More

    ಮೀಸಲಾತಿಗೆ ಆಗ್ರಹಿಸಿ 24ರಂದು ಸತ್ಯಾಗ್ರಹ

    ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅ. 24ರಂದು ಸುವರ್ಣ ವಿಧಾನಸೌಧದ ಮುಂಭಾಗ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ತಿಳಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯಕ್ಕಾಗಿ ಅಖಿಲ ಭಾರತ ಪಂಚಮಸಾಲಿ ಹಕ್ಕೊತ್ತಾಯ ಸಮಿತಿ ರಚನೆ ಮಾಡಿಕೊಂಡು ಸಭೆ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಹೋರಾಟದ ಪೂರ್ವಭಾವಿಯಾಗಿ 24ರಂದು ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆಯ ಲಾಗುತ್ತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುತ್ತಿಲ್ಲ ಎಂದರು.

    ಸ್ವಾಮೀಜಿ ಬೇಸರ: ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಸಾಲಿ ಸಮುದಾಯ ಅಧಿಕ ಪ್ರಮಾಣದಲ್ಲಿದೆ. ನಮ್ಮ ಮೂಲ ಕಸುಬೂ ಕೃಷಿ. ಆದರೆ, ಸರ್ಕಾರಗಳಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಸಮುದಾಯಗಳಿಗೆ ಮೀಸಲಾತಿ, ಅಭಿವೃದ್ಧಿ ನಿಗಮ ಮೂಲಕ ಸೌಲಭ್ಯ ನೀಡುತ್ತಿವೆ. ಆದರೆ, ಪಂಚಮಸಾಲಿ ಸಮುದಾಯಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಅನುಷ್ಠಾನ ಮಾಡಿಲ್ಲ: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಹಾಗೂ ರಾಜ್ಯ ಸರ್ಕಾರ 2ಎ ವರ್ಗ ಮೀಸಲಾತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು 2012ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

    ಅಂದಿನ ಸಿಎಂ ಜಗದೀಶ ಶೆಟ್ಟರ್ ಅವರು ಮಾಜಿ ಸಚಿವ ಸಿ.ಎಂ. ಉದಾಸಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿತ್ತು. ಆ ಸಮಿತಿಯು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವು ಶಿಫಾರಸು ಮಾಡಿತ್ತು. ಆದರೆ, ಬಳಿಕ ಯಾವುದೇ ಸರ್ಕಾರ ಅನುಷ್ಠಾನ ಮಾಡಲಿಲ್ಲ ಎಂದರು. ಡಾ. ರವಿ ಪಾಟೀಲ, ರಾಜಶೇಖರ ಮೆಣಸಿನಕಾಯಿ, ರುದ್ರಣ್ಣ ಚಂದರಗಿ ಮಹಾಂತೇಶ ಹಳ್ಳೂರ, ಬಸವನಗೌಡ ಚಿಕ್ಕನಗೌಡರ, ಬಸವರಾಜ ರೊಟ್ಟಿ, ಬಿ.ಆರ್. ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts