More

    ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ, ಕೆಆರ್‌ಎಸ್‌ಗೆ ಒಂದು ಅಡಿ ನೀರು: ತಮಿಳುನಾಡಿಗೆ 2.5 ಟಿಎಂಸಿ ಹರಿಸಲು ಆದೇಶ

    ಮಂಡ್ಯ: ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ ಕೇವಲ ಒಂದು ಅಡಿ ಹೆಚ್ಚಾಗಿದೆ. ಅದಾಗಲೇ ಮೇ ತಿಂಗಳ ಬಾಬ್ತು 2.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿರುವುದಕ್ಕೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
    ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ತ.ನಾಡಿಗೆ ನೀರು ಹರಿಸಲು ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. ಕಳೆದ ಒಂದೂವರೆ ವರ್ಷದಿಂದ ತೀವ್ರ ಬರಗಾಲ ಜಿಲ್ಲೆಯ ಜನರನ್ನು ಎಡೆಬಿಡದೇ ಕಾಡಿದೆ. ಮಾತ್ರವಲ್ಲದೆ ಕೃಷಿ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಪರಿಣಾಮ ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಕುಡಿಯುವ ನೀರಿಗೂ ಅಭಾವ ಉಂಟಾಗಿತ್ತು. ಈ ನಡುವೆ ಆಶಾದಾಯಕ ಬೆಳವಣಿಗೆ ಎನ್ನುವಂತೆ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಮಂಗಳವಾರ ಡ್ಯಾಂನ ನೀರಿನ ಮಟ್ಟ 81 ಅಡಿಗೆ ಏರಿಕೆಯಾಗಿದೆ. 124.80 ಅಡಿ ಗರಿಷ್ಟ ಸಂಗ್ರಹದ ಅಣೆಕಟ್ಟೆಯಲ್ಲಿ 1,832 ಕ್ಯೂಸೆಕ್ ಒಳಹರಿವಿದೆ. ಅಂತೆಯೇ 272 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
    ಇನ್ನು ಜಿಲ್ಲೆಯಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ಮಂಡ್ಯ ನಗರ, ಮದ್ದೂರು, ನಾಗಮಂಗಲ, ಕೆ.ಆರ್.ಪೇಟೆ, ಪಾಂಡವಪುರ ಸೇರಿದಂತೆ ವಿವಿಧೆಡೆ ಮಳೆ ಸುರಿದಿದೆ. ಸೋಮವಾರ ಜಿಲ್ಲೆಯಲ್ಲಿ 20.7 ಮಿ.ಮೀ ಮಳೆಯಾಗಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 25 ಮಿ.ಮೀ, ಮದ್ದೂರಿನಲ್ಲಿ 13.5 ಮಿ.ಮೀ, ಮಳವಳ್ಳಿಯಲ್ಲಿ 23.8 ಮಿ.ಮೀ, ಮಂಡ್ಯದಲ್ಲಿ 21.5 ಮಿ.ಮೀ, ನಾಗಮಂಗಲದಲ್ಲಿ 22 ಮಿ.ಮೀ, ಪಾಂಡವಪುರದಲ್ಲಿ 16.7 ಮಿ.ಮೀ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 16.2 ಮಿ.ಮೀ ಮಳೆ ದಾಖಲಾಗಿದೆ.

    KRS

    ರಾಜ್ಯ ಸರ್ಕಾರದ ನಿಲುವೇನು?
    ತಮಿಳುನಾಡಿಗೆ ನೀರು ವಿಚಾರದಲ್ಲಿ ರಾಜ್ಯಸರ್ಕಾರ ನಿಲುವು ಕುತೂಹಲ ಮೂಡಿಸಿದೆ. ಕಾರಣ ಬೆಳೆ ಹಾಳಾಗುತ್ತಿದೆ, ಅಂರ್ತಜಲದ ಮಟ್ಟದ ತೀವ್ರ ಕುಸಿತಗೊಂಡಿದೆ. ಎರಡು ಕಟ್ಟು ನೀರು ಬಿಡುವಂತೆ ಒತ್ತಾಯಿಸಿ ಜಿಲ್ಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಆದರೆ ಮಳೆಯ ಕೊರತೆ ಹಾಗೂ ನಾಲಾ ಆಧುನೀಕರಣದ ನೆಪವೊಡ್ಡಿ ನೀರು ಬಿಡಲಿಲ್ಲ. ಇದೀಗ ತ.ನಾಡಿಗೆ ನೀರು ಹರಿಸಿದರೆ ರೈತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts