More

    5ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ

    ಬೆಳಗಾವಿ: ಬೆಳಗಾವಿಯ ಗಾಂಧಿಭವನದಲ್ಲಿ ಡಿ. 5ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2.30ರ ವರೆಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ ಮಾಹಿತಿ ನೀಡಿದ್ದಾರೆ.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣಸಿಂಗ್, ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಭಾಗಿಯಾಗಲಿದ್ದಾರೆ. ಜತೆಗೆ ಕೋರ್ ಕಮಿಟಿ, ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು, ಮೋರ್ಚಾಗಳ ಪದಾಧಿಕಾರಿಗಳು ಸೇರಿ ಪಕ್ಷದ 149 ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

    ಕರೊನಾ ಕಾರಣ ವಿಶೇಷ ವ್ಯವಸ್ಥೆ: ಕರೊನಾ ಹಿನ್ನೆಲೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು ಸೇರಿ 434 ಮುಖಂಡರು ವೆಬೆಕ್ಸ್ ಮೂಲಕ ಕಾರ್ಯಕಾರಣಿಯಲ್ಲಿ ಭಾಗವಹಿಸಲಿದ್ದಾರೆ.

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಕಳೆದ ತಿಂಗಳು ಮಂಗಳೂರಿನಲ್ಲಿ ಕಾರ್ಯಕಾರಿಣಿ ನಡೆಸಲಾಗಿತ್ತು. ಈ ತಿಂಗಳು ಬೆಳಗಾವಿಯಲ್ಲಿ ಸಭೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಡಿ. 5ರಂದು ಕರ್ನಾಟಕ ಬಂದ್ ಇದೆ. ಕಾರ್ಯಕಾರಿಣಿಗೆ ಅಡ್ಡಿಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಂದ್‌ಗೆ ಯಾರೂ ಒಪ್ಪುತ್ತಿಲ್ಲ.

    ಬೆಂಬಲವನ್ನೂ ನೀಡುತ್ತಿಲ್ಲ. ಕೆಲವೊಂದಿಷ್ಟು ಜನರು ಮಾತ್ರ ಘೋಷಣೆ ಹಾಕುತ್ತಿದ್ದು, ಯಾವುದೇ ರೀತಿ ಬಂದ್ ನಡೆಯುವುದಿಲ್ಲ ಎಂದರು.
    ಚುನಾವಣೆ ಬಳಿಕ ಸಂಪುಟ ವಿಸ್ತರಣೆ ನಿರ್ಧಾರ: ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾತನಾಡಿದ ನಿರ್ಮಲಕುಮಾರ್ ಸುರಾನಾ, ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗಲಿದೆ. ಈ ಚುನಾವಣೆ ಬಳಿಕ ಹಿರಿಯರು ಹೇಳಿದಂತೆ ತೀರ್ಮಾನ ಮಾಡಲಿದ್ದಾರೆ ಎಂದರು.

    ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸಂಘಟನೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ರಾಜ್ಯದಲ್ಲಿ ಒಟ್ಟು 74 ಗ್ರಾಮ ಸ್ವರಾಜ್ ಸಮಾವೇಶಗಳನ್ನು ಯೋಜಿಸಲಾಗಿದೆ. 24 ಗ್ರಾಮ ಸ್ವರಾಜ್ ಸಮಾವೇಶಗಳು ಈಗಾಗಲೇ ಮುಗಿದಿವೆ. ಒಟ್ಟು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದಾರೆ.

    ಸಮಾವೇಶಗಳಲ್ಲಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವತ್ಥನಾರಾಯಣ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಜಗದೀಶ ಶೆಟ್ಟರ್, ಆರ್.ಅಶೋಕ, ವಿ.ಸೋಮಣ್ಣ, ಬಿ.ಶ್ರೀರಾಮಲು, ಮಾಧುಸ್ವಾಮಿ, ರಮೇಶ ಜಾರಕಿಹೊಳಿ, ಸಿ.ಸಿ.ಪಾಟೀಲ್, ಬಿ.ಸಿ.ಪಾಟೀಲ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.

    4 ರಂದು ಸಂಜೆ ಕೋರ್ ಕಮಿಟಿ ಸಭೆ: ಕಾರ್ಯಕಾರಿಣಿ ಜರುಗುವ ಮುನ್ನ ಡಿ.4ರಂದು ಸಂಜೆ 7.30ಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಉಪಸ್ಥಿತಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಜರುಗುವ ಎರಡು ವಿಧಾನಸಭಾ ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗುವುದು. ಉಪಚುನಾವಣೆಗಳಲ್ಲಿ ಗೆಲ್ಲಲು ಮಾಡಬೇಕಾದ ಸಿದ್ಧತೆಗಳ ಬಗ್ಗೆಯೂ ಕೋರ್ ಕಮಿಟಿಯಲ್ಲಿ ಚರ್ಚಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts