More

    ದೇವರ ನಾಡಲ್ಲಿ ಬಿಜೆಪಿ ಖಾತೆ ತೆರೆಯುವುದೆ?

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಕೇರಳದ ಎಲ್ಲ 20 ಕ್ಷೇತ್ರಗಳಿಗೆ ಇದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ವಯನಾಡ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಣದಲ್ಲಿರುವ ತಿರುವನಂತಪುರಂ, ಕೆಸಿ ವೇಣುಗೋಪಾಲ್​ರ ಅಲಪು್ಪಳ ಸೇರಿ ಹಲವು ಹೈಪ್ರೊಫೈಲ್ ಕ್ಷೇತ್ರಗಳಿಗೆ ಸಾಕ್ಷಿಯಾಗಿರುವ ಕೇರಳ, ಈ ಬಾರಿ ರಾಷ್ಟ್ರವ್ಯಾಪಿ ಗಮನಸೆಳೆದಿದೆ.

    ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಎಡಪಕ್ಷಗಳ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ನಡುವೆ ನೇರಾನೇರ ಸೆಣಸಾಟ ಏರ್ಪಟ್ಟಿದ್ದರೂ, ಬಿಜೆಪಿ ಕೂಡ ಪ್ರಬಲ ಅಭ್ಯರ್ಥಿಗಳನ್ನು ಹಾಕಿರುವುದರಿಂದ ಎರಡೂ ಮೈತ್ರಿಕೂಟಗಳಿಗೆ ಕೇಸರಿಪಡೆ ಪ್ರಬಲ ಸವಾಲೊಡ್ಡುತ್ತಿದೆ.

    ಅತಿಹೆಚ್ಚು ಆರ್​ಎಸ್​ಎಸ್ ಶಾಖೆಗಳು ಹಾಗೂ ದೇವಾಲಯಗಳ ನಾಡಾಗಿದ್ದರೂ, ಬಿಜೆಪಿಯ ಹಿಂದುತ್ವ-ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಕೇರಳದ ಮತದಾರರು ಅಷ್ಟೊಂದು ಒಲವು ತೋರಿಲ್ಲ. ಇಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳದ್ದೇ ಮೇಲಾಟ. ಇದಕ್ಕೆ ಹಿಂದಿನ ಹಲವು ಚುನಾವಣೆಗಳೇ ಉದಾಹರಣೆ. ಹೀಗಾಗಿ, ಕೇರಳದಲ್ಲಿ ಕನಿಷ್ಠ 2-3 ಸೀಟುಗಳನ್ನಾದರೂ ಗೆಲ್ಲಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ವರಿಷ್ಠರು ಬಿಜೆಪಿಯ ಪ್ರಭಾವಿ ನಾಯಕರನ್ನು ಲೋಕಸಭೆ ಕಣಕ್ಕಿಳಿಸಿದ್ದಾರೆ. ಅದು ಎಷ್ಟರಮಟ್ಟಿಗೆ ಫಲ ಕೊಡಲಿದೆ ಎನ್ನುವುದು ಜೂನ್ 4ರಂದು ಗೊತ್ತಾಗಲಿದೆ.

    ದೇವರ ನಾಡಲ್ಲಿ ಬಿಜೆಪಿ ಖಾತೆ ತೆರೆಯುವುದೆ?

    ರಾಜೀವ್​ಗೆ ಮೊದಲ ಚುನಾವಣೆ

    ಕೇಂದ್ರ ಸಚಿವ, ರಾಜ್ಯಸಭೆ ಸದಸ್ಯ, ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ತಮ್ಮ ರಾಜಕೀಯ ಜೀವನದ ಮೊದಲ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಜೀವ್, ಚುನಾವಣೆ ಗೆದ್ದರೆ ಅದು ಖಂಡಿತವಾಗಿಯೂ ಐತಿಹಾಸಿಕ ಎನಿಸಿಕೊಳ್ಳಲಿದೆ. ಕಳೆದ 3 ಚುನಾವಣೆ ಸೇರಿ ಒಟ್ಟು 9 ಬಾರಿ ತಿರುವನಂತಪುರಂ ಸೀಟನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದರೆ, ಸಿಪಿಐ 4 ಬಾರಿ ಇಲ್ಲಿ ಗೆಲುವು ಸಾಧಿಸಿದೆ. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಕ್ರಮವಾಗಿ 32.32% ಮತ್ತು 31.3% ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ಕಳೆದ ಚುನಾವಣೆಯಲ್ಲಿ ಶಶಿ ತರೂರ್ ಬಿಜೆಪಿ ಅಭ್ಯರ್ಥಿಗಿಂತ 10% ಮತಗಳನ್ನು ಹೆಚ್ಚು ಪಡೆದಿದ್ದರು. 2009ರಿಂದ 3 ಬಾರಿ ಗೆದ್ದಿರುವ ತರೂರ್, ಕ್ಷೇತ್ರದಲ್ಲಿ   ಅತ್ಯಧಿಕ ಬಾರಿ ಗೆದ್ದಿರುವ ಸಂಸದರೂ ಹೌದು. ಸಿಪಿಐನಿಂದ 2005ರಲ್ಲಿ ತಿರುವನಂತರಪುರಂ ಲೋಕಸಭೆ ಉಪ ಚುನಾವಣೆ ಗೆದ್ದಿದ್ದ 78 ವರ್ಷದ ಪನ್ನಿಯನ್ ರವೀಂದ್ರನ್ ಸ್ಪರ್ಧಿಸುತ್ತಿದ್ದಾರೆ.

    ದೇವರ ನಾಡಲ್ಲಿ ಬಿಜೆಪಿ ಖಾತೆ ತೆರೆಯುವುದೆ?

    ಮುರಳೀಧರನ್​ಗೆ ಸವಾಲು

    ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುತ್ತಿರುವ ರಾಜ್ಯದ ಅಟ್ಟಿಂಗಲ್ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸಚಿವ ವಿ. ಮುರಳೀಧರನ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಹಾಲಿ ಸಂಸದ, ಕಾಂಗ್ರೆಸ್​ನ ಅಡೂರು ಪ್ರಕಾಶ್ ಮತ್ತು ಎಲ್​ಡಿಎಫ್​ನ ಹಾಲಿ ಶಾಸಕ ವಿ. ಜಾಯ್ರಿಂದ ಸವಾಲು ಎದುರಿಸುತ್ತಿದ್ದಾರೆ. 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದ ಎಲ್​ಡಿಎಫ್​ನ್ನು (ಸಿಪಿಐ) 2019ರ ಚುನಾವಣೆಯಲ್ಲಿ ಸೋಲಿಸಿದ್ದ ಅಡೂರು ಪ್ರಕಾಶ್, ಎರಡನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಶೋಭಾ ಸುರೇಂದ್ರನ್ ಅವರು ಬಿಜೆಪಿ ಅಭ್ಯರ್ಥಿಯಾಗಿ, ಪಕ್ಷದ ಮತಪಾಲನ್ನು ಶೇ.10.5ರಿಂದ ಶೇ.25ಕ್ಕೆ ಏರಿಸಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯಿತ್ತು. ಆದರೆ, ಆಂತರಿಕ ಗುಂಪುಗಾರಿಕೆ ಪರಿಣಾಮ ಅಳಪುಳದಲ್ಲಿ ಶೋಭಾ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 3ನೇ ಸ್ಥಾನಿಯಾಗಿತ್ತು. ಕೇಂದ್ರ ಸಚಿವ ಮುರಳೀಧರನ್ ಕಣದಲ್ಲಿದ್ದರೂ, ಒಂದನೇ ಸ್ಥಾನಕ್ಕೇರುವ ದೈತ್ಯ ಸವಾಲನ್ನು ಹಿಮ್ಮೆಟ್ಟುವುದು ಸುಲಭದ ಮಾತಲ್ಲ.

    ಅನಿಲ್ ಆಂಟನಿಗೆ ಚರ್ಚ್ ಬೆಂಬಲ

    ದೇವರ ನಾಡಲ್ಲಿ ಬಿಜೆಪಿ ಖಾತೆ ತೆರೆಯುವುದೆ? ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಎ.ಕೆ. ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿ ಅಭ್ಯರ್ಥಿಯಾಗಿ ಪಟ್ಟಣಂತಿಟ್ಟ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅಚ್ಚರಿ ಎಂದರೆ, ಈ ಬಾರಿ ಕ್ಷೇತ್ರದ ‘ಬಿಲೀವರ್ಸ್ ಈಸ್ಟರ್ನ್ ಚರ್ಚ್’ ಎಂಬ ಕ್ರಿಶ್ಚಿಯನ್ನರ ಸಂಸ್ಥೆ ಅನಿಲ್ ಆಂಟಿನಿಗೆ ಬೆಂಬಲ ನೀಡುವುದಾಗಿ ಬಹಿರಂಗ ಘೋಷಣೆ ಮಾಡಿದೆ. ಕೇರಳದ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರಿಶ್ಚಿಯನ್ ಸಂಸ್ಥೆಯೊಂದು ಬಿಜೆಪಿ ಪರ ತನ್ನ ನಿಲುವು ಘೋಷಿಸಿರುವುದು ವಿಶೇಷ. ಈ ಕ್ಷೇತ್ರದಲ್ಲಿ ಸುಮಾರು 10 ಸಾವಿರ ಕುಟುಂಬಗಳು ಈ ಸಂಸ್ಥೆಯೊಂದಿಗೆ ಜೋಡಿಸಿಕೊಂಡಿವೆ. ಪಟ್ಟಣಂತಿಟ್ಟದಲ್ಲಿ ಕಾಂಗ್ರೆಸ್​ನ ಹಾಲಿ ಸಂಸದ ಆಂಟೋ ಆಂಟನಿ ಮತ್ತು ಸಿಪಿಎಂ ನಾಯಕ, ರಾಜ್ಯದ ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಕಣದಲ್ಲಿದ್ದಾರೆ. ಮೂವರೂ ಕ್ರಿಶ್ಚಿಯನ್ ಅಭ್ಯರ್ಥಿ ಗಳಾಗಿರುವುದರಿಂದ ಚರ್ಚ್​ಗಳ ಬೆಂಬಲ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ಎ.ಕೆ. ಆಂಟನಿ ತಮ್ಮ ಪುತ್ರ ಅನಿಲ್ ಆಂಟನಿಯನ್ನು ಬೆಂಬಲಿಸಿಲ್ಲ. ಬದಲಿಗೆ, ಕಾಂಗ್ರೆಸ್ ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

    ದೇವರ ನಾಡಲ್ಲಿ ಬಿಜೆಪಿ ಖಾತೆ ತೆರೆಯುವುದೆ?

    ವಯನಾಡಿನ ಚಿತ್ತ ಯಾರತ್ತ?

    ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದ ಬಗ್ಗೆ ಕುತೂಹಲವನ್ನು ಹಾಗೇ ಉಳಿಸಿಕೊಂಡು, ಕೇರಳದ ವಯನಾಡ್ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವುದರಿಂದ, ಇಡೀ ದೇಶದ ಕಣ್ಣು ಈ ಕ್ಷೇತ್ರದ ಮೇಲೆ ಬಿದ್ದಿದೆ. ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾರೀ ಸವಾಲೊಡ್ಡುವ ಸಾಧ್ಯತೆ ಮನಗಂಡಿದ್ದ ರಾಹುಲ್, ವಯನಾಡ್​ನ್ನೂ ಆಯ್ಕೆ ಮಾಡಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ 7 ಲಕ್ಷಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಸಿಪಿಐನ ಮಹಿಳಾ ಅಭ್ಯರ್ಥಿ ಅನ್ನೀ ರಾಜಾ ವಿರುದ್ಧ ಗೆದ್ದಿದ್ದ ರಾಹುಲ್ ಗಾಂಧಿಗೆ, ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಕೂಡ ಸವಾಲೊಡ್ಡಿದ್ದಾರೆ. ಅನ್ನೀ ರಾಜಾ ಮತ್ತೊಮ್ಮೆ ಎಲ್​ಡಿಎಫ್​ನ್ನು ಪ್ರತಿನಿಧಿಸುತ್ತಿದ್ದಾರೆ. 2019ರಲ್ಲಿ ಅಮೇಠಿ ಸೋಲಿನಂತೆ, 2024ರಲ್ಲಿ ವಯನಾಡ್​ನಲ್ಲೂ ರಾಹುಲ್ ಸೋಲಲಿದ್ದಾರೆ ಎಂದು ಸುರೇಂದ್ರನ್ ಭವಿಷ್ಯ ನುಡಿದಿದ್ದಾರೆ. ಹಾಗಂತ, ರಾಹುಲ್​ಗೆ ಕ್ಷೇತ್ರದಾದ್ಯಂತ ಜನಬೆಂಬಲ ಇರುವುದು ಸುಳ್ಳೇನಲ್ಲ. 2009ರಿಂದ ವಯನಾಡ್​ನ್ನು ಕಾಂಗ್ರೆಸ್ ಗೆಲ್ಲುತ್ತಿದ್ದು, ನಾಲ್ಕನೇ ಬಾರಿಗೆ ವಿಜಯಮಾಲೆ ಧರಿಸಿಕೊಳ್ಳುವ ತವಕದಲ್ಲಿದೆ. ಎಲ್​ಡಿಎಫ್ ಅಭ್ಯರ್ಥಿ ಅನ್ನೀ ರಾಜಾ ಪರ ಪ್ರಚಾರ ನಡೆಸಿರುವ ಸಿಎಂ ಪಿಣರಾಯಿ ವಿಜಯನ್, ಕೇರಳದಿಂದ ರಾಹುಲ್ ಯಾವ ಉದ್ದೇಶಕ್ಕಾಗಿ ಸ್ಪರ್ಧಿಸುತ್ತಿದ್ದಾರೆ? ಕೇರಳಕ್ಕೆ, ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.

    ದೇವರ ನಾಡಲ್ಲಿ ಬಿಜೆಪಿ ಖಾತೆ ತೆರೆಯುವುದೆ?

    ಮತ್ತೆ ಗೆಲ್ತಾರಾ ಕೆಸಿ ವೇಣು?

    2019ರ ಲೋಕಸಭೆ ಚುನಾವಣೆ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಈ ಬಾರಿ ಮತ್ತೆ ಅಲಪುಳ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಕಳೆದ ಬಾರಿ ಕೇರಳದ 20 ಸೀಟುಗಳಲ್ಲಿ ಯುಡಿಎಫ್ 19 ಸೀಟುಗಳನ್ನು ಗೆದ್ದಿತ್ತು. ಎಡಪಕ್ಷಗಳ ನೇತೃತ್ವದ ಎಲ್​ಡಿಎಫ್ ಅಲಪುಳ ಹೊರತುಪಡಿಸಿ ಉಳಿದೆಲ್ಲೆಡೆ ಮುಖಭಂಗ ಅನುಭವಿಸಿತ್ತು. ಈ ಬಾರಿ ಕೆ.ಸಿ. ವೇಣುಗೋಪಾಲ್ ಮತ್ತು ಬಿಜೆಪಿಯ ಫೈರ್​ಬ್ರಾಂಡ್ ಶೋಭಾ ಸುರೇಂದ್ರನ್ ಕಣದಲ್ಲಿದ್ದಾರೆ. ವೇಣುಗೋಪಾಲ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದು, ರಾಹುಲ್ ಗಾಂಧಿಗೂ ಆಪ್ತರಾಗಿದ್ದಾರೆ. ಅಲಪುಳದಲ್ಲಿ ಶೇ.72ರಷ್ಟು ಹಿಂದೂ, ಕ್ರಿಶ್ಚಿಯನ್ನರು 14% ಮತ್ತು 13% ಮುಸ್ಲಿಮರಿದ್ದಾರೆ. ಅಲಪುಳಕ್ಕೆ ಮಹಿಳಾ ಕೇಂದ್ರ ಸಚಿವರನ್ನು ನೀಡುವುದು ಮೋದಿಯವರ ಗ್ಯಾರಂಟಿ ಎಂದೇ ಬಿಜೆಪಿ ಮಹಿಳಾ ಅಭ್ಯರ್ಥಿ ಶೋಭಾ ಸುರೇಂದ್ರನ್ ಪ್ರಚಾರ ಮಾಡುತ್ತಿದ್ದಾರೆ. ಈಳವ ಸಮುದಾಯದ ಶೋಭಾಗೆ, ಈಳವ (ಒಬಿಸಿ) ಸಮುದಾಯದ ಪ್ರಬಲ ಬೆಂಬಲ ಸಿಗುವ ನಿರೀಕ್ಷೆಯಲ್ಲಿದ್ದಾರೆ.

    ಬಿಜೆಪಿಯ ಉಚ್ಚಾಟನೆಗೆ ಹೆದರುವುದಿಲ್ಲ, ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ: ಈಶ್ವರಪ್ಪ

    ಲೋಕಸಭೆ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಮೋದಿ ಕೆಂಡಾಮಂಡಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts