More

    ಒಳಮೀಸಲಾತಿ ವಿರುದ್ಧ ಆಕ್ರೋಶ, ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಶಾಸ್ತಿ…ಶಾಸಕ ದೇವಾನಂದ ಚವಾಣ್ ಹೇಳಿದ್ದೇನು?

    ವಿಜಯಪುರ: ನ್ಯಾ.ಸದಾಶಿವ ಆಯೋಗ ವರದಿ ಜಾರಿಗೊಳಿಸುವ ಮೂಲಕ ಒಡಹುಟ್ಟಿದ ಸಹೋದರರಂತಿರುವ ಪರಿಶಿಷ್ಟ ಜಾತಿ ಒಳಪಂಗಡಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿದ ಬಿಜೆಪಿ ಸರ್ಕಾರಕ್ಕೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದೆಂದು ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ದೇವಾನಂದ ಚವಾಣ್ ಆಕ್ರೋಶ ಹೊರಹಾಕಿದರು.

    ಸರ್ಕಾರದ ಈ ಧೋರಣೆಯಿಂದ ಸಮಾಜದಲ್ಲಿ ಸಂಘರ್ಷ ಏರ್ಪಟ್ಟು ಅಶಾಂತಿ ಮತ್ತು ಅರಾಜಕತೆ ಸೃಷ್ಠಿಯಾಗಲಿದೆ. ಈಗಾಗಲೇ ರಾಜ್ಯದೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಕೂಡಲೇ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು. ಇಲ್ಲವಾದಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಬಂಜಾರಾ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.

    ಬ್ರಿಟಿಷರು ಭಾರತ ಬಿಟ್ಟು ಹೋಗುವಾವ ‘ಭಾರತೀಯರು ಮುಗ್ದರು. ಅವರ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು’ ಎಂದು ಹೇಳಿದ್ದರು. ಆದರೆ, ಇಂದಿನ ಬಿಜೆಪಿ ಸರ್ಕಾರ ಜನರ ಮುಗ್ದತೆಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿದೆ. ಜನರ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದರು.

    ಬಂಜಾರಾ ಸಮುದಾಯದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ದೆಹಲಿ ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ? ರಾಜ್ಯ ಬಂಜಾರಾ ಸಮುದಾಯ ಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಪ್ರತಿಭಟನೆ ಮಾಡಬೇಕು. ಶಕ್ತಿ ಪ್ರದರ್ಶನ ಮಾಡಲೇಬೇಕು. ಸಚಿವ ಪ್ರಭು ಚವಾಣ್ ಹಾಗೂ ಶಾಸಕ ಪಿ.ರಾಜೀವ್‌ಗೆ ಸ್ವಾಭಿಮಾನ ಇದ್ದರೆ ಕೂಡಲೇ ಬಿಜೆಪಿ ತೊರೆದು ಪ್ರತಿಭಟನೆಗೆ ಇಳಿಯಬೇಕು. ಬಂಜಾರಾ ಸಮುದಾಯಕ್ಕೆ ನ್ಯಾಯ ಕಲ್ಪಿಸಬೇಕು. ಸದನದಲ್ಲಿ ಪುಸ್ತಕ ಹಿಡಿದು ದೊಡ್ಡ ದೊಡ್ಡ ಭಾಷಣ ಬಿಗಿಯುವ ಪಿ.ರಾಜೀವ್ ಈಗ ಸುಮ್ಮನಿರುವುದೇಕೆ? ಇನ್ನಾದರೂ ಸಮಾಜದ ಬಗ್ಗೆ ಧ್ವನಿ ಎತ್ತಿ ಎಂದು ಶಾಸಕ ಚವಾಣ್ ಕಿಡಿ ಕಾರಿದರು.

    ಕೇಂದ್ರ ಸರ್ಕಾರ 1976 ರಲ್ಲಿ ಸಂಸತ್‌ನಲ್ಲಿ ಮಸೂದೆ ಪಾಸ್ ಮಾಡುವ ಮೂಲಕ ಹಿಂದುಳಿದ ಬುಡಕಟ್ಟು ಜನಾಂಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿತ್ತು. ಆದರೆ, ರಾಜ್ಯ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿರುವ ನ್ಯಾ.ಸದಾಶಿವ ಆಯೋಗ ಜಾರಿಗೊಳಿಸಿರುವುದು ಸಂವಿಧಾನಕ್ಕೆ ಮಾಡಿರುವ ಅಪಮಾನ. ಮೀಸಲಾತಿ ಪ್ರತಿಯೊಬ್ಬರ ಹಕ್ಕು. ಭಿಕ್ಷೆಯಲ್ಲ. ಸರ್ಕಾರ ಈ ಒಳಮೀಸಲಾತಿ ನಿರ್ಧಾರ ಕೈ ಬಿಟ್ಟು ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದರು.

    ಪರಿಶಿಷ್ಟ ಜಾತಿಯಲ್ಲಿ ಒಟ್ಟು 101 ಜಾತಿಗಳಿವೆ. ಅದರಲ್ಲಿ 99 ಜಾತಿಗಳಿಗೆ ಕೇವಲ ಶೇ.4.5 ಮೀಸಲಾತಿ ನೀಡಿ ಉಳಿದ 2 ಜಾತಿಗಳಿಗೆ 11.5ರಷ್ಟು ಮೀಸಲಾತಿ ನೀಡುರುವುದು ಯಾವ ನ್ಯಾಯ? ಎಂದ ಚವಾಣ್, ಮುಖ್ಯವಾಗಿ ಮೀಸಲಿನಲ್ಲಿ ಯಾವುದೇ ಸಮಾಜ ಕಿತ್ತು ಹಾಕುವ ಅಥವಾ ಸೇರ್ಪಡೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದಾಗ್ಯೂ ಬಿಜೆಪಿ ಸರ್ಕಾರ ಲಂಬಾಣಿ ಸಮಾಜವನ್ನು ಸಂಪೂರ್ಣವಾಗಿ ಮೀಸಲಾತಿಯಿಂದ ಹೊರಗಿಡುವ ದುರುದ್ದೇಶದಿಂದ ಒಳಮೀಸಲಾತಿ ನಾಟಕವಾಡಿದೆ ಎಂದರು.

    ಈ ಕೂಡಲೇ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು. ಇಲ್ಲವಾದಲ್ಲಿ ಬಂಜಾರಾ ಸಮುದಾಯ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೋರಾಟ ರೂಪಿಸಲಿದೆ ಎಂದರು.
    ಮುಖಂಡರಾದ ಸಾಯಿನಾಥ ನಾಯಕ, ರಮೇಶ ಚವಾಣ್, ರಾಜು ಚವಾಣ್, ಗುಲಾಬ ಚವಾಣ್, ಸುರೇಶ ಜಾಧವ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts