More

    ಮುಗಿಯದ ಪೈಪ್‌ಲೈನ್ ಕಾಮಗಾರಿ

    ಅರಟಾಳ: ಸರ್ಕಾರ ಕುಡಿಯುವ ನೀರಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತದೆ. ಆದರೆ, ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷೃದಿಂದ ಕೆಲ ಯೋಜನೆಗಳು ತ್ವರಿತವಾಗಿ ಅನುಷ್ಠಾನಕ್ಕೆ ಬರುವುದಿಲ್ಲ. ಇದರಿಂದ ಜನರಿಗೆ ತೊಂದರೆ ಆಗುತ್ತದೆ. ಅಂಥದ್ದೇ ಸಮಸ್ಯೆಯನ್ನು ಸಮೀಪದ ಹಾಲಳ್ಳಿ ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಐದು ತಿಂಗಳ ಹಿಂದೆ ಆರಂಭವಾದ ಪೈಪ್‌ಲೈನ್ ಕಾಮಗಾರಿ ಇನ್ನೂ ಮುಗಿದಿಲ್ಲ. ಇದರಿಂದ ಸ್ಥಳೀಯರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

    ಹಾಲಳ್ಳಿ ಸಮೀಪದ ಕುರಗೋಡ ಕೆರೆ ಪಕ್ಕದ ಬಾವಿಯಿಂದ ಗ್ರಾಮದವರೆಗೆ ಕುಡಿಯುವ ನೀರು ಪೂರೈಸಲು ಪೈಪ್‌ಲೈನ್ ಕಾಮಗಾರಿ ಮಂಜೂರಾಗಿ ವರ್ಷ ಕಳೆಯುತ್ತ ಬಂದಿದೆ. ಆದರೆ, ಆರಂಭವಾದ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಉಂಟಾಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹೊಸ ಪೈಪ್‌ಲೈನ್ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನೀರು ಸಿಗುತ್ತಿಲ್ಲ.

    ಹಾಲಳ್ಳಿ ಗ್ರಾಮವೂ ಸುಮಾರು 4 ರಿಂದ 5 ಸಾವಿರ ಜನಸಂಖ್ಯೆ ಹೊಂದಿದ್ದು, ಪ್ರತಿ ವರ್ಷವೂ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇಲ್ಲಿದೆ. ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ಕೆರೆ ಬದಿಯಲ್ಲಿ ಹೊಸ ಬಾವಿ ತೋಡಲಾಯಿತು. ದೂರದಲ್ಲಿರುವ ಆ ಬಾವಿ ನೀರನ್ನು ಪೈಪ್‌ಲೈನ್ ಮೂಲಕ ಮೇಲ್ಮಟ್ಟದ ಟ್ಯಾಂಕ್‌ವರೆಗೆ ತರಲು ಅನುದಾನದ ಕೊರತೆ ಎದುರಾಯಿತು. ಆಗ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಶಾಸಕರನ್ನು ಭೇಟಿಯಾಗಿ ಅಳಲು ತೋಡಿಕೊಂಡರು. ಶಾಸಕರು ಕುಡಿಯುವ ನೀರಿನ ಹೊಸ ಪೈಪ್‌ಲೈನ್‌ಗೆ 35 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿಸಿ, ಭೂಮಿಪೂಜೆ ನೆರವೇರಿಸಿದರು. ಆದರೆ, ಗುತ್ತಿಗೆದಾರರ ನಿರ್ಲಕ್ಷೃದಿಂದ ಪ್ರಾರಂಭವಾದ ಕಾಮಗಾರಿ ಐದಾರು ತಿಂಗಳಿಂದ ಕುಂಟುತ್ತ ಸಾಗಿದೆ. ಬೇಸಿಗೆ ಸಮೀಪಿಸುತ್ತಿದ್ದು ಹೀಗೆ ಮುಂದುವರಿದರೆ ಈ ವರ್ಷವೂ ಕುಡಿಯುವ ನೀರಿನ ಕೊರತೆಯಾಗುತ್ತದೆ ಎನ್ನುವುದು ಸ್ಥಳೀಯರ ದೂರು. ಹಾಗಾಗಿ ಕಾಮಗಾರಿಯನ್ನು ಶೀಘ್ರ ಮುಗಿಸಿ ಜನರಿಗೆ ಕುಡಿಯುವ ನೀರು ಒದಗಿಸಬೇಕು. ಆ ಮೂಲಕ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಗುತ್ತಿಗೆದಾರರ ಜತೆ ಮಾತನಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ. ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
    | ಎ.ಜಿ.ಎಡಕೆ ಪಿಡಿಒ ಅರಟಾಳ

    ಕಾಮಗಾರಿಯಲ್ಲಿ ಪೈಪ್ ಅಳವಡಿಕೆ, ಮೋಟರ್ ಕೆಲಸ ಮಾತ್ರ ಉಳಿದಿದೆ. ಗುತ್ತಿಗೆದಾರರ ಜತೆಗೆ ಮಾತನಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಉಳಿದ ಕೆಲಸ ಮುಗಿಸುವುದಾಗಿ ತಿಳಿಸಿದ್ದಾರೆ.
    | ಈರಣ್ಣ ವಾಲಿ ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

    | ಶ್ರೀಶೈಲ ಮಾಳಿ ಅರಟಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts