More

    ಕೇವಲ 360 ರೂಪಾಯಿಗೆ ಒಂದು ಟನ್ ಮರಳು…!

    ಕೊಟ್ಟೂರು: ತಾಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನಿಗಳ ನೇತೃತ್ವದಲ್ಲಿ ಮರಳು ನಿಕ್ಷೇಪವನ್ನು ಶೀಘ್ರದಲ್ಲೇ ಪತ್ತೆ ಹಚ್ಚುವ ಕಾರ್ಯವನ್ನು ಆರಂಭಿಸಲಾಗುವುದು ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಬುಧವಾರ ಹೇಳಿದರು. ಮರಳು ಮಾಫಿಯ ಹಾಗೂ ಕೃತಕ ಮರಳು ಅಭಾವವನ್ನು ತಪ್ಪಿಸಲು ಸರ್ಕಾರ ಈ ನೂತನ ಮರುಳ ನೀತಿಯನ್ನು ಜಾರಿಗೆ ತಂದಿದೆ ಎಂದು ತಾಲೂಕು ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

    ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ತಹಸೀಲ್ದಾರ್ ಕಾರ್ಯದರ್ಶಿಯಾಗಿರುತ್ತಾರೆ. ಇಒ, ಡಿವೈಎಸ್ಪಿ, ಎಇಇ, ಜಲಸಂಪನ್ಮೂಲ ಇಲಾಖೆ ಉಪ ನಿರ್ದೇಶಕರು, ಸಹಾಯಕ ಪರಿಸರ ಇಲಾಖೆ ಅಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹಾಗೂ ಗ್ರಾಪಂ ಪಿಡಿಒ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಸಮಿತಿ ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುವವರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಒಂದು ಟನ್ ಮರಳಿಗೆ 360ರೂ. ಸಂದಾಯ ಮಾಡಿ ಮನುಷ್ಯರೇ ಮರಳನ್ನು ಟ್ಯಾಕ್ಟ್ರರ್‌ಗೆ ತುಂಬಿಕೊಳ್ಳಬೇಕು. ಜೆಸಿಬಿ ಬಳಸುವಂತಿಲ್ಲ ಎಂದರು.

    ಮರಳಿಗೆ ಸಂದಾಯವಾದ ಹಣದಲ್ಲಿ 66 ರೂ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂದಾಯಮಾಡಿ ಉಳಿದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸಬೇಕು. ಈ ಮರಳನ್ನು ನಗರ, ಪಟ್ಟಣಗಳಿಗೆ ಸರಬರಾಜು ಮಾಡಲು ಅವಕಾಶವಿಲ್ಲ. ಕೊಟ್ಟೂರು ತಾಲೂಕಿನಲ್ಲಿ ಈಗಾಗಲೇ ಕೊಗಳಿ, ಹ್ಯಾಳ್ಯಾ, ಕುಡತಿನಿ ಮಗ್ಗಿಯಲ್ಲಿ ಮರಳು ನಿಕ್ಷೇಪವಿದ್ದು, ಹೆಚ್ಚಿನ ಮರಳು ನಿಕ್ಷೇಪವನ್ನು ಪತ್ತೆ ಮಾಡಲು ಶೀಘ್ರದಲ್ಲೇ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ತಾಲೂಕಿಗೆ ಆಗಮಿಸಿ ಪತ್ತೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

    ಸರ್ಕಾರ ಮರಳು ಮಿತ್ರ ಹ್ಯಾಪ್ ಅಭಿವೃದ್ಧ್ದಿ ಪಡಿಸಿದ್ದು, ಇದರ ಮೂಲಕ ಹಳ್ಳಿಗರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಬಹುದು ಎಂದರು. ಗ್ರಾಪಂ ವ್ಯಾಪ್ತಿಯ ಮರಳನ್ನು ಗ್ರಾಪಂ ವ್ಯಾಪ್ತಿಯ ಗ್ರಾಮದಗಳ ಹೊರತು ಪಡಿಸಿ, ಬೇರೆಯವರಿಗೆ ಮಾರಾಟ ಮಾಡುವಂತ್ತಿಲ್ಲ. ಇದು ಸರ್ಕಾರದ ಕಟ್ಟುನಿಟ್ಟಿನ ಆದೇಶವಾಗಿದೆ ಎಂದರು.

    ಕೊಟ್ಟೂರು ಪಟ್ಟಣದಲ್ಲಿ ಮನೆ ನಿರ್ಮಿಸುವವರು ಹಡಗಲಿ, ಹರಪನಹಳ್ಳಿ ಮರಳು ಕೇಂದ್ರದಿಂದ ಮರಳನ್ನು ಖರೀದಿಸಿ ಮನೆ ಕಟ್ಟಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಸಿಗುವ ಮರಳನ್ನು ಖರೀದಿ ಮಾಡಲು ಬರುವುದಿಲ್ಲ. ಈ ಕುರಿತು ಮರುಳು ಸಮಿತಿ ಸದಾ ನಿಗಾ ವಹಿಸುತ್ತದೆ ಎಂದರು. ಮರಳು ಸಮಿತಿಯ ಕಣ್ ತಪ್ಪಿಸಿ ಪಟ್ಟಣ, ನಗರ ಪ್ರದೇಶಗಳಿಗೆ ಮರಳು ಸಾಗಿಸುವುದು ಪತ್ತೆಯಾದರೆ ಅದಕ್ಕೆ ಗ್ರಾಪಂ ಪಿಡಿಒ ಸಂಪೂರ್ಣ ಹೊಣೆಯಾಗುತ್ತಾರೆ. ನೀತಿ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಹಸೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts