More

    ಅನುದಾನ ವಾಪಸಾದರೆ ಅಧಿಕಾರಿಗಳೇ ಹೊಣೆ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಿ, ನಿಗಧಿತ ಕಾಲಾವಧಿಯಲ್ಲಿ ಅನುದಾನ ಬಳಕೆ, ಕಾರ್ಯಕ್ರಮಗಳ ಅನುಷ್ಠಾನವಾಗಬೇಕು. ಒಂದು ವೇಳೆ ಅನುದಾನ ವಾಪಸ್ ಆದರೆ ಆಯಾ ಇಲಾಖಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ ಎಚ್ಚರಿಸಿದರು.

    ನಗರದ ಜಿಪಂ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಲಾಖೆಯಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಕಡ್ಡಾಯವಾಗಿ ಸಿಇಒ ಇಲ್ಲವೇ ನನ್ನ ಗಮನಕ್ಕೆ ತನ್ನಿ ಎಂದರು.

    ಸಿಇಒ ರಮೇಶ ದೇಸಾಯಿ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ಮಾಹೆಯಲ್ಲಿದ್ದೇವೆ. ಈ ವರ್ಷ ಇಲಾಖಾವಾರು ನಿಗದಿಯಾದ ಕಾರ್ಯಕ್ರಮಗಳು ಹಾಗೂ ಅನುದಾನ ಈ ಆರ್ಥಿಕ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲೇಬೇಕು. ಅನುದಾನ ಲ್ಯಾಪ್ಸ್ ಆಗಿ ಯೋಜನೆಗಳು ಅರ್ಧಕ್ಕೆ ನಿಂತರೆ ಈ ಯೋಜನೆಗಳಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನ ಬೇಡಿಕೆಯ ಪ್ರಸ್ತಾವನೆಗಳು ಬಂದರೂ ಪರಿಗಣಿಸುವುದಿಲ್ಲ ಎಂದರು.

    ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕೆ ಜಿಲ್ಲೆಗೆ 40 ಕೋಟಿ ರೂ. ಬಿಡುಗಡೆಯಾಗಿದೆ. ಈ ಅನುದಾನವನ್ನು ಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಹೆಚ್ಚುವರಿ ಅನುದಾನ ಕೇಳಲು ಸಾಧ್ಯ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಮೀನು ಸಾಗಾಣಿಕೆಗಾಗಿ ವೈಜ್ಞಾನಿಕವಾಗಿ ಕೆರೆಗಳನ್ನು ವರ್ಗೀಕರಿಸಿ ಹಂಚಿಕೆ ಮಾಡಲು ಮೀನುಗಾರಿಕೆ ಸಚಿವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. ತಕ್ಷಣವೇ ಸರ್ವೆ ನಡೆಸಿ ಕೆರೆಯ ವಿಸ್ತಾರ ಮತ್ತು ಹಾಗೂ ಉತ್ಪಾದನೆ ಆಧರಿಸಿ ಕೆರೆಗಳ ವರ್ಗೀಕರಣದ ವರದಿ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.

    ವಾರದೊಳಗೆ ಆಪ್ ಬಳಸಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಅಂಗನವಾಡಿಗಳಿಗೆ ಭೇಟಿ ನೀಡಿ ಶಿಕ್ಷಕಿಯರ ಹಾಗೂ ಮಕ್ಕಳ ಹಾಜರಾತಿಯನ್ನು ಸುಧಾರಿಸಬೇಕು. ಅಂಗನವಾಡಿಯ ಹಾಜರಾತಿ, ಸಮರ್ಪಕ ಆಹಾರ, ಶುದ್ಧ ಕುಡಿಯುವ ನೀರಿನ ಪೂರೈಕೆ, ಆರೋಗ್ಯ ತಪಾಸಣೆ, ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ ನೀಡಬೇಕು. ಈ ಉದ್ದೇಶಕ್ಕಾಗಿ ತಯಾರಿಸಲಾದ ಆಪ್ ಡೌನ್​ಲೋಡ್​ವಾಡಿಕೊಂಡು ಪ್ರತಿದಿನ ಅಂಗನವಾಡಿಯಲ್ಲಿ ಹಾಜರಾದ ಸೆಲ್ಪಿ ಪೋಟೋ ಅಪ್​ಲೋಡ್ ಮಾಡಬೇಕು. ಮುಂದಿನ ಒಂದು ವಾರದೊಳಗಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಈ ಕುರಿತಂತೆ ಕ್ರಮವಹಿಸುವಂತೆ ಸೂಕ್ತ ನಿರ್ದೇಶನ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ. ಶೆಟ್ಟೆಪ್ಪನವರಿಗೆ ಸೂಚಿಸಿದರು.

    ಬೇಸಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಸಾಂಕ್ರಾಮಿಕ ರೋಗಗಳ ತಡೆ, ತೋಟಗಾರಿಕೆ ಕಾರ್ಯಕ್ರಮಗಳ ಅನುಷ್ಠಾನ, ಜಲಾಮೃತ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ, ಶಿಕ್ಷಣ ಇಲಾಖೆ ಯೋಜನೆಗಳ ಅನುಷ್ಠಾನ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

    ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾರುತಿ ರಾಠೋಡ, ನೀಲವ್ವ ಚವ್ಹಾಣ, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

    ಲೋಕೋಪಯೋಗಿ ಇಂಜಿನಿಯರ್ ತರಾಟೆಗೆ: ಲೋಕೋಪಯೋಗಿ ಇಲಾಖೆಯ ವಾರ್ಷಿಕ ಕಾಮಗಾರಿಗಳ ಅನುಷ್ಠಾನ ಹಾಗೂ ವೆಚ್ಚದ ವಿವರವನ್ನು ಪರಿಶೀಲಿಸಿದ ಬಸನಗೌಡ ದೇಸಾಯಿ, ಜಿಲ್ಲೆಯಲ್ಲಿ ನಿರ್ವಣವಾಗಿರುವ ಸರ್ಕಾರಿ ನೌಕರರ ವಸತಿ ಗೃಹಗಳನ್ನು ನಿರ್ವಹಣೆ ಮಾಡದೇ ಇರುವುದಕ್ಕೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರರನ್ನು ತರಾಟೆಗೆ ತೆಗೆದುಕೊಂಡರು. ಬಿಡುಗಡೆಯಾದ ಅನುದಾನವನ್ನು ಕೇವಲ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸಿಬ್ಬಂದಿ ವಸತಿ ಗೃಹಗಳ ರಿಪೇರಿಗೆ ಬಳಸದೇ ಎಲ್ಲ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಹೆಚ್ಚಿನ ಅನುದಾನಕ್ಕೆ ಕೋರಿಕೆ ಸಲ್ಲಿಸಿ. ಅಧಿಕಾರಿಗಳು ಮನೆ ಬಾಡಿಗೆ ಭತ್ಯೆ ಪಾವತಿ ಮಾಡಿದರೂ ನಿರ್ವಹಣೆ ಇಲ್ಲದೇ ಸೋರುವ ಮನೆಯಲ್ಲಿ ವಾಸಮಾಡುವಂತಾಗಿದೆ. 62 ಲಕ್ಷ ರೂ. ನಿರ್ವಹಣೆಗೆ ಅನುದಾನ ಬಂದರೂ ಸಮರ್ಪಕವಾಗಿ ನಿರ್ವಹಣೆ ಮಾಡಿರುವುದಿಲ್ಲ. ಮೂಲಭೂತವಾಗಿ ವಾಸವಾಗಿರುವ ಮನೆಯೇ ಸೋರುತ್ತಿದ್ದರೆ ಕೆಲಸಮಾಡುವುದು ಹೇಗೆ. ದುರಸ್ತಿಗೆ ಕ್ರಮವಹಿಸಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts