More

    ಹಸಿ ಕಸದಿಂದ ಸಾವಯವ ಗೊಬ್ಬರ

    ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ

    ಪಟ್ಟಣದ ಮನೆ ಮನೆಯಿಂದ ಸಂಗ್ರಹಿಸುವ ಕೊಳೆಯುವ ಕಸ (ಹಸಿ ಕಸ)ದಿಂದ ಸಾವಯವ ಗೊಬ್ಬರ ತಯಾರಿಸಿ, ರೈತರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಗೊಬ್ಬರ ನೀಡಲು ಇಲ್ಲಿನ ಪುರಸಭೆ ನಿರ್ಧರಿಸಿದೆ.

    ಎರಡು ವರ್ಷದ ಹಿಂದೆ ಪುರಸಭೆ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆಗೆ ಚಾಲನೆ ನೀಡಿದ್ದು, ಈ ಮೂಲಕ ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸಲು ಪಣತೊಟ್ಟಿದೆ. ಈಗ ಸಂಗ್ರಹಿಸಿದ ಕಸದಿಂದ ಸಾವಯವ ಗೊಬ್ಬರ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

    ಪುರಸಭೆ ವರ್ಷದ ಹಿಂದೆ ಬ್ಯಾಡಗಿ-ರಟ್ಟಿಹಳ್ಳಿ ರಸ್ತೆಯ ಗುಡ್ಡದ ಬಳಿಯಿರುವ ತ್ಯಾಜ್ಯ ವಿಲೇವಾರಿ ಘಟಕದ ಪಕ್ಕದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಸಾವಯವ ಗೊಬ್ಬರ ತಯಾರಿಸುವ ಘಟಕ ಆರಂಭಿಸಿದೆ. 32*65 ಅಳತೆಯ ವಿಶಾಲವಾದ ಶೆಡ್​ನಲ್ಲಿ ಮನೆಗಳಿಂದ ಪ್ರತಿದಿನ ಸಂಗ್ರಹಿಸಿದ ಹಸಿ ಕಸ ವಿಂಗಡಿಸಲಾಗುತ್ತಿದೆ. 4*16 ಅಳತೆಯ 16 ತೊಟ್ಟಿ ನಿರ್ವಿುಸಿದ್ದು, ಮೊದಲ ಬಾರಿಗೆ ಸುಮಾರು 4 ಟನ್ ಗೊಬ್ಬರ ಉತ್ಪಾದಿಸಿದೆ. 25 ಕೆಜಿ ತೂಕದ 100ಕ್ಕೂ ಹೆಚ್ಚು ಬ್ಯಾಗ್ ಸಿದ್ಧಪಡಿಸಿದೆ.

    ರೈತರಿಗೆ ಅನುಕೂಲ: ಖಾಸಗಿ ವ್ಯಕ್ತಿಗಳು ತಯಾರಿಸುವ ಸಾವಯವ ಗೊಬ್ಬರದ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಪುರಸಭೆ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ‘ದರ ನಿಗದಿ ಮಾಡಿಲ್ಲ. ಈ ಕುರಿತು ಬೇರೆ ಬೇರೆ ಕಡೆಗಳಲ್ಲಿ ಮಾರಾಟದ ವ್ಯವಸ್ಥೆ ತಿಳಿದುಕೊಂಡು ನಿಗದಿಪಡಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಖಾಸಗಿ ಗೊಬ್ಬರ ಉತ್ಪಾದಕರು ಕೆಜಿಗೆ ಕನಿಷ್ಠ 7 ರೂ.ನಂತೆ ಮಾರುತ್ತಿದ್ದು, ರೈತರ ಹಿತದೃಷ್ಟಿಯಿಂದ ಒಂದೆರಡು ರೂಪಾಯಿ ಕಡಿಮೆ ಮಾಡಬೇಕೆನ್ನುವ ಬೇಡಿಕೆ ರೈತ ವಲಯದಿಂದ ಕೇಳಿಬಂದಿದೆ. ಗೊಬ್ಬರ ಉತ್ಪಾದನೆ ಘಟಕದಿಂದ ಪುರಸಭೆ ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.

    ಪುರಸಭೆ ವಾಣಿಜ್ಯ ದೃಷ್ಟಿಯಿಂದ ಮಾತ್ರ ಸಾವಯವ ಗೊಬ್ಬರ ತಯಾರಿಸುತ್ತಿಲ್ಲ. ಮನೆ ಮನೆಯಿಂದ ಸಂಗ್ರಹಿಸಿದ ಕಸದಲ್ಲಿ ಮರುಬಳಕೆಯಾಗುವ ಪ್ಲಾಸ್ಟಿಕ್ ಹಾಗೂ ಇತರ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಿ, ತರಕಾರಿ, ಹಣ್ಣು ಹಂಪಲು ಸಿಪ್ಪೆ, ಗಿಡಗಂಟಿಗಳ ಎಲೆಗಳು ಸೇರಿದಂತೆ ಕೆಲ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ಸಿದ್ಧವಾಗುತ್ತಿದೆ. 25 ಕೆಜಿ ಬ್ಯಾಗ್ ಮಾರಾಟಕ್ಕೆ ಸಿದ್ಧವಾಗಿವೆ. ದರ ನಿಗದಿಪಡಿಸಿದ ಬಳಿಕ ಹರಾಜು ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.

    | ವಿ.ಎಂ. ಪೂಜಾರ, ಮುಖ್ಯಾಧಿಕಾರಿ

    ಪುರಸಭೆ ಕಸದಿಂದ ರಸ ಮಾಡುವ ಮೂಲಕ ಸಾವಯವ ಗೊಬ್ಬರ ಉತ್ಪಾದನೆ ಮಾಡುತ್ತಿರುವುದು ಪರಿಸರ ಹಾಗೂ ಆದಾಯದ ದೃಷ್ಟಿಯಿಂದ ಉತ್ತಮ ಕಾರ್ಯವಾಗಿದೆ. ಗುಣಮಟ್ಟದ ಗೊಬ್ಬರ ತಯಾರಿಸಿ, ಸ್ಥಳೀಯ ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದಲ್ಲಿ ಹೆಚ್ಚು ಅನುಕೂಲವಾಗಲಿದೆ.

    | ಶಂಭಣ್ಣ ಎಲಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts