More

    ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ

    ಶನಿವಾರಸಂತೆ: ಶನಿವಾರಸಂತೆ ವ್ಯಾಪ್ತಿಯ ಗ್ರಾಮಗಳಿಗೆ ಲಗ್ಗೆ ಇಡುವ ಕಾಡಾನೆಗಳು ಉಪಟಳ ನೀಡುತ್ತಿದ್ದು, ಇದರಿಂದ ಗ್ರಾಮಸ್ಥರು ಜೀವ ಭಯದ ಜತೆಗೆ ತಾವು ಬೆಳೆದ ಫಸಲನ್ನು ಕಳೆದುಕೊಳ್ಳುವಂತಾಗಿದೆ.

    ದುಂಡಳ್ಳಿ, ಅಪ್ಪಸೆಟ್ಟಳ್ಳಿ, ಚಿಕ್ಕಕೊಳತ್ತೂರು, ಮಾದ್ರೆ, ಕೊಡ್ಲಿಪೇಟೆ, ಕಟ್ಟೆಪುರ, ಬ್ಯಾಡಗೊಟ್ಟ, ಮಾಲಂಬಿ, ಆಲೂರು, ಕಂತೆಬಸವನಹಳ್ಳಿ, ಕಣಿವೆ ಬಸವನಹಳ್ಳಿ, ಕೂಡುರಸ್ತೆ, ಹೊಸಗುತ್ತಿ, ಹೊನ್ನೆಕೊಪ್ಪಲು, ಕೂಗೂರು, ಚಿಕ್ಕಾರ, ಮಾಲಂಬಿ, ಹಿತ್ತಲುಗದ್ದೆ, ಹೊಸಹಳ್ಳಿ, ಬೆಸೂರು, ಗೌಡಳ್ಳಿ, ಹಿರಿಕರ, ಚಿಕ್ಕಾರ, ಯಳನೀರು ಗುಂಡಿ, ರಾಮನಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ.

    ಹಾಸನ ಜಿಲ್ಲೆಯ ಯಸಳೂರು ಮತ್ತು ಆಲೂರು ಮೀಸಲು ಅರಣ್ಯದಿಂದ ಶನಿವಾರಸಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಶನಿವಾರಸಂತೆ ವ್ಯಾಪ್ತಿಯಲ್ಲಿ 25ರಿಂದ 30 ಕಾಡಾನೆಗಳು ಸಂಚರಿಸುತ್ತಿದ್ದು, ರಾತ್ರಿ ಸಮಯದಲ್ಲಿ ರೈತರು ಜಮೀನಿಗೆ ತೆರಳಲು ಹೆದರುವಂತಾಗಿದೆ. ಅಲ್ಲದೇ, ಇತ್ತೀಚೆಗೆ ಜಮೀನಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಕಾರ್ಮಿಕನ ಮೇಲೆ ಆನೆ ದಾಳಿ ನಡೆಸಿ ಸಾಯಿಸಿದ್ದು, ಹಚ್ಚ ಹಸಿರಾಗಿದೆ.

    ಶನಿವಾರಸಂತೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಕಂದಕ ನಿರ್ಮಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಸನ ಭಾಗದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸುವ ಸಂದರ್ಭ ಅಲ್ಲಿಂದ ಕಾಡಾನೆಗಳು ಇತ್ತ ಬರುತ್ತಿರುವುದು ಸಾಮಾನ್ಯವಾಗಿದೆ.

    ಈಗ ಕಾಫಿ ಅರಳುವ ಸಂದರ್ಭವಾದ್ದರಿಂದ ರೈತರು ತೋಟಕ್ಕೆ ರಾತ್ರಿ ಅಥವಾ ಬೆಳಗ್ಗೆ ಬೇಗನೆ ತೋಟಗಳತ್ತ ಹೋಗುತ್ತಾರೆ. ಈ ಸಂದರ್ಭ ಆನೆಗಳು ದಾಳಿ ನಡೆಸುತ್ತಿವೆ. ಇದರಿಂದ ಬೆಳೆಗಾರರು ತೋಟಗಳತ್ತ ತೆರಳುವುದು ಕಷ್ಟಸಾಧ್ಯವಾಗಿದೆ.

    ಕಾಡಿನಲ್ಲಿ ನೀರು ಮೇವಿಲ್ಲ
    ಅತಿಯಾದ ಬಿಸಿಲಿನಿಂದ ಅರಣ್ಯದಲ್ಲಿ ಪ್ರಾಣಿಗಳಿಗೆ ಮೇವು ಹಾಗೂ ನೀರು ದೊರಕದೆ ಊರು ಹಾಗೂ ಕಾಫಿ ತೋಟಗಳತ್ತ ಲಗ್ಗೆ ಇಡುತ್ತಿವೆ. ಕಾಡಂಚಿನ ಗ್ರಾಮಗಳಲ್ಲಿ ರೈತರು ಬೆಳೆದ ಫಸಲು ತಿಂದು ನಷ್ಟಪಡಿಸುತ್ತಿದ್ದು, ರೈತನಿಗೆ ಸಂಕಷ್ಟ ತಂದೊಡ್ಡಿದೆ. ಅಲ್ಲದೆ, ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಒಂಟಿಯಾಗಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ.

    ಮೇವಿನ ಗಿಡಗಳನ್ನು ಬೆಳೆಸಲಿ
    ಕಾಣು ಪ್ರಾಣಿಗಳ ಮೇವಿಗೆ ಪೂರಕವಾದ ಮರಗಿಡಗಳನ್ನು ಕಾಡಿನಲ್ಲಿ ನೆಟ್ಟು ಬೆಳೆಸಬೇಕು. ಪ್ರಾಣಿಗಳಿಗೆ ಅಗತ್ಯವಾದ ನೀರಿನ ವ್ಯವಸ್ಥೆಯನ್ನು ಅರಣ್ಯದೊಳಗೆ ಮಾಡುವ ಮೂಲಕ ಕಾಡು ಪ್ರಾಣಿಗಳು ನಾಡಿನತ್ತ ಬಾರದಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮನುಷ್ಯನ ಮೇಲೆ ವನ್ಯಜೀವಿಗಳು ದಾಳಿ ನಡೆಸಿದ ಸಂದರ್ಭ ಸರ್ಕಾರ ಒಂದಿಷ್ಟು ಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಬದಲು ಶಾಶ್ವತ ಪರಿಹಾರ ಘೋಷಿಸಲಿ ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts