More

    ಶಿಕ್ಷಣದಿಂದ ಮಾತ್ರ ಸನ್ಮಾರ್ಗ ಪ್ರಾಪ್ತಿ

    ಕೊಳ್ಳೇಗಾಲ: ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳನ್ನು ಪಾಲಕರು ಪ್ರೇರೇಪಿಸಬೇಕು ಎಂದು ಎಚ್.ಕೆ. ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಎಂದು ಹೇಳಿದರು.

    ಪಟ್ಟಣದ ಗುರುಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಸನ್ಮಾರ್ಗ ಸಿಗುತ್ತದೆ. ಪಾಲಕರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಹಾಗೆಯೇ ಅವರಿಗೆ ಚಿಕ್ಕವಯಸ್ಸಿನಲ್ಲೇ ಸಮಾಜಮುಖಿ ಕೆಲಸವನ್ನು ಮಾಡುವಂತೆ ಪ್ರೇರೇಪಿಸಿ ಎಂದರು.

    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಮಾತನಾಡಿ, ಹೆಣ್ಣು ಇಲ್ಲದ ಮನೆ ಸ್ಮಶಾನವಿದ್ದಂತೆ. ಎಲ್ಲಿ ಹೆಣ್ಣು ಮಗಳಿರುತ್ತಾಳೋ ಅಲ್ಲಿ ಲಕ್ಷ್ಮೀ ವಾಸ ಮಾಡುತ್ತಾಳೆ. ತಂದೆ-ತಾಯಿ ಹೇಗಿರುತ್ತಾರೋ ಹಾಗೆ ಮಕ್ಕಳು ಬೆಳೆಯುತ್ತಾರೆ. ಮನೆ ಹಾಗೂ ಮನಸ್ಸು ಚೆನ್ನಾಗಿದ್ದರೆ ನೆಮ್ಮದಿ ಇರುತ್ತದೆ. ಬಾಲ್ಯವಿವಾಹ, ದುಶ್ಚಟ, ಮದ್ಯ ಸೇವನೆಯಿಂದ ಮಕ್ಕಳನ್ನು ದೂರವಿಡಿ ಎಂದರು.

    ಧರ್ಮಸ್ಥಳ ಸಂಸ್ಥೆ ಬಡ ಜನರ ಪರವಾಗಿದೆ. ಜಿಲ್ಲೆಯಲ್ಲಿ ಅತ್ಯಂತ ಸಾಧನೆ ಮಾಡಿದೆ. ಕೊಳ್ಳೇಗಾಲದಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ. ಕೆರೆ ಅಭಿವೃದ್ಧಿ ಹಾಗೂ ಸೂರಿಲ್ಲದವರಿಗೆ ವಾಸದ ಮನೆಗಳನ್ನು ಕಟ್ಟಿಕೊಟ್ಟಿದೆ. ಅಂತೆಯೇ, ಇಲ್ಲಿಯ ಜನರು ಸಂಸ್ಥೆಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

    ಮುದ್ದು ವೀರಪ್ಪ ಸ್ಮಾರಕ ಆಸ್ಪತ್ರೆಯ ಡಾ.ಎನ್.ಬಿ.ಸೋಮಪ್ರಭ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅದರಲ್ಲೂ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಅರಿವಿರಬೇಕು. ಶೇ.30ರಷ್ಟು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಂಡು ಬರುತ್ತಿದೆ. ನಾಚಿಕೆ ಹಾಗೂ ಭಯದಿಂದ ಪ್ರಾರಂಭದಲ್ಲೇ ಚಿಕಿತ್ಸೆ ಪಡೆಯದೆ ಅನಾಹುತಗಳಿಗೆ ಮಹಿಳೆಯರು ಸಿಲುಕುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿಯೆ ವ್ಯೆದ್ಯಕೀಯ ತಪಾಸಣೆಗೆ ಒಳಪಟ್ಟರೆ ಶೇ.90ರಷ್ಟು ಗುಣಮುಖವಾಗಬಹುದು ಎಂದು ಸಲಹೆ ನೀಡಿದರು.

    ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಮಹಿಳೆಯರು ದೇಶದ ಶಕ್ತಿ ಆಗಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಸಾಧನೆ ಮಾಡುತ್ತಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಹಿಳೆಯರ ಸ್ವಾವಲಂಬನೆ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿದೆ ಎಂದರು.

    ಪ್ರಾದೇಶಿಕ ಯೋಜನಾಧಿಕಾರಿ ಮೂಕಾಂಬಿಕೆ , ಜಿಲ್ಲಾ ನಿರ್ದೇಶಕಿ ಲತಾ ಬಂಗೇರ, ಸಂಸ್ಥೆಯ ತಾಲೂಕು ಯೋಜನಾ ಅಧಿಕಾರಿ ದೀನರಾಜಶೆಟ್ಟಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಖಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts