More

    ಏಕಕಾಲ ಚುನಾವಣೆ ಮುನ್ನೆಲೆಗೆ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಸಾರಥ್ಯದಲ್ಲಿ ಸಮಿತಿ; ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ

    ನವದೆಹಲಿ: ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ ಮತ್ತು ಶಾಸನಸಭೆಗಳಲ್ಲಿ ಶೇ. 33 ಮಹಿಳಾ ಮೀಸಲಾತಿ ಜಾರಿ ವಿಚಾರದಲ್ಲಿ ಸಂಚಲನಾತ್ಮಕ ನಿರ್ಧಾರಗಳು ಶೀಘ್ರದಲ್ಲೇ ಹೊರಹೊಮ್ಮುವ ಸಾಧ್ಯತೆಗಳು ಗೋಚರಿಸುತ್ತಿವೆ. ಗೌರಿ-ಗಣೇಶ ಹಬ್ಬ ದಿಂದ (ಸೆ.18) 5 ದಿನಗಳ ವಿಶೇಷ ಸಂಸತ್ ಅಧಿವೇಶನ ಕರೆದು ಮಹಿಳಾ ಮೀಸಲು ವಿಧೇಯಕ ಮಂಡನೆ ಸುಳಿವು ನೀಡಿದ್ದ ಕೇಂದ್ರ ಸರ್ಕಾರ, ಶುಕ್ರವಾರ ಲೋಕಸಭೆ- ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧಕಬಾಧಕ ಅಧ್ಯಯನ ನಡೆಸಲು ಉನ್ನತ ಸಮಿತಿ ರಚಿಸುವ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವನ್ನು ಹಣಿಯಲು ಪ್ರತಿಪಕ್ಷಗಳು ‘ಐಎನ್​ಡಿಐಎ’ ಕೂಟದಡಿ ಒಗ್ಗಟ್ಟಾಗುತ್ತಿವೆ.

    ಈ ನಡುವೆಯೇ ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ಐಎನ್​ಡಿಐಎ ಕೂಟದಲ್ಲಿ ಭಾಗಿಯಾಗಿರುವ ಪ್ರತಿಪಕ್ಷಗಳು ಈ ನಿರ್ಧಾರವನ್ನು ಟೀಕಿಸಿವೆ. ನಿಗದಿತ ಚುನಾವಣೆಗಳನ್ನು ಮುಂದೂಡುವ ಹುನ್ನಾರವೆಂದು ಆರೋಪಿಸಿವೆ.

    ಅನುಷ್ಠಾನ ಕಷ್ಟಕರ: ಒಂದು ದೇಶ-ಒಂದು ಚುನಾವಣೆ ವಿಚಾರದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸಂಸತ್ತು ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಒಳ್ಳೆಯದೇ. ಆದರೂ ಅದನ್ನು ಅನುಷ್ಠಾನಕ್ಕೆ ತರುವುದು ಕಷ್ಟಕರ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಟಿ.ಎಸ್. ಕೃಷ್ಣಮೂರ್ತಿ ಹೇಳಿದ್ದಾರೆ. ಏಕಕಾಲದ ಚುನಾವಣೆಯಿಂದ ವೆಚ್ಚ ಕಡಿತದಂತಹ ಅನೇಕ ಅನುಕೂಲಗಳಿದ್ದರೂ ಅದನ್ನು ಜಾರಿಗೊಳಿಸುವುದು ಅಷ್ಟು ಸುಲಭವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ ಕೆಲವು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆ ಜತೆ ವಿಧಾನಸಭೆಗೂ ಮತದಾನ ನಡೆದಾಗ ಜನ ವಿಭಿನ್ನವಾಗಿ ಮತ ಚಲಾಯಿಸಿದ ಉದಾಹರಣೆ ಇದೆ ಎಂದೂ ಕೃಷ್ಣಮೂರ್ತಿ ಹೇಳಿದ್ದಾರೆ. ಏಕಕಾಲದ ಚುನಾವಣೆ ಬಗ್ಗೆ ರಾಜಕೀಯ ಸಹಮತ ರೂಪಿಸುವುದು ಸವಾಲಾಗಿದೆ ಎಂದರು.

    ಏನೇನು ಬೇಕು?: ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆದರೆ ಸುಮಾರು 10 ಲಕ್ಷ ಮತಗಟ್ಟೆಗಳನ್ನು ನಿರ್ವಿುಸಬೇಕು. ಅಂದಾಜು 13 ಲಕ್ಷ ಬ್ಯಾಲೆಟ್ ಯೂನಿಟ್​ಗಳು, 9.4 ಲಕ್ಷ ಕಂಟ್ರೋಲ್ ಯೂನಿಟ್​ಗಳು ಮತ್ತು ಅಂದಾಜು 12.3 ಲಕ್ಷ ವಿವಿಪ್ಯಾಟ್ ಯಂತ್ರಗಳು ಬೇಕಾಗುತ್ತವೆ. ಆದರೆ ಇವಿಎಂನ ಗರಿಷ್ಠ ಜೀವಿತಾವಧಿ ಕೇವಲ 15 ವರ್ಷಗಳು. ಅಂದರೆ ಮೂರು ಚುನಾವಣೆ ನಂತರ ಮತ್ತೆ ಹೊಸ ಮತಯಂತ್ರ ಖರೀದಿ ಮಾಡಬೇಕಾಗುತ್ತದೆ.

    ಈ ಹಿಂದೆಯೂ ನಡೆದಿತ್ತು…: ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ 1951-52ರಲ್ಲಿ ದೇಶದಲ್ಲಿ ಚುನಾವಣೆಗಳು ನಡೆದವು. ಆಗ ಲೋಕಸಭೆ ಜತೆಗೆ ಎಲ್ಲ ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿತ್ತು. ನಂತರ, 1957, 1962 ಮತ್ತು 1967ರಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆದವು. 1968-69ರ ನಂತರ ಇದು ಸ್ಥಗಿತಗೊಂಡಿತು. ಕೆಲವು ರಾಜ್ಯಗಳಲ್ಲಿ ಅವಧಿಗೆ ಮುನ್ನವೇ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ಏಕಕಾಲ ಚುನಾವಣೆ ಸಾಧ್ಯವಾಗಲಿಲ್ಲ.

    ಸೆಪ್ಟೆಂಬರ್ 18 ರಿಂದ 22 ರವರೆಗೆ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯಲ್ಲಿ ಪ್ರಮುಖ ವಿಷಯಗಳಿದ್ದು, ಈ ಕುರಿತು ಶೀಘ್ರದಲ್ಲಿಯೇ ಮಾಹಿತಿ ನೀಡಲಾಗುವುದು. ಈ ನಿಟ್ಟಿನಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಇನ್ನೂ ಸಾಕಷ್ಟು ಸಮಯವಿದ್ದು, ಕಾರ್ಯಸೂಚಿ ತಿಳಿಸಲು ಅಗತ್ಯವಾದ ಕಡ್ಡಾಯ ಸಮಯದ ಪಾಲನೆಯನ್ನು ಅನುಸರಿಸಲಾಗುವುದು.

    | ಪ್ರಲ್ಹಾದ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

    ಪ್ರಧಾನಿ ಮೋದಿ ಪ್ರತಿಪಾದನೆ

    ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದ್ದಾರೆ. ನವೆಂಬರ್-ಡಿಸೆಂಬರ್​ನಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದ್ದು, ನಂತರ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆದರೆ, ಈ ನೀತಿಯನ್ನು ಮುಂಬರುವ ಚುನಾವಣೆಗಳಿಗೆ ಅನ್ವಯಿಸುವುದು ಸಾಧ್ಯವೇ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ, ರಚನೆಯಾಗಿರುವ ಸಮಿತಿ ಬೇರೆ ರಾಜ್ಯಗಳಿಗೆ ಭೇಟಿ ನೀಡುವುದಲ್ಲದೆ, ಸಂಬಂಧಪಟ್ಟ ಎಲ್ಲರೊಂದಿಗೂ ಸುದೀರ್ಘ ಸಮಾಲೋಚನೆ ನಡೆಸಿ, ನಂತರ ಸಾಧಕ-ಬಾಧಕಗಳ ಬಗ್ಗೆ ವರದಿ ನೀಡಬೇಕಾಗುತ್ತದೆ. ಮೇಲಾಗಿ, ಇಂಥದ್ದೊಂದು ಭಾರೀ ಸವಾಲಿನ ಪ್ರಕ್ರಿಯೆಗೆ ಚುನಾವಣಾ ಆಯೋಗವನ್ನು ಸಜ್ಜುಗೊಳಿಸಲೇ ಕನಿಷ್ಠ 2 ವರ್ಷ ಕಾಲಾವಕಾಶ ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಭಾರತದ ಆಡಳಿತ ವ್ಯವಸ್ಥೆಯು ಒಕ್ಕೂಟ ಸ್ವರೂಪದ್ದಾಗಿರುವುದರಿಂದ ಇಲ್ಲಿ ಬಹುಪಾಲು ರಾಜಕೀಯ ಪಕ್ಷಗಳ ಸಹಮತ ಪಡೆಯುವುದು ಕೂಡ ಅಗತ್ಯವಾಗಲಿದೆ. ಒಂದುವೇಳೆ ಒಂದು ದೇಶ-ಒಂದು ಚುನಾವಣೆ ಜಾರಿಯಾದರೆ, ಭಾರತ ಇಂಥದ್ದೊಂದು ನೀತಿಯನ್ನು ಜಾರಿ ಮಾಡಿದ ನಾಲ್ಕನೇ ರಾಷ್ಟ್ರ ಎನಿಸಿಕೊಳ್ಳಲಿದೆ. ದಕ್ಷಿಣ ಆಫ್ರಿಕಾ, ಬೆಲ್ಜಿಯಂ ಮತ್ತು ಸ್ವೀಡನ್ ದೇಶಗಳಲ್ಲಿ ಈಗಾಗಲೇ ಈ ನೀತಿ ಜಾರಿಯಲ್ಲಿದೆ.

    ಕಾಯ್ದೆ ತಿದ್ದುಪಡಿ ಅಗತ್ಯ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕಾದರೆ ಸಂವಿಧಾನಕ್ಕೆ ಕನಿಷ್ಠ ಐದು ತಿದ್ದುಪಡಿಗಳನ್ನು ತರಬೇಕಾಗುತ್ತದೆ. ಬೃಹತ್ ಪ್ರಮಾಣದಲ್ಲಿ ಹೆಚ್ಚುವರಿ ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂ) ಮತ್ತು ಪೇಪರ್ ಟ್ರೇಯ್್ಲ ಯಂತ್ರಗಳು ಬೇಕಾಗುತ್ತವೆ. ಅದಕ್ಕೆ ಸಾವಿರಾರು ಕೋಟಿ ರೂಪಾಯಿ ಬೇಕಾಗುತ್ತದೆ. ಆದರೆ, ದೀರ್ಘಕಾಲದಲ್ಲಿ ಸಾರ್ವಜನಿಕ ಬೊಕ್ಕಸಕ್ಕೆ ಅಪಾರ ಉಳಿತಾಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತದ ಆಡಳಿತ ವ್ಯವಸ್ಥೆಯು ಒಕ್ಕೂಟ ಸ್ವರೂಪದ್ದಾಗಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳ ಸಹಮತವನ್ನು ಪಡೆಯುವುದು ಕೂಡ ಅಗತ್ಯವಾಗುತ್ತದೆ.

    ಚುನಾವಣೆಗೆ ವೆಚ್ಚ ಎಚ್ಟು?

    ಚುನಾವಣಾ ಆಯೋಗದ ಪ್ರಕಾರ 2014ರ ಲೋಕಸಭೆ ಚುನಾವಣೆಗೆ 35 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚವಾಗಿದೆ. 2014ರ ನಂತರ ನಡೆದ ಹರಿಯಾಣ ವಿಧಾನಸಭೆ ಚುನಾವಣೆಗೆ 33.7 ಕೋಟಿ ರೂ., ಜಾರ್ಖಂಡ್ ವಿಧಾನಸಭಾ ಚುನಾವಣೆಗೆ 86 ಕೋಟಿ ರೂ., ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ 1 ಸಾವಿರ ಕೋಟಿ, ದೆಹಲಿ ವಿಧಾನಸಭಾ ಚುನಾವಣೆಗೆ 98 ಕೋಟಿ ರೂ. ವೆಚ್ಚವಾಗಿದೆ. ಪದೇ ಪದೆ ಚುನಾವಣೆ ನಡೆಸುವುದರಿಂದ ಸರ್ಕಾರದ ಖಜಾನೆಗೆ ಹೊರೆ ಬೀಳಲಿದೆ.

    ‘ದಿಗ್ವಿಜಯ ನ್ಯೂಸ್’ ಇನ್ನು ‘ರಿಪಬ್ಲಿಕ್ ಕನ್ನಡ’; ರಾಷ್ಟ್ರೀಯತೆ ನಮ್ಮ ವಿಚಾರಧಾರೆ ಎಂದ ಅರ್ನಬ್ ಗೋಸ್ವಾಮಿ

    ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟು ಇನ್ನೂ ಇದೆಯಾ?; ಹಾಗಿದ್ದರೆ ಹುಷಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts