ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಕೊಲೆಯ ಸಂಚು ಐದು ದಿನಗಳ ಹಿಂದೆಯೇ ನಡೆದಿತ್ತಾ? ಎಂಬ ಅನುಮಾನವೊಂದು ಇದೀಗ ಉಂಟಾಗಿದ್ದು, ಆ ಬಗ್ಗೆ ಚರ್ಚೆ ಆರಂಭವಾಗಿದೆ. ಏಕೆಂದರೆ ಅಂಥದ್ದೊಂದು ಮಹತ್ವದ ಸುಳಿವು ಆರೋಪಿಯೊಬ್ಬನ ಕಡೆಯಿಂದ ಕಂಡುಬಂದಿದೆ.
ಚಂದ್ರಶೇಖರ ಗುರೂಜಿಯ ಕೊಲೆಯಾದ ನಾಲ್ಕೇ ಗಂಟೆಗಳ ಒಳಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ರಾಮದುರ್ಗದಲ್ಲಿ ಬಂಧಿಸಿದ್ದಾರೆ. ಗುರೂಜಿಯನ್ನು ಕೊಂದು ಕಾರಿನಲ್ಲಿ ಬೆಳಗಾವಿ ಕಡೆ ಹೊರಟಿದ್ದ ಆರೋಪಿಗಳನ್ನು ಹೆಡೆಮುರಿಕಟ್ಟಿ ಬಂಧಿಸಿದೆ ಎಸಿಪಿ ವಿನೋದ ನೇತೃತ್ವದ ತಂಡ.
ಬಂಧಿತ ಆರೋಪಿಗಳಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಇಬ್ಬರೂ ಕಲಘಟಗಿ ತಾಕೂಕಿನ ಧುಮ್ಮವಾಡದವರು. ಆರೋಪಿ ಮಹಾಂತೇಶ ಶಿರೂರ, ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿ. ಈತನ ಪತ್ನಿ ವನಜಾಕ್ಷಿಯೂ ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.
ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಪ್ರೆಸಿಡೆಂಟ್ ಹೋಟೆಲ್ನ ರಿಸೆಪ್ಶನ್ನಲ್ಲಿ ಭಕ್ತರ ಸೋಗಿನಲ್ಲಿ ಬಂದಿದ್ದ ಆರೋಪಿಗಳಿಬ್ಬರೂ ಚಂದ್ರಶೇಖರ ಗುರೂಜಿಯನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಅಮಾನುಷವಾಗಿ ಕೊಂದು ಪರಾರಿಯಾಗಿದ್ದರು. ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿ ಮಹಾಂತೇಶ ಶಿರೂರ ಎಂಬಾತನ ಫೇಸ್ಬುಕ್ ಪ್ರೊಫೈಲ್ನಲ್ಲಿನ ಒಂದು ಶೇರ್ ಕೊಲೆ ಸಂಚಿನ ಕುರಿತ ಸುಳಿವು ನೀಡುವಂತಿದೆ. ಜೂ. 30ರಂದು ಈ ಆರೋಪಿ ಇನ್ನೊಂದು ಫೇಸ್ಬುಕ್ ಖಾತೆಯಲ್ಲಿನ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾನೆ.
ಆ ಪೋಸ್ಟ್ನಲ್ಲಿನ ವಿವರ ಹೀಗಿದೆ..
“ಅಧರ್ಮ ತಾಂಡವವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನೂ ವಿಳಂಬವೇತಕೆ ಭಗವಂತ? ಆದಷ್ಟು ಬೇಗ ಅವತರಿಸು ಪ್ರಭು. ಸಂಭವಾಮಿ ಯುಗೇ ಯುಗೇ”
ಗುರೂಜಿಯನ್ನು ದುಷ್ಟ ಎಂದುಕೊಂಡಿರುವ ಆರೋಪಿ, ಐದು ದಿನಗಳ ಹಿಂದೆಯೇ ನಾಶ ಮಾಡುವ ಯೋಚನೆಯನ್ನು ಹೊಂದಿದ್ದನಾ? ಎಂಬ ಚರ್ಚೆ ಈಗ ಕೆಲವೆಡೆ ಕೇಳಿಬರಲಾರಂಭಿಸಿದೆ.
ಹತ್ಯೆಗೂ ಮುನ್ನ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಮುಂದೆ ಹಂತಕರ ಹೈಡ್ರಾಮ ಹೀಗಿತ್ತು…