More

    ಜಿಲ್ಲಾದ್ಯಂತ ಓಂಕಾರ ಸ್ವರೂಪನ ಸ್ಮರಣೆ

    ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ವಿವಿಧೆಡೆಯ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಲಲಿತಾ ಸಹಸ್ರನಾಮ ಪಾರಾಯಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

    ಕೆಲ ಭಕ್ತರು ಬೆಳಗ್ಗೆಯಿಂದಲೇ ನಿರಾಹಾರ ಉಪವಾಸ ವಿದ್ದು, ರುದ್ರಾಕ್ಷಿ ಮಾಲೆ ಹಿಡಿದು ಜಪ-ತಪ ಆಚರಿಸಿದರು. ಕೆಲವರು ಅಲ್ಪೋಪಹಾರ, ಹಣ್ಣು ಸೇವಿಸಿ ಶಿವ ಧ್ಯಾನ ಮಾಡಿದರು ಇಡೀ ರಾತ್ರಿ ಜಾಗರಣೆ ಮಾಡಿ ಶಿವನಾಮ ಸ್ಮರಣೆ ಮಾಡಿದರು. ಕಿಲ್ಲಾ ಸಮೀಪದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನ, ಬೆಟಗೇರಿ ರಂಗಪ್ಪಜ್ಜನ ಮಠದ ಹತ್ತಿರದ ಅಮರೇಶ್ವರ ದೇವಸ್ಥಾನ, ಸಿದ್ಧಲಿಂಗನಗರ, ಗ್ರೇನ್ ಮಾರುಕಟ್ಟೆ, ಪಿಎನ್​ಟಿ ಕ್ವಾರ್ಟರ್ಸ್, ವಿವೇಕಾನಂದ ಬಡಾವಣೆಯ ಕಾಶಿ ವಿಶ್ವನಾಥ ದೇವಸ್ಥಾನ, ಚೇತನಾ ಕ್ಯಾಂಟೀನ್ ಬಳಿಯ ಗಣಪತಿ ದೇವಸ್ಥಾನ, ರಾಜೀವಗಾಂಧಿ ನಗರದ ಈಶ್ವರ ದೇವಸ್ಥಾನ, ಶಹಪೂರಪೇಟೆಯ ಶಂಕರಲಿಂಗ ದೇವಸ್ಥಾನ, ಸರಾಫ್ ಬಜಾರ್ ರಸ್ತೆಯ ಪಂಚಲಿಂಗೇಶ್ವರ ದೇವಸ್ಥಾನ, ಸಂಭಾಪೂರ ರಸ್ತೆಯ ಕಾಶಿ ವಿಶ್ವನಾಥ ದೇವಸ್ಥಾನ ಸೇರಿದಂತೆ ವಿವಿಧೆಡೆ ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಎಳನೀರು ಅಭಿಷೇಕ ಜರುಗಿದವು.

    ವಿಶೇಷ ಪೂಜೆ: ಐತಿಹಾಸ ತ್ರಿಕೂಟೇಶ್ವರ ಹಾಗೂ ಭಲ್ಲೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಂಗಳಾರತಿ ಜರುಗಿತು. ನಂತರ ಸರಸ್ವತಿ ಭಜನಾ ಮಂಡಳಿಯಿಂದ ಲಲಿತಾ ಸಹಸ್ರನಾಮ ಜರುಗಿತು. ದ್ವಾದಶ ಜ್ಯೋತಿರ್ಲಿಂಗ ದರ್ಶನ: ಬ್ರಹ್ಮಕುಮಾರಿ ವಿವಿ ವತಿಯಿಂದ ಗದಗ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಶಿವಲಿಂಗ, ರುದ್ರಾಕ್ಷಿ ಶಿವಲಿಂಗ, ದ್ವಾದಶ ಜ್ಯೋತಿರ್ಲಿಂಗಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಶಿವಧ್ವಜಾರೋಹಣ ಮತ್ತು ಪ್ರತಿಜ್ಞಾ ಸ್ವೀಕಾರ ಜರುಗಿತು. ನಂತರ ಮುನ್ಸಿಪಲ್ ಕಾಲೇಜ್ ಮೈದಾನದಿಂದ ಆರಂಭವಾದ ಶೋಭಾಯಾತ್ರೆ ರಸ್ತೆಗಳಲ್ಲಿ ಸಂಚರಿಸಿ ಮರಳಿ ಕಾಲೇಜ್ ಆವರಣ ಸೇರಿತು.

    ಧಾರ್ವಿುಕ ಕ್ಷೇತ್ರ ತ್ರಿಕೂಟೇಶ್ವರ ದೇವಸ್ಥಾನ

    ತ್ರಿಕೂಟೇಶ್ವರ ದೇವಸ್ಥಾನ ಧಾರ್ವಿುಕ ಮಹತ್ವದ ಜತೆಗೆ ಐತಿಹಾಸಿಕ ತಾಣವಾಗಿದೆ. 11ನೇ ಶತಮಾನದಲ್ಲಿ ಈ ದೇವಸ್ಥಾನ ನಿರ್ವಿುಸಿದ್ದು, ವಿಶಿಷ್ಟ ವಾಸ್ತುಶಿಲ್ಪ ಕಲೆ ಹೊಂದಿದೆ. ತ್ರಿಕೂಟವೆಂದರೆ ಚಾಲುಕ್ಯ ಹಾಗೂ ಹೊಯ್ಸಳರ ಕಾಲದ ಏಕಕೂಟ, ದ್ವಿಕೂಟ, ತ್ರಿಕೂಟ ಅಂದರೆ ಒಂದು, ಎರಡು ಮತ್ತು ಮೂರು ಗರ್ಭಗೃಹಗಳಿರುವ ದೇವಾಲಯವಾಗಿದೆ. ತ್ರಿಕೂಟವೆಂದರೆ ಬ್ರಹ್ಮ, ವಿಷ್ಣು, ಮಹೇಶ್ವರರ ದೇವಸ್ಥಾನವಾಗಿದೆ. ಗರ್ಭಗೃಹದಲ್ಲಿ ಮೂರು ಲಿಂಗಗಳು ಒಂದೇ ಪೀಠದ ಮೇಲೆ ಇರುವುದರಿಂದ ತ್ರಿಕೂಟೇಶ್ವರ ಎಂದು ಕರೆಯಲಾಗುತ್ತದೆ. ಗೋಕರ್ಣ, ಶ್ರೀಶೈಲದಲ್ಲಿ ಕೂಡ ಒಂದೇ ಪೀಠದಲ್ಲಿ ಲಿಂಗವಿದೆ. ಹೀಗಾಗಿ ಒಂದೇ ಪಾಣಿ ಪೀಠದಲ್ಲಿ ಮೂರು ಲಿಂಗ ಇರುವ ತ್ರಿಕೂಟೇಶ್ವರ ದೇವಸ್ಥಾನ ಅಪರೂಪದ ಧಾರ್ವಿುಕ ಕ್ಷೇತ್ರ ಎನಿಸಿದೆ. ಈ ದೇವಸ್ಥಾನದ ಆವರಣದಲ್ಲಿ ಸರಸ್ವತಿ ದೇವಾಲಯವಿದೆ. ಶೃಂಗೇರಿ ಶಾರದಾಂಬೆ ದೇವಸ್ಥಾನ ಹೊರತುಪಡಿಸಿ ಸರಸ್ವತಿಯ ದೇವಸ್ಥಾನ ತ್ರಿಕೂಟೇಶ್ವರ ದೇವಸ್ಥಾನದಲ್ಲಿದೆ. ದೇವಸ್ಥಾನ ಟ್ರಸ್ಟ್ ಕಮಿಟಿಯವರು ಇದರ ಪಕ್ಕದಲ್ಲಿ ಮತ್ತೊಂದು ಹೊಸ ಸರಸ್ವತಿ ದೇವಸ್ಥಾನ ನಿರ್ವಿುಸಿದ್ದಾರೆ. ಎರಡೂ ಸರಸ್ವತಿ ದೇವಾಲಯಕ್ಕೆ ಅಭಿಷೇಕ, ಕುಂಕುಮಾರ್ಚನೆ, ಅಲಂಕಾರ ಪೂಜೆ ನಡೆಯಿತು. ಪ್ರತಿ ವರ್ಷ ಮಹಾಶಿವರಾತ್ರಿ ದಿನದಂದು ಇಲ್ಲಿ ನಡೆಯುವ ಅಹೋರಾತ್ರಿ ಯಾಮಿ ಪೂಜಾ ಕೈಂಕರ್ಯದಲ್ಲಿ ಗದಗ ಬೆಟಗೇರಿ ಅವಳಿ ಸೇರಿ ಜಿಲ್ಲೆಯ ಜನರು ಪಾಲ್ಗೊಳ್ಳುತ್ತಾರೆ.

    ಸರತಿಯಲ್ಲಿ ನಿಂತು ದೇವರ ದರ್ಶನ

    ಮುಂಡರಗಿ: ಪಟ್ಟಣ ಸೇರಿದಂತೆ ತಾಲೂಕಿನ ಶಿವ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜಾ ಜರುಗಿದವು. ಬೆಳಗ್ಗೆಯಿಂದ ಭಕ್ತರು ಶಿವನ ದೇವಾಲಯಗಳಿಗೆ ತೆರಳಿ ಸರದಿಯಲ್ಲಿ ನಿಂತು ದರ್ಶನ ಪಡೆದರು.

    ಶಿವ ದೇವಾಲಯಗಳಲ್ಲಿ ಮಹಾರುದ್ರಾಭಿಷೇಕ ಪೂಜೆ ನಡೆಯಿತು. ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದ ಶಿವನ ದೇವಸ್ಥಾನ, ಜಗದ್ಗುರು ತೋಂಟದಾರ್ಯ ಮಠ, ಈಶ್ವರ ಮಂದಿರ, ಶ್ರೀ ಮಂಜುನಾಥ ದೇವಸ್ಥಾನ, ವಿಠಲಾಪುರ ಮಹಾರಸಲಿಂಗೇಶ್ವರ, ಬಿದರಳ್ಳಿ ಸೋಮೇಶ್ವರ, ಶಿಂಗಟಾಲೂರ ಕಲ್ಲಿನಾಥೇಶ್ವರ, ಡಂಬಳದ ದೊಡ್ಡಬಸವೇಶ್ವರ, ಸೋಮನಾಥೇಶ್ವರ ಸೇರಿ ಪ್ರಮುಖ ಶಿವ ದೇವಾಲಯಗಳಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಹಲವೆಡೆ ರಾತ್ರಿ ಪೂರ್ಣ ಜಾಗರಣೆ ಮಾಡಿದರು. ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

    ಭಕ್ತಿಭಾವದಿಂದ ಶಿವ ಪರಮಾತ್ಮನ ಪೂಜೆ

    ನರೇಗಲ್ಲ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಶಿವರಾತ್ರಿ ಪ್ರಯುಕ್ತ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು ಜರುಗಿದವು. ಸ್ಥಳೀಯ ಚಂದ್ರಮೌಳೇಶ್ವರ, ಕೊಂತಿ ಮಲ್ಲೇಶ್ವರ (ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ), ತ್ರಿಪುಕಾಂತೇಶ್ವರ, ಸೋಮೇಶ್ವರ, ವೀರನಾರಾಯಣ, ಕಲ್ಮೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.

    ಶಿವಲಿಂಗಕ್ಕೆ ಪೂಜೆ, ಕ್ಷೀರಾಭಿಷೇಕ

    ರೋಣ: ಶಿವರಾತ್ರಿ ನಿಮಿತ್ತ ಪಟ್ಟಣದಲ್ಲಿನ ಶಿವ ದೇವಸ್ಥಾನಗಳಲ್ಲಿ ಹೋಮ, ಹವನ, ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಹುತೇಕ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಜರುಗಿದವು. ಪಟ್ಟಣದ ಗೌಡ್ರ ಓಣಿಯಲ್ಲಿರುವ ಪುರಾತನ ಸೋಮೇಶ್ವರ ದೇವಸ್ಥಾನಕ್ಕೆ ಮೊದಲು ಕ್ಷೀರಾಭಿಷೇಕ, ಕುಂಕುಮಾರ್ಚನೆ ಮಾಡಿ ಬಿಲ್ವಪತ್ರೆ, ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಪಟ್ಟಣದ ಹೊಸ ಸಂತೆ ಮಾರುಕಟ್ಟೆಯಲ್ಲಿರುವ ಓಂ ಶಾಂತಿ ದೇವಸ್ಥಾನದಲ್ಲಿಯೂ ಬೆಳಗ್ಗೆ ಶಿವಜ್ಞಾನ, ವಿಶೇಷ ಪೂಜೆ, ರುದ್ರಾಭಿಷೇಕ ನಡೆದವು.

    ಕಾಲಕಾಲೇಶ್ವರ, ಶಾಂತೇಶ್ವರನಿಗೆ ಸಹಸ್ರ ಬಿಲ್ವಾರ್ಚನೆ

    ಗಜೇಂದ್ರಗಡ: ಸಮೀಪದ ಶ್ರೀಕಾಲಕಾಲೇಶ್ವರ, ನೆಲ್ಲೂರ ಬಳಿಯ ಶಾಂತೇಶ್ವರ ದೇವಸ್ಥಾನಗಳಿಗೆ ವಿವಿಧ ಭಾಗಗಳಿಂದ ಭಕ್ತರ ದಂಡು ಹರಿದು ಬಂದಿತ್ತು. ಪುಣ್ಯ ಕ್ಷೇತ್ರಗಳಲ್ಲಿ ಅಹೋರಾತ್ರಿ ಶಿವನ ಕಥಾ ಶ್ರವಣ, ರುದ್ರಾಧ್ಯಾಯ, ಪುರುಷ ಸ್ತೋತ್ರ ಪಠ್ಯದೊಂದಿಗೆ ಧ್ಯಾನ, ಜಪ ತಪ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಗಳು ನೆರವೇರಿದವು. ಯುವಕರು, ರೈತ ಕುಟುಂಬದವರು ಪಾದಯಾತ್ರೆ ಮೂಲಕ ಕಾಲಕಾಲೇಶ್ವರನ ಸನ್ನಿಧಿಗೆ ಬಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದಿನಪೂರ್ತಿ ಉಪವಾಸ ವ್ರತಾಚರಣೆ, ಸಾಮೂಹಿಕ ಭಜನೆ ಮಾಡಿ ಭಕ್ತಿ ಸಮರ್ಪಿಸಿದರು.

    ವಿವಿಧೆಡೆ ಪೂಜೆ: ಪಟ್ಟಣದ ಈಶ್ವರ, ಗಣಪತಿ, ವಿರೂಪಾಕ್ಷೇಶ್ವರ, ಶ್ರೀರಾಮ ಮಂದಿರ, ವಿಠಲ ದೇವರ ಗುಡಿ, ಜಗದಂಬಾ, ಶ್ರೀದುರ್ಗಾ ಮಾತೆಯರ ದೇವಸ್ಥಾನದಲ್ಲಿ ಭಕ್ತರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts