More

    ಕಾಯ್ದೆ ತಿದ್ದುಪಡಿಗೆ ವಿರೋಧ

    ಮಂಡ್ಯ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಡಿಸಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ, ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ಗೆ ಮನವಿ ಸಲ್ಲಿಸಿದರು.

    ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಇದೀಗ ರೈತರನ್ನೇ ಸಂಪೂರ್ಣ ನಾಶ ಮಾಡಲು ಹೊರಟಿದೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದೆ. 1961ರಲ್ಲಿ ಅಸ್ತಿತ್ವಕ್ಕೆ ಬಂದ ಭೂ ಸುಧಾರಣಾ ಕಾಯ್ದೆಯನ್ನು 1974ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಇದರಿಂದ ರೈತರಲ್ಲದವರಿಗೆ ಭೂಮಿ ಸಿಗುವಂತಿರಲಿಲ್ಲ. ಆದರೆ, ಆ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವುದನ್ನು ಕೈಬಿಡಬೇಕು. ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಕೆಆರ್‌ಎಸ್ ಡ್ಯಾಂನಿಂದ ತಕ್ಷಣವೇ ನೀರು ಹರಿಸಬೇಕು. ಕಟಾವು ಹಂತಕ್ಕೆ ಬಂದಿರುವ ಕಬ್ಬನ್ನು ನುರಿಸಲು ತಕ್ಷಣವೇ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಲಾಕ್‌ಡೌನ್‌ನಿಂದಾಗಿ ನಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರ ಘೋಷಣೆ ಮಾಡಬೇಕು. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಲು ಅನುಕೂಲವಾಗುವಂತೆ ಹೊಸ ಸಾಲ ನೀಡಲು ಸಹಕಾರಿ ಮತ್ತು ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು. ಕೇಂದ್ರ ಸರ್ಕಾರದ ನೀರು ನಿರ್ವಹಣಾ ಮಂಡಳಿ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುವಂತೆ ಪದೇ ಪದೆ ಆದೇಶಿಸಿರುವುದು ಸರಿಯಲ್ಲ. ಪರಿಸ್ಥಿತಿ ಅವಲೋಕಿಸಿ ಆದೇಶ ನೀಡದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಪ್ರತಿಭಟನೆಯಲ್ಲಿ ವಿಭಾಗೀಯ ಉಪಾಧ್ಯಕ್ಷ ಎ.ಎಲ್.ಕೆಂಪುಗೌಡ, ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಕೆ.ಆರ್.ಜಯರಾಮ್, ನಂಜುಂಡಯ್ಯ ಕೀಳಘಟ್ಟ, ಲತಾ ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts