More

    ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್

    ಮಂಗಳೂರು: ಅರಬ್ಬಿ ಸಮುದ್ರದ ಲಕ್ಷದ್ವೀಪ ಮತ್ತು ಆಗ್ನೇಯ ಹಾಗೂ ಪೂರ್ವಮಧ್ಯಭಾಗದಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಪ್ರದೇಶದಿಂದಾಗಿ ದ.ಕ.ಜಿಲ್ಲೆಯಲ್ಲಿ ಮಳೆ ವಾತಾವರಣ ಕಂಡುಬಂದಿದೆ.
    ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಸರಾಸರಿ 115.6 ಮಿ.ಮೀ ನಿಂದ 204.4 ಮಿ.ಮೀ. ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    75ರಿಂದ 85 ಕಿ.ಮೀ ವೇಗದಲ್ಲಿ ಸಮುದ್ರದ ಕಡೆಯಿಂದ ಬಲವಾದ ಗಾಳಿ ಬೀಸಲಿದೆ. ಸಮುದ್ರದಲ್ಲಿಯೂ ಅಲೆಗಳ ಅಬ್ಬರ ಹೆಚ್ಚಾಗಲಿದ್ದು, ಜೂ.3ರವರೆಗೆ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಜಿಲ್ಲಾ ಕಂಟ್ರೋಲ್ ರೂಂ 1077ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

    ಸಾಧಾರಣ ಮಳೆ: ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗಿನವರೆಗೆ ಸಾಧಾರಣ ಮಳೆಯಾಗಿದೆ. ಭಾನುವಾರ ಹಗಲು ವೇಳೆ ಮೋಡ ಕವಿದ ವಾತಾವರಣ ಕಂಡುಬಂದಿದೆ. ಸಾಯಂಕಾಲ ವಿವಿಧೆಡೆ ಸಾಧಾರಣದಿಂದ ಉತ್ತಮ ಮಳೆ ಸುರಿದಿದೆ. ಬೆಳ್ತಂಗಡಿ ತಾಲೂಕಿನ ಕನ್ಯಾನ, ಗುರಿಪಳ್ಳ, ಕಡಬ ತಾಲೂಕಿನ ವಿವಿಧೆಡೆ, ಸುಳ್ಯ ತಾಲೂಕಿನ ವಿವಿಧೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಹಗಲು ದಟ್ಟ ಮೋಡ ಕವಿದ ವಾತಾರಣವಿತ್ತು. ರಾತ್ರಿ 8 ಗಂಟೆ ವೇಳೆಗೆ ಉತ್ತಮ ಮಳೆ ಸುರಿದಿದೆ. ಕರಾವಳಿಗೆ ಮುಂಗಾರು ಪ್ರವೇಶಿಸಲು ಕ್ಷಣಗಣನೆ ಆರಂಭವಾಗಿದೆ.

    ಸಿಡಿಲಿಗೆ 2 ದನ, ಕರು ಬಲಿ
    ಉಡುಪಿ: ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ತುಂತುರು ಮಳೆಯಾಗಿದ್ದು, ಭಾನುವಾರ ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು. ಸಾಯಂಕಾಲ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು, ಬ್ರಹ್ಮಾವರ, ಹೆಬ್ರಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಸಿದ್ದಾಪುರ ಕಮಲಶಿಲೆ, ಹೊಸಂಗಡಿ, ಉಳ್ಳೂರು 74, ಮಚ್ಚಟ್ಟು, ಗೋಳಿಯಂಗಡಿ, ಬೆಳ್ವೆ, ಅಲ್ಬಾಡಿ, ಆರ್ಡಿ, ಹಿರಿಯಡ್ಕ, ಬಾಕೂರ್ರ್, ಪಡುಬಿದ್ರಿ ಸುತ್ತಮುತ್ತಲಿನಲ್ಲಿ ಭಾರಿ ಮಳೆಯಾಗಿದೆ. ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮ ಸಂತೋಷ ಶೆಟ್ಟಿ ಎಂಬವರ ಹಟ್ಟಿಗೆ ಸಿಡಿಲೆರೆಗಿ ಒಂದು ಕರು, ಎರಡು ದನ ಮೃತಪಟ್ಟಿವೆ.

    ಕಾಸರಗೋಡಿನಲ್ಲಿ ಯೆಲ್ಲೋ ಅಲರ್ಟ್
    ಕಾಸರಗೋಡು: ಅರಬ್ಬಿ ಕಡಲಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ 24 ತಾಸುಗಳಲ್ಲಿ ಕೇರಳದಲ್ಲಿ ಬಿರುಸಿನ ಗಾಳಿ ಯೊಂದಿಗೆ ಮಳೆ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ವಾಯುಭಾರ ಕುಸಿತದ ಪರಿಣಾಮ ಸುಂಟರ ಗಾಳಿಯೊಂದಿಗೆ ಮುಂದಿನ 48 ತಾಸುಗಳ ಕಾಲ ಭಾರಿ ಮಳೆಯಾಗಲಿದೆ. ‘ನಿಸರ್ಗ’ ಸುಂಟರಗಾಳಿ ಪರಿಣಾಮ ಕೇರಳದ ನಾನಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಹಾಗೂ ತಾಸಿಗೆ 45ರಿಂದ 55ಹಾಗೂ ಇನ್ನು ಕೆಲವೊಮ್ಮೆ 65ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಸಮುದ್ರ ಪ್ರಕ್ಷುಬ್ಧಗೊಳ್ಳುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಜೂನ್ 2ರಂದು ಕಾಸರಗೋಡು ಮತ್ತು ಕಣ್ಣೂರು ಒಳಗೊಂಡಂತೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts