More

    ನರಗುಂದ ಭಾಗದಲ್ಲಿ ಕರುಣೆ ತೋರದ ವರುಣ

    ರಾಜು ಹೊಸಮನಿ
    ನರಗುಂದ:
    ಮೇ ತಿಂಗಳು ಮುಗಿಯುತ್ತಾ ಬಂದರೂ ವರುಣ ದೇವ ತಾಲೂಕಿನ ರೈತರ ಮೇಲೆ ಕರುಣಿ ತೋರಿಲ್ಲ. ಆತಂಕಗೊಂಡಿರುವ ರೈತರು ಬಿತ್ತನೆಗೆ ಸಜ್ಜಾಗದೆ ಕೃಷಿ ಚಟುವಟಿಕೆಯಿಂದ ದೂರ ಉಳಿದಿದ್ದಾರೆ.
    ನರಗುಂದ, ಕೊಣ್ಣೂರ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 40 ಸಾವಿರ ಹೆಕ್ಟೇರ್ ಸಾಗುವಳಿ ಜಮೀನು ಇದೆ. ಇದರಲ್ಲಿ 6 ಸಾವಿರ ಹೆಕ್ಟೇರ್ ಬಂಜರು ಭೂಮಿ, 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ, 2,500 ಹೆಕ್ಟೇರ್‌ನಲ್ಲಿ ತೋಟಗಾರಿಕೆ, 1 ಸಾವಿರ ಹೆಕ್ಟೇರ್ ಮಳೆಯಾಶ್ರಿತವಾಗಿದೆ. ವಾಡಿಕೆ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಮಳೆ ಸುರಿಯಬೇಕಿತ್ತು. ಆದರೆ, ತಾಲೂಕಿನಲ್ಲಿ ಮುಂಗಾರುಪೂರ್ವ ಮಳೆಗಳು ಸುರಿದಿಲ್ಲ. ಪರಿಣಾಮ ಮುಂಗಾರು ಹಂಗಾಮಿನ ಹೆಸರು, ಹತ್ತಿ, ಈರುಳ್ಳಿ, ಗೋವಿನಜೋಳ, ಸೂರ್ಯಕಾಂತಿ, ತೊಗರಿ ಮುಂತಾದ ಬೆಳೆಗಳ ಬಿತ್ತನೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಇಷ್ಟೊತ್ತಿಗೆ ಹದವಾದ ಮಳೆ ಸುರಿದು ಬಿತ್ತನೆಗೆ ಸಿದ್ಧತೆಗಳು ಆಗಬೇಕಿತ್ತು. ಇನ್ನೊಂದೆಡೆ ನಿರೀಕ್ಷಿತ ಮಳೆ ಸುರಿಯದ ಕಾರಣ ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಬೀಜ ಸಂಗ್ರಹ ಮಾಡಿಕೊಂಡಿಲ್ಲ.
    ಕೆಲವು ಕೃಷಿ ಅಧಿಕಾರಿಗಳ ನರಗುಂದ ರೈತ ಸಂಪರ್ಕ ಕೇಂದ್ರಕ್ಕೆ 50 ಕ್ವಿಂಟಾಲ್, ಕೊಣ್ಣೂರ ರೈತ ಸಂಪರ್ಕ ಕೇಂದ್ರಕ್ಕೆ 50 ಕ್ವಿಂಟಾಲ್ ಹೆಸರು ಪೂರೈಸುವಂತೆ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ (ಕೆಎಸ್‌ಎಸ್‌ಸಿ) ಬೇಡಿಕೆ ಸಲ್ಲಿಸಿದ್ದರೂ ಇನ್ನೂ ಪೂರೈಕೆ ಆಗಿಲ್ಲ. ಏಪ್ರಿಲ್ ತಿಂಗಳ ಮಾಹಿತಿ ಪ್ರಕಾರ ತಾಲೂಕಿನಲ್ಲಿ 853 ಮೆಟ್ರಿಕ್ ಟನ್ ಯೂರಿಯಾ, 598 ಮೆಟ್ರಿಕ್ ಟನ್ ಡಿಎಪಿ, 96 ಮೆಟ್ರಿಕ್ ಎಂಒಪಿ, 697 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಸೇರಿ ಒಟ್ಟು 2,244 ಮೆಟ್ರಿಕ್ ಟನ್ ರಸಗೊಬ್ಬರದ ದಾಸ್ತಾನಿದೆ. ತಾಲೂಕಿನ ರೈತರಿಗೆ ಕೃಷಿಭಾಗ್ಯ ಯೋಜನೆಯಡಿ ನಿರ್ಮಿಸಿದ್ದ 2,300ಕ್ಕೂ ಅಧಿಕ ಕೃಷಿ ಹೊಂಡಗಳು ಬರಿದಾಗಿವೆ.
    ಹುದ್ದೆಗಳು ಖಾಲಿ: ಕೃಷಿ ಇಲಾಖೆಯಲ್ಲಿ ಒಬ್ಬರು ಸಹಾಯಕ ಕೃಷಿ ನಿರ್ದೇಶಕ, 4 ಕೃಷಿ ಅಧಿಕಾರಿಗಳು, 6 ಸಹಾಯಕ ಕೃಷಿ ಅಧಿಕಾರಿಗಳು, ಪ್ರಥಮ ದರ್ಜೆ ಸಹಾಯಕ, ಇಬ್ಬರು ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ವಾಹನ ಚಾಲಕ, ನಾಲ್ವರು ಡಿ ದರ್ಜೆ ನೌಕರರು ಸೇರಿ ಒಟ್ಟು 23 ಹುದ್ದೆಗಳಿರಬೇಕು. ಆದರೆ, ಒಬ್ಬರು ಸಹಾಯಕ ಪ್ರಭಾರಿ ಕೃಷಿ ನಿರ್ದೇಶಕರು, 1 ತಾಂತ್ರಿಕ ಕೃಷಿ ಅಧಿಕಾರಿ, ಬೆರಳಚ್ಚುಗಾರರು, ಒಬ್ಬರು ಪ್ರಥಮ ದರ್ಜೆ ಸಹಾಯಕ ಸೇರಿ ಕೇವಲ 6 ಅಧಿಕಾರಿಗಳಿದ್ದಾರೆ. 17 ಹುದ್ದೆಗಳು ಖಾಲಿ ಇವೆ.

    ನರಗುಂದದ ಕೃಷಿ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಂದಾಗಿ ನಿಗದಿತ ಸಮಯದಲ್ಲಿ ರೈತರಿಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಸೂಕ್ತ ಮಾಹಿತಿಯಿಲ್ಲದೆ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ನೂತನ ಸರ್ಕಾರ ಕ್ರಮ ಕೈಗೊಳ್ಳಬೇಕು
    -ಎಸ್.ಬಿ. ಜೋಗಣ್ಣವರ, ರೈತ ಮುಖಂಡ

    ಮುಂಗಾರು ಹಂಗಾಮಿನಲ್ಲಿ ಹದವಾದ ಮಳೆ ಸುರಿದಿಲ್ಲ. ಇದರಿಂದ ಬಿತ್ತನೆಗೆ ಹಿನ್ನಡೆ ಉಂಟಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಮಳೆ ಸುರಿದರೆ ಪ್ರತಿಯೊಬ್ಬರಿಗೂ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ನೀಡಲಾಗುವುದು.
    -ಸಾವಿತ್ರಿ ಶಿವನಗೌಡ್ರ. ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕಿ ನರಗುಂದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts