜಿನ ನಿರ್ವಹಣೆಯು ಜಲಮಂಡಳಿಯಿಂದ ಎಲ್‌ಎನ್‌ಟಿ ಕಂಪನಿಗೆ ಹಸ್ತಾಂತರವಾಗಲಿದೆ. ಹೀಗಾಗಿ ಎಲ್‌ಎನ್‌ಟಿ ಕಂಪನಿ ನಮ್ಮನ್ನು ಕೆಲಸದಲ್ಲಿ ಮುಂದುವರಿಸುತ್ತದೆಯೇ ಎಂಬ ಆತಂಕ ಸಿಬ್ಬಂದಿಗೆ ಶುರುವಾಗಿದೆ. ಜಲಮಂಡಳಿ ಅಧಿಕಾರಿಗಳು ಗುತ್ತಿಗೆ ಸಿಬ್ಬಂದಿ ಮುಂದುವರಿಸುವ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಜತೆಗೆ ನಿರಂತರ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವುದಕ್ಕೆ ಎಲ್‌ಎನ್‌ಟಿ ಕಂಪನಿಗೆ ಗುತ್ತಿಗೆ ನೀಡಿದ ಕೆಯುಐಡಿಎಫ್‌ಸಿ ಅಧಿಕಾರಿಗಳೂ ಗುತ್ತಿಗೆ ಸಿಬ್ಬಂದಿಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ಗುತ್ತಿಗೆ ಸಿಬ್ಬಂದಿಗೆ ತಮ್ಮ ಕೆಲಸಕ್ಕೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಅನುಮಾನ ಇದೀಗ ಮೂಡುತ್ತಿದೆ.

    400ಕ್ಕೂ ಹೆಚ್ಚು ಸಿಬ್ಬಂದಿ

    ಕಂದಾಯ ಗುಮಾಸ್ತ, ಕಂಪ್ಯೂಟರ್ ಆಪರೇಟರ್, ವಾಟರಮನ್, ಪಂಪ್ ಆಪರೇಟರ್, ಬಿಲ್ ಕಲೆಕ್ಟರ್ ಹಾಗೂ ಇತರ ಸಿಬ್ಬಂದಿ ಸೇರಿ ಜಲಮಂಡಳಿಯ ಬೆಳಗಾವಿ ದಕ್ಷಿಣ ಹಾಗೂ ಉತ್ತರ ಮಧ್ಯಂತರ ನೀರು ಸರಬರಾಜು ವಿಭಾಗದಲ್ಲಿ ಸದ್ಯಕ್ಕೆ 400ಕ್ಕೂ ಹೆಚ್ಚು ಗುತ್ತಿಗೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಬಹಳಷ್ಟು ಜನರು 25 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ನೀರು ಸರಬರಾಜು ನಿರ್ವಹಣೆ ಮಾಡುತ್ತಿದ್ದ ಕಾಲದಿಂದಲೂ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇದೀಗ ಸಿಬ್ಬಂದಿಗೆ ಅತಂತ್ರರಾಗುವ ಭಯ ಕಾಡುತ್ತಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಹಳೇ ಗುತ್ತಿಗೆ ಸಿಬ್ಬಂದಿಗೆ ಮೊದಲ ಆದ್ಯತೆ ನೀಡುವಂತೆ ಎಲ್‌ಎನ್‌ಟಿ ಕಂಪನಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಗುತ್ತಿಗೆ ಸಿಬ್ಬಂದಿ ಒತ್ತಾಯಿಸಿದ್ದಾರೆ.

    ಸೇವಾ ಭದ್ರತೆಗಾಗಿ ಜಿಲ್ಲಾಧಿಕಾರಿಗೆ ಮನವಿ

    ಜಲಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ವಾಟರ್‌ಮನ್, ಪಂಪ್ ಆಪರೇಟರ್‌ಗಳು ಸೇರಿ 60 ಸಿಬ್ಬಂದಿ ತಮಗೆ ಸೇವಾ ಭದ್ರತೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. 2006ರಲ್ಲಿ ಮಹಾನಗರ ಪಾಲಿಕೆಯಿಂದ ಇವರನ್ನು ಜಲಮಂಡಳಿಗೆ ವರ್ಗಾಯಿಸಲಾಗಿತ್ತು. ಈಗ ಮತ್ತೆ ನೀರು ಸರಬರಾಜು ನಿರ್ವಹಣೆಯು ಜಲಮಂಡಳಿಯಿಂದ ಎಲ್‌ಎನ್‌ಟಿ ಕಂಪನಿಗೆ ಹಸ್ತಾಂತರವಾಗುತ್ತಿದೆ. ಹೀಗಾಗಿ, ಈಗಿರುವ ಹುದ್ದೆಯಲ್ಲಿಯೇ ಮುಂದುವರಿಸಬೇಕು. ಕೆಲಸದಿಂದ ತೆಗೆಯಬಾರದು ಎಂದು ಜಿಲ್ಲಾಧಿಕಾರಿ ಬಳಿ ಸಿಬ್ಬಂದಿ ಕೋರಿದ್ದಾರೆ.

    ಬೆಳಗಾವಿ ನಗರಕ್ಕೆ ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನ ಮಾಡುತ್ತಿರುವುದು ಒಳ್ಳೆಯ ವಿಚಾರ. ಇನ್ನುಮುಂದೆ ನಗರದಲ್ಲಿ ನೀರು ಸರಬರಾಜು ಮತ್ತು ನಿರ್ವಹಣೆ ಹೊಣೆ ಹೊರುವ ಕಂಪನಿಯು ನಮ್ಮನ್ನು ಈಗಿರುವ ಹುದ್ದೆಯಲ್ಲಿಯೇ ಮುಂದುವರಿಸಬೇಕು.
    | ಸುಬ್ರಮಣಿಯನ್ ಕಾಂಬಳೆ. ವಾಟರ್‌ಮನ್, ಗುತ್ತಿಗೆ ಸಿಬ್ಬಂದಿ

    ಜಲಮಂಡಳಿಯಲ್ಲಿ ಸದ್ಯ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿ ಸುತ್ತಿರುವ ಸಿಬ್ಬಂದಿಗೆ ಯಾವುದೇ ತೊಂದರೆ ಇಲ್ಲ. ಬೆಳಗಾವಿ ನಗರಕ್ಕೆ ನಿರಂತರ ನೀರು ಸರಬರಾಜು ಅನುಷ್ಠಾನ ಮಾಡುವ ಯೋಜನೆಯಲ್ಲಿ ದಿಢೀರನೆ ಸಿಬ್ಬಂದಿ ಬದಲಾವಣೆ ಮಾಡುವುದಕ್ಕೆ ಬರುವುದಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇವೆ.
    | ಕೆ.ಎಚ್. ಜಗದೀಶ ಆಯುಕ್ತ, ಮಹಾನಗರ ಪಾಲಿಕೆ, ಬೆಳಗಾವಿ

    ಬೆಳಗಾವಿ ನಗರಕ್ಕೆ ನಿರಂತರ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವುದಕ್ಕೆ ಕೆಯುಐಡಿಎಫ್‌ಸಿ ಗುತ್ತಿಗೆ ನೀಡಿದೆ. ಗುತ್ತಿಗೆ ಪಡೆದ ಕಂಪನಿಯು, ಜಮಂಡಳಿಯಲ್ಲಿ ದುಡಿಯುತ್ತಿರುವ ಗುತ್ತಿಗೆ ಸಿಬ್ಬಂದಿಯನ್ನು ಅಗತ್ಯಕ್ಕನುಗುಣವಾಗಿ ತೆಗೆದುಕೊಳ್ಳಬಹುದು. ಇದು ಕೆಯುಐಡಿಎಫ್‌ಸಿ ಹಾಗೂ ಮಹಾನಗರ ಪಾಲಿಕೆಗೆ ಬಿಟ್ಟ ವಿಷಯ.
    | ವಿ.ಎಲ್. ಚಂದ್ರಪ್ಪ ಕಾರ್ಯಪಾಲಕ ಅಭಿಯಂತ, ಬೆಳಗಾವಿ ಜಲಮಂಡಳಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts