More

    8 ತಿಂಗಳಲ್ಲಿ ಕೇವಲ 60 ಹೆರಿಗೆ! ಇದು ರಟ್ಟಿಹಳ್ಳಿ ಸಾರ್ವಜನಿಕ ಆಸ್ಪತ್ರೆ ವ್ಯಥೆ

    ರಟ್ಟಿಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರು ತುರ್ತ, ಹೆರಿಗೆ ಸೇರಿದಂತೆ ವಿವಿಧ ಚಿಕಿತ್ಸೆಗಾಗಿ ದಾವಣಗೆರೆ ಇಲ್ಲವೆ ಶಿವಮೊಗ್ಗಕ್ಕೆ ತೆರಳುವಂತಾಗಿದ್ದು, ನಿತ್ಯ ಹಲವರಿಗೆ ತೊಂದರೆ ಉಂಟಾಗುತ್ತಿದೆ.

    ಇಲ್ಲಿನ ತಾಲೂಕು ಆಸ್ಪತ್ರೆಗೆ (ಈ ಮೊದಲು ಸಮುದಾಯ ಆರೋಗ್ಯ ಕೇಂದ್ರ) ಒಟ್ಟು 36 ಹುದ್ದೆ ಮಂಜೂರಾಗಿವೆ. ಇದರಲ್ಲಿ 22 ಹುದ್ದೆಗಳು ಖಾಲಿ ಇವೆ. ಒಬ್ಬ ಆಡಳಿತ ವೈದ್ಯಾಧಿಕಾರಿ ಸೇರಿದಂತೆ ಮೂವರು ತಜ್ಞ ವೈದ್ಯರು ಇರಬೇಕು. ಸದ್ಯ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಇದ್ದಾರೆ. ಒಬ್ಬ ಹೆರಿಗೆ ತಜ್ಞರು ಸೇವೆ ಸಲ್ಲಿಸುತ್ತಿದ್ದು, ಉಳಿದಂತೆ 3 ಕಾಯಂ ವೈದ್ಯರ ಕೊರತೆ ಇದೆ. ಕ್ಷ-ಕಿರಣ ತಂತ್ರಜ್ಞ 1, ಫಾರ್ವಸಿಸ್ಟ್ 2, ನೇತ್ರ ಸಹಾಯಕ 1, ಪ್ರ.ದ.ಸ. 1, ಕ್ಲರ್ಕ ಕಂ ಟೈಪಿಸ್ಟ್ 1, ವಾಹನ ಚಾಲಕ 1, ಡಿ ಗ್ರುಪ್​ನ 12 ಸೇರಿ 22 ಹುದ್ದೆಗಳು ಖಾಲಿ ಇವೆ.

    ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಕಳೆದ 8 ತಿಂಗಳಲ್ಲಿ ಕೇವಲ 60 ಹೆರಿಗೆ ಪ್ರಕರಣ ದಾಖಲಾಗಿವೆ. ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆಗೆ ಅವಶ್ಯವಿರುವ ಒಪಿಟಿ ಮತ್ತು ಉಪಕರಣಗಳ ಸೌಲಭ್ಯವಿದ್ದರೂ ಸಿಬ್ಬಂದಿ ಕೊರತೆಯಿಂದಾಗಿ ಹಲವರು ಆಸ್ಪತ್ರೆಗೆ ದಾಖಲಾಗಲು ಹಿಂಜರಿಯುತ್ತಿದ್ದಾರೆ. ಬ್ಲಡ್ ಬ್ಯಾಂಕ್, ಅರವಳಿಕೆ ತಜ್ಞರು ಇಲ್ಲ. ಹೀಗಾಗಿ, ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡುತ್ತಿಲ್ಲ. ಹೆರಿಗೆ ಶಸ್ತ್ರಚಿಕಿತ್ಸೆಯ ಅಗತ್ಯತೆ ಇರುವವರು ಶಿಕಾರಿಪುರ ಮತ್ತು ಮಾಸೂರು ಆರೋಗ್ಯ ಕೇಂದ್ರಕ್ಕೆ ತೆರಳುವುದು ಅನಿವಾರ್ಯವಾಗಿದೆ. ತುರ್ತು ಪರಿಸ್ಥಿತಿ ಮತ್ತು ರಾತ್ರಿ ವೇಳೆ ವೈದ್ಯರು ಮತ್ತು ಸಿಬ್ಬಂದಿ ಇಲ್ಲದಿರುವುದರಿಂದ ರೋಗಿಗಳು ಅನಿವಾರ್ಯವಾಗಿ ಚಿಕಿತ್ಸೆಗೆ ದೂರದ ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಗೆ ತೆರಳಬೇಕಾಗಿದೆ.

    ಶಿಥಿಲಗೊಂಡ ವಸತಿ ಗೃಹಗಳು:

    ಆಸ್ಪತ್ರೆಯ ಆವರಣದ ಒಂದು ಬದಿಯಲ್ಲಿ 9 ವಸತಿಗೃಹಗಳಿವೆ. ಇವೆಲ್ಲ ಶಿಥಿಲಾವಸ್ಥೆಗೆ ತಲುಪಿದ್ದು ವಾಸಕ್ಕೆ ಯೋಗ್ಯವಾಗಿಲ್ಲ. ಹೊಸ ವಸತಿ ಗೃಹಗಳ ನಿರ್ವಣಕ್ಕೆ ಆಡಳಿತ ವೈದ್ಯಾಧಿಕಾರಿ ಇತ್ತೀಚೆಗೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಬಾಡಿಗೆ ಮನೆಗಳಲ್ಲಿದ್ದಾರೆ.

    ಆಸ್ಪತ್ರೆ ಹಿಂಭಾಗದಲ್ಲಿ ಶವಾಗಾರ ಇದೆ. ಇಲ್ಲಿಗೆ ತೆರಳಲು ಕಚ್ಚಾ ರಸ್ತೆ ಇದೆ. ಅಪಘಾತ ಇತರೆ ಅವಘಡಗಳಿಂದ ಮೃತಪಟ್ಟವರ ಶವಗಳನ್ನು ತರುವ ವಾಹನಗಳು ಮಳೆಗಾಲದಲ್ಲಿ ಕೆಸರಿನಲ್ಲಿ ಸಿಲುಕಿಕೊಂಡು ತೊಂದರೆಯಾಗುತ್ತಿದೆ.

    ನೀಗದ ಸಿಬ್ಬಂದಿ ಕೊರತೆ

    ರಟ್ಟಿಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಘೊಷಣೆ ಮಾಡಲಾಯಿತು. ಈ ವೇಳೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಎಂಬ ನಾಮಫಲಕ ಅಳವಡಿಸಲಾಯಿತು. ಆದರೆ, ತಾಲೂಕು ಕೇಂದ್ರವಾಗಿ ಐದಾರು ವರ್ಷಗಳೇ ಗತಿಸಿದರೂ ಆರೋಗ್ಯ ಕೇಂದ್ರಕ್ಕೆ ಅವಶ್ಯವಿರುವ ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸಿಲ್ಲ. ಹೆಸರಿಗಷ್ಟೇ ತಾಲೂಕು ಸಾರ್ವಜನಿಕ ಆಸ್ಪತ್ರೆಯಾಗಿದೆ.

    ರಟ್ಟಿಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಮಸ್ಯೆಗಳು ಗಮನಕ್ಕೆ ಬಂದಿವೆ. ಶೀಘ್ರವೇ ಅವಶ್ಯ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಗೆ ಅವಶ್ಯವಿರುವ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಅಧಿವೇಶನದಲ್ಲಿ ಹಲವಾರು ಶಾಸಕರು ಧ್ವನಿ ಎತ್ತಿದ ಸಂದರ್ಭದಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೆ ವೈದ್ಯರು ಮತ್ತು ಸಿಬ್ಬಂದಿ ನೇಮಕ ಅಧಿಕಾರ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸಿಬ್ಬಂದಿ ನೇಮಕವನ್ನು ಹಂತಹಂತವಾಗಿ ಪೂರ್ಣಗೊಳಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.

    | ಯು.ಬಿ. ಬಣಕಾರ, ಶಾಸಕ

    ರಟ್ಟಿಹಳ್ಳಿ ಆಸ್ಪತ್ರೆ ಹಾಗೂ ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿನ ಅವ್ಯವಸ್ಥೆ ನಿವಾರಣೆ ಹಾಗೂ ಸಿಬ್ಬಂದಿ ನೇಮಕಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ) ವತಿಯಿಂದ ಡಿ. 18ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘಟನೆಗಳು, ಸಾರ್ವಜನಿಕರು ಸಕ್ರಿಯ ಬೆಂಬಲ ನೀಡಲಿದ್ದಾರೆ. ಸೌಲಭ್ಯ ಕಲ್ಪಿಸುವುದು ವಿಳಂಬವಾದಲ್ಲಿ ಹೋರಾಟ ಮುಂದುವರಿಯಲಿದೆ.

    | ಯಲ್ಲಪ್ಪ ಮರಾಠೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts