More

    ಅಧಿಕಾರಿಯ ದುರ್ನಡತೆಯ ಫಲ; ಆ ಕ್ಷಣ.. ಡಾ.ಡಿ.ವಿ. ಗುರುಪ್ರಸಾದ್ ಅಂಕಣ

    ಮೂವತ್ತೆರಡು ವರ್ಷದ ಅವಿವಾಹಿತೆ ಲತಾ ಹೋಟೆಲ್ ಮ್ಯಾನೇಜ್​ವೆುಂಟ್ ಪದವಿ ನಂತರ ಪುಣೆಯ ಪಂಚತಾರಾ ಹೋಟೆಲೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದಳು. ಆಕೆ ಅಂತರ್ಜಾಲದ ಮಾರಾಟ ತಾಣವೊಂದರ ಮೂಲಕ ತನ್ನ ಕಾರನ್ನು ಮಾರಲು ಹೋದಾಗ ಮಾಜಿ ಸೈನಿಕನೆಂದು ಹೇಳಿಕೊಂಡವನೊಬ್ಬ ಖರೀದಿಸಲು ಮುಂದೆ ಬಂದ. ವ್ಯವಹಾರ ಕುದುರಿದ ನಂತರ, ‘ನಿಮಗೆ ಒಂದು ಕ್ಯೂಆರ್ ಕೋಡ್ ಕಳುಹಿಸುತ್ತೇನೆ. ನೀವು ಸ್ಕಾ್ಯನ್ ಮಾಡಿದರೆ ನಿಮಗೆ ನಾನು ಕೊಡಬೇಕಾದ ಹಣ ಮುಟ್ಟುತ್ತದೆ, ಆನಂತರವೇ ವಾಹನವನ್ನು ನಿಮ್ಮಿಂದ ಪಡೆಯುವೆ’ ಎಂದ. ಕೋಡ್ ಬಂದಾಗ ಅದನ್ನು ಸ್ಕಾ್ಯನ್ ಮಾಡಿದಳು. ಕೆಲ ನಿಮಿಷಗಳ ನಂತರ ಫೋನ್ ಮಾಡಿದ ಆತ, ‘ಸರಿಯಾಗಿ ಸ್ಕಾ್ಯನ್ ಆಗಿಲ್ಲ ಇನ್ನೊಮ್ಮೆ ಕಳುಹಿಸುತ್ತೇನೆ, ಮತ್ತೊಮ್ಮೆ ಮಾಡಿ’ ಎಂದ. ಅದೂ ಸರಿಯಾಗಿ ಆಗಿಲ್ಲವೆಂದು ಹೇಳಿ ಮೂರನೆಯ ಸಲ ಕೋಡ್ ಕಳುಹಿಸಿದ. ಕೆಲ ಕಾಲದ ನಂತರ ಲತಾಗೆ ಆಕೆಯ ಅಕೌಂಟ್​ನಿಂದ -ಠಿ; 3.75 ಲಕ್ಷ ಕಡಿತಗೊಂಡ ಬಗ್ಗೆ ಬ್ಯಾಂಕಿನಿಂದ ಸಂದೇಶಗಳು ಬಂದಾಗ ಗಾಬರಿಗೊಂಡ ಆಕೆ ಸಮೀಪದ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದಳು. ಮಾರನೆಯ ದಿನ ಆಕೆಗೆ ಸೈಬರ್ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಹೇಮಂತ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕರೆಮಾಡಿ, ‘ನಿಮ್ಮ ದೂರಿನ ಬಗ್ಗೆ ಇನ್ನಷ್ಟು ವಿವರಗಳು ಬೇಕಾಗಿವೆ, ಅವನ್ನು ಸಂಗ್ರಹಿಸಲು ನಿಮ್ಮನ್ನು ಭೇಟಿಯಾಗುವೆ’ ಎಂದ. ಅದೇ ಸಂಜೆ ಅವಳ ಹೋಟೆಲ್​ಗೆ ಬಂದ ಹೇಮಂತ್ ತನ್ನ ಪರಿಚಯ ಪತ್ರವನ್ನು ತೋರಿಸಿ ಆಕೆಯಿಂದ ಪ್ರಕರಣದ ಪೂರಕ ಮಾಹಿತಿಯನ್ನು ಪಡೆದ. ‘ಈ ಪ್ರಕರಣದ ತನಿಖೆಗಾಗಿ ನಿಮ್ಮ ಸೆಲ್​ಫೋನ್ ಮತ್ತು ಲ್ಯಾಪ್​ಟಾಪ್ ಬೇಕಾಗಿದೆ’ ಎಂದ. ‘ನಾನು ಸೆಲ್​ಫೋನ್ ಮೂಲಕವೇ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಿದ್ದೇನೆ, ಲ್ಯಾಪ್​ಟಾಪ್ ಬಳಸಿಲ್ಲ’ ಎಂದು ಲತಾ ಹೇಳಿದರೂ ‘ಇವೆರಡನ್ನೂ ನೋಡುವ ಅವಶ್ಯಕತೆ ಇರುವುದರಿಂದ ಒಂದು ದಿನದ ಮಟ್ಟಿಗೆ ಮಾತ್ರ ಫೋನನ್ನು ಕೊಡಬೇಕಾಗುತ್ತದೆ, ಲ್ಯಾಪ್​ಟಾಪ್ ಒಂದು ವಾರದವರೆಗೆ ಬೇಕಾಗುತ್ತದೆ’ ಎಂದ.

    ಮಾರನೆಯ ದಿನವೇ ಲತಾ ಸೈಬರ್ ಠಾಣೆಗೆ ಹೋಗಿ ತನ್ನ ಫೋನ್ ಮತ್ತು ಲ್ಯಾಪ್​ಟಾಪ್​ಗಳನ್ನು ಇನ್​ಸ್ಪೆಕ್ಟರ್ ಹೇಮಂತ್​ಗೆ ಕೊಟ್ಟು ಬಂದಳು. ಅದೇ ಸಂಜೆ ಹೇಮಂತ್​ನಿಂದ ಅವಳಿಗೆ ಕರೆ ಬಂದಿತು. ‘ನಿಮ್ಮನ್ನು ತುರ್ತಾಗಿ ನೋಡಬೇಕಾಗಿದೆ. ಗಹನವಾದ ವಿಷಯವಾದ್ದರಿಂದ ಠಾಣೆ ಅಥವಾ ಹೋಟೆಲ್​ನಲ್ಲಿ ಮಾತನಾಡುವಂತಿಲ್ಲ, ಬೇರೊಂದು ಜಾಗದಲ್ಲಿ ಭೇಟಿಯಾಗಬೇಕಲ್ಲ’ ಎಂದ. ಲತಾ ಅವನನ್ನು ಮನೆಗೆ ಬರಲು ಹೇಳಿದಳು. ರಾತ್ರಿ 8 ಗಂಟೆಗೆ ಲತಾಳ ಮನೆಗೆ ಬಂದ ಹೇಮಂತ್ ಅವಳಿಗೆ ಮೊಬೈಲ್ ಫೋನ್ ಮತ್ತು ಲ್ಯಾಪ್​ಟಾಪ್ ವಾಪಸ್ ಮಾಡುತ್ತ, ‘ನಿಮ್ಮ ಫೋನಿನಲ್ಲಿ ನಿಮ್ಮದೇ ಕೆಲವು ನಗ್ನ ಫೋಟೋಗಳಿವೆ ಮತ್ತು ಲ್ಯಾಪ್​ಟಾಪ್​ನಲ್ಲಿ ನೀವು ಪುರುಷನೊಬ್ಬನ ಜತೆಗೆ ಕಾಮಕೇಳಿಯಲ್ಲಿ ತೊಡಗಿರುವ ವಿಡಿಯೋ ಇದೆಯಲ್ಲ’, ಎಂದು ಹೇಳಿ ಆ ದೃಶ್ಯಗಳನ್ನು ತೋರಿಸಿದ. ಲತಾಗೆ ಮಾತೇ ಹೊರಡದಂತಾಯಿತು.

    ‘ಈ ವಿಡಿಯೋದಲ್ಲಿ ನಿಮ್ಮ ಜೊತೆಗಿರುವ ವ್ಯಕ್ತಿ ಯಾರು?’ ಎಂದು ಆತ ಕೇಳಿದಾಗ ಲತಾ- ‘ಈ ಹಿಂದೆ ನಮ್ಮ ಊರಿನವನೇ ಆದ ವಿವೇಕ್ ಎನ್ನುವ ಯುವಕನನ್ನು ಪ್ರೇಮಿಸುತ್ತಿದ್ದೆ. ಲಗ್ನವಾಗಬೇಕು ಎಂದು ತೀರ್ವನಿಸಿ ಇಬ್ಬರೂ ಸಹಜೀವನ ಮಾಡುತ್ತಿದ್ದೆವು. ಆತ ನಮ್ಮಿಬ್ಬರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ನನ್ನ ಲ್ಯಾಪ್​ಟಾಪಿನಲ್ಲಿ ಲೋಡ್ ಮಾಡಿದ್ದ. ಆತನೇ ನನ್ನ ನಗ್ನ ಫೋಟೋಗಳನ್ನೂ ತೆಗೆದಿದ್ದ. ಆನಂತರ ಕಾರಣಾಂತರದಿಂದ ನಮ್ಮ ಸಂಬಂಧ ಕಡಿದುಹೋಯಿತು. ಅವನು ಬೇರೊಬ್ಬಳನ್ನು ಲಗ್ನವಾಗಿ ಅಮೆರಿಕಕ್ಕೆ ಹೋದ. ಇವೆಲ್ಲವನ್ನೂ ಡಿಲೀಟ್ ಮಾಡಲು ನಾನು ಮರೆತಿರಬಹುದೆಂದು ತೋರುತ್ತದೆ, ಈಗಲೇ ಮಾಡುವೆ’ ಎಂದಳು.

    ‘ಈಗ ಡಿಲೀಟ್ ಮಾಡಲು ಹೇಗೆ ಬರುತ್ತದೆ ಮೇಡಂ? ಸೈಬರ್ ಲ್ಯಾಬಿನಲ್ಲಿ ನಿಮ್ಮ ಲ್ಯಾಪ್​ಟಾಪಿನ ಹಾರ್ಡ್​ಡಿಸ್ಕ್ ನಕಲಾಗಿದೆ. ಹೊಸದಾಗಿ ಬಂದಿರುವ ಕಾನೂನಿನ್ವಯ ಈ ರೀತಿ ನಿಮ್ಮ ಕಂಪ್ಯೂಟರಿನಲ್ಲಿ ಅಶ್ಲೀಲ ದೃಶ್ಯಗಳನ್ನು ಇಟ್ಟುಕೊಳ್ಳುವುದು ಅಪರಾಧವಾಗುತ್ತದೆ. ನಿಮಗೆ ಐದು ವರ್ಷಗಳವರೆಗೆ ಕಾರಾಗೃಹದ ಶಿಕ್ಷೆಯಾಗಬಹುದು. ಯಾವುದಕ್ಕೂ ಹುಷಾರಾಗಿರಿ’ ಎಂದು ಹೇಳಿ ಹೊರಟುಹೋದ. ಎರಡು ದಿನದ ನಂತರ ಮತ್ತೆ ಕರೆ ಮಾಡಿ, ‘ನಿಮ್ಮ ಲ್ಯಾಪ್​ಟಾಪ್​ನಲ್ಲಿ ಅಶ್ಲೀಲ ವಿಡಿಯೋ ಇರುವ ಬಗ್ಗೆ ಹಿರಿಯ ಅಧಿಕಾರಿಗೆ ಗೊತ್ತಾಗಿದೆ, ನಿಮ್ಮ ಮೇಲೆ ಕೇಸ್ ಮಾಡಲು ಹೇಳಿದ್ದಾರೆ, ಕೂಡಲೇ ನಿರೀಕ್ಷಣಾ ಜಾಮೀನು ಪಡೆಯಿರಿ’ ಎಂದ. ಬೆವೆತುಹೋದ ಲತಾ, ‘ನನಗೆ ಸಹಾಯ ಮಾಡಿ, ಇದು ನನ್ನ ಮರ್ಯಾದೆಯ ಪ್ರಶ್ನೆ’ ಎಂದಾಗ, ಹೇಮಂತ್, ‘ನೀವು ಸ್ವಲ್ಪ ಸಹಕರಿಸಿದರೆ ಖಂಡಿತ ಸಹಾಯ ಮಾಡುವೆ’ ಎಂದ. ‘ಸಹಕರಿಸುವುದು ಎಂದರೇನು’ ಎಂದು ಲತಾ ಕೇಳಿದಾಗ, ‘ನೀವು ಓದಿದವರು, ದೊಡ್ಡ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದೀರಿ, ಸ್ವಲ್ಪ ಅರ್ಥಮಾಡಿಕೊಳ್ಳಿ’ ಎಂದ. ‘ನಾನೇನಾದರೂ ಹಣ ಕೊಡಬೇಕೇ?’ ಎಂದು ಕೇಳಿದರೆ, ‘ನೀವೀಗಾಗಲೇ ನಿಮ್ಮ ಕಾರ್ ಮಾರಲು ಹೊರಟು ಮೂರೂ ಮುಕ್ಕಾಲು ಲಕ್ಷ ರೂ. ಕಳೆದುಕೊಂಡಿದ್ದೀರಿ, ನಿಮ್ಮ ಬಗ್ಗೆ ಅನುಕಂಪವಿದೆ. ನಿಮ್ಮಿಂದ ಹಣ ಕೇಳುವಷ್ಟು ದುಷ್ಟ ನಾನಲ್ಲ’ ಎಂದ. ‘ಹಾಗಾದರೆ ಏನು ಮಾಡಬೇಕು?’ ಎಂದು ಲತಾ ಕೇಳಿದಾಗ, ‘ನೀವೇನು ಮಾಡಬೇಕಾದ್ದಿಲ್ಲ. ನನ್ನ ಜೊತೆ ಹೋಟೆಲ್​ಗೆ ಡಿನ್ನರ್​ಗೆ ಬರಬೇಕು’ ಎಂದ. ‘ಅಷ್ಟೇ ತಾನೇ ಇಂದೇ ಹೋಗೋಣ, ನಾನೇ ನಿಮಗೆ ಊಟ ಕೊಡಿಸುತ್ತೇನೆ’ ಎಂದಳು. ಅದೇ ರಾತ್ರಿ ಅವರಿಬ್ಬರೂ ರೆಸ್ಟೋರೆಂಟ್​ಗೆ ಹೋಗಿ ಊಟ ಮಾಡಿದ ನಂತರ ಹೇಮಂತ್ ಮೆಲುದನಿಯಲ್ಲಿ, ‘ಈ ರಾತ್ರಿ ನಿಮ್ಮ ಜೊತೆ ಕಳೆಯಬಯಸುತ್ತೇನೆ. ಇದಕ್ಕೊಪ್ಪಿದರೆ ನಿಮ್ಮ ಮೇಲೆ ಯಾವುದೇ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳುತ್ತೇನೆ’ ಎಂದ. ‘ಇದು ಹೇಗೆ ಸಾಧ್ಯ? ಪೊಲೀಸ್ ಅಧಿಕಾರಿಯಾಗಿ ಹೀಗೆ ಮಾತನಾಡುವುದೇ?’ ಎಂದಳು. ನಸುನಕ್ಕ ಹೇಮಂತ್, ‘ನೀವು ಮದುವೆಯೇ ಆಗದೆ ಯುವಕನೊಡನೆ ಸಂಬಂಧ ಇಟ್ಟುಕೊಂಡು ವಿಡಿಯೋ ಕೂಡ ಮಾಡಿಕೊಂಡಿಲ್ಲವೇ? ನನ್ನನ್ನೂ ಅವನಂತೆಯೇ ಎಂದು ತಿಳಿದು ಒಂದು ರಾತ್ರಿ ಸುಖ ನೀಡಿದರೆ ನಿಮ್ಮ ಮೇಲೆ ಪ್ರಕರಣವೂ ದಾಖಲಾಗುವುದಿಲ್ಲ, ಮಾನವೂ ಉಳಿಯುತ್ತದೆ, ನೌಕರಿಯೂ ಭದ್ರವಾಗಿರುತ್ತದೆ. ವಿಡಿಯೋ ಬಗ್ಗೆ ಇತರರಿಗೆ ತಿಳಿದರೆ ಮುಂದೆ ನಿಮ್ಮ ಮದುವೆಗೂ ತೊಂದರೆಯಾಗಬಹುದಲ್ಲವೇ, ವಿವೇಚನೆ ಉಪಯೋಗಿಸಿ’ ಎಂದ. ಲತಾ ಒಲ್ಲದ ಮನಸ್ಸಿನಿಂದಲೇ ಹೇಮಂತನ ಬೇಡಿಕೆಗೆ ಒಪ್ಪಿದಳು. ಅದೇ ರಾತ್ರಿ ಅವರಿಬ್ಬರೂ ಲತಾಳ ಮನೆಯಲ್ಲಿಯೇ ಕಳೆದರು. ಮಾರನೆಯ ದಿನ ಬೆಳಗ್ಗೆ, ‘ನಮ್ಮ ಕಚೇರಿಯ ಲ್ಯಾಪ್​ಟಾಪ್​ನಿಂದ ವಿಡಿಯೋವನ್ನು ಅಳಿಸಿಬಿಡುತ್ತೇನೆ. ನೀವೇನೂ ಚಿಂತೆ ಮಾಡಬೇಕಾದ್ದಿಲ್ಲ, ಕಾರನ್ನು ಖರೀದಿ ಮಾಡುವೆನೆಂದು ನಿಮಗೆ ಮೋಸ ಮಾಡಿದವನ ಪತ್ತೆಯನ್ನೂ ಆದಷ್ಟು ಬೇಗನೆ ಮಾಡಿ ನಿಮ್ಮ ಹಣವನ್ನು ವಾಪಸ್ ಕೊಡಿಸುತ್ತೇನೆ’ ಎಂದ ಹೇಮಂತ್.

    ತಿಂಗಳ ನಂತರವೂ ಮೋಸದ ಪ್ರಕರಣ ಪತ್ತೆಯಾಗದಿದ್ದಾಗ ಲತಾ ಹೇಮಂತನಿಗೆ ಕರೆಮಾಡಿದಳು. ಆಗ ಆತ, ‘ಸರ್ಕಾರದಲ್ಲಿ ಯಾವುದಾದರೂ ಫೈಲ್ ಮುಂದೆ ಹೋಗಬೇಕಾದರೆ ಅದರ ಮೇಲೆ ಭಾರವನ್ನಿಡಬೇಕು’ ಎಂದ. ‘ನೀವು ಹೇಳಬೇಕಾದ್ದನ್ನು ಬಿಡಿಸಿ ಹೇಳಿ’ ಎಂದಳು. ‘ನೀವು ಇನ್ನೊಂದು ರಾತ್ರಿ ನನ್ನೊಡನೆ ಕಳೆದರೆ ನಿಮ್ಮ ಪ್ರಕರಣ ಪತ್ತೆಯಾಗುತ್ತದೆ’ ಎಂದ. ಇದನ್ನು ಕೇಳಿ ಲತಾಗೆ ಹೇಸಿಗೆಯಾಯಿತು. ಒಮ್ಮೆ ಮಾಡಿದ ತಪ್ಪನ್ನು ಇನ್ನೊಮ್ಮೆ ಮಾಡಲು ಆಕೆಗೆ ಇಷ್ಟವಿರಲಿಲ್ಲ. ನಡೆದ ವಿಷಯವನ್ನು ಗೆಳತಿಗೆ ಹೇಳಿದಳು. ಆಕೆ ಲತಾಳನ್ನು ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ತನ್ನ ಸಂಬಂಧಿಕರ ಬಳಿ ಕರೆದೊಯ್ದಳು. ವಿಷಯವನ್ನು ಲತಾ ಅವರ ಮುಂದೆ ಹೇಳಿದಾಗ ಆ ಅಧಿಕಾರಿ- ‘ಭಾರತದ ಮಾಹಿತಿ-ತಂತ್ರಜ್ಞಾನ ಕಾಯಿದೆಯ ಅನ್ವಯ ಅಶ್ಲೀಲ ವಿಡಿಯೋಗಳನ್ನು ನಿಮ್ಮ ಫೋನ್, ಕಂಪ್ಯೂಟರ್ ಅಥವಾ ಲ್ಯಾಪ್​ಟಾಪ್​ನಲ್ಲಿ ಇಟ್ಟುಕೊಂಡಿದ್ದರೆ ಅದೇನೂ ಅಪರಾಧವಾಗುವುದಿಲ್ಲ, ಆದರೆ ನಿಮ್ಮ ಫೋನಿನಿಂದ ಇನ್ನೊಬ್ಬರ ಫೋನಿಗಾಗಲೀ ಅಥವಾ ಬೇರಾವುದಾದರೂ ಸಾಧನಕ್ಕಾಗಲೀ ರವಾನಿಸಿದರೆ ಮಾತ್ರ ಅಪರಾಧವಾಗುತ್ತದೆ, ಹೇಮಂತ್ ನಿಮ್ಮನ್ನು ವಂಚಿಸಿ ಅಧಿಕಾರದ ದುರುಪಯೋಗ ಮಾಡಿದ್ದಾನೆ’ ಎಂದು ತಿಳಿಸಿ ಅವಳಿಂದ ದೂರನ್ನು ಬರೆಸಿಕೊಂಡರು.

    ಹೇಮಂತ್​ನ ವಿರುದ್ಧ ಅತ್ಯಾಚಾರ ಮತ್ತು ಸುಲಿಗೆಯ ಕ್ರಿಮಿನಲ್ ಪ್ರಕರಣ ದಾಖಲಾಯಿತು. ಇದಲ್ಲದೆ ಅವನನ್ನು ಸೇವೆಯಿಂದ ಅಮಾನತು ಮಾಡಿ ಇಲಾಖಾ ವಿಚಾರಣೆಯನ್ನೂ ನಡೆಸಲಾಯಿತು. ವಿಚಾರಣೆಯಲ್ಲಿ ಆತನ ದುರ್ವ್ಯವಹಾರ ದೃಢಪಟ್ಟಾಗ ಆತನನ್ನು ಕೆಲಸದಿಂದ ವಜಾ ಮಾಡಲಾಯಿತು. ನ್ಯಾಯಾಲಯದಲ್ಲಿ ಹೇಮಂತನ ಮೇಲಿನ ಆರೋಪಗಳು ಸಾಬೀತಾಗಿ ಅವನಿಗೆ ಹತ್ತು ವರ್ಷಗಳ ಕಾರಾಗೃಹ ಶಿಕ್ಷೆಯಾಯಿತು. ‘ವಿಕಳನಾದೆನು ಪಂಚೇಂದ್ರಿಯ ಧಾತುವಿಂದ, ಮತಿಗೆಟ್ಟ್ಟೆನು ಮನದ ವಿಕಾರದಿಂದ, ಧೃತಿಗೆಟ್ಟೆನು ಕಾಯವಿಕಾರದಿಂದ’ ಎಂಬ ಬಸವಣ್ಣನವರ ನುಡಿಯಂತೆ ಹೇಮಂತ ದುರಾಲೋಚನೆಯ ಫಲವಾಗಿಯೇ ತನ್ನ ನೌಕರಿಯನ್ನೂ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳಬೇಕಾಯಿತು.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts