More

    ಅಧಿಕಾರಿಗೂ ತಪಾಸಣೆ ಕಡ್ಡಾಯ!

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಕರೊನಾ ವೈರಸ್ ನಿಯಂತ್ರಣಕ್ಕಾಗಿ ದಿನದ 24 ಗಂಟೆಯೂ ಶ್ರಮಿಸುತ್ತಿರುವ ವೈದ್ಯರು, ಪೊಲೀಸರು ಸೇರಿದಂತೆ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಾಹನ ಚಾಲಕರಿಗೂ ಇದೀಗ ಆರೋಗ್ಯ ತಪಾಸಣೆ ಕಡ್ಡಾಯ ಮಾಡಲಾಗಿದೆ.

    ರಾಜ್ಯದಲ್ಲಿ ಕರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಜನರಿಗೆ ಅರಿವು ಮೂಡಿಸಲು ತಮ್ಮ ಆರೋಗ್ಯ ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಿತ ಕಾಯಲು ಮುಂದಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾ. 25ರಿಂದಲೇ ತುರ್ತು ಸೇವೆಯಲ್ಲಿ ತೊಡಗಿರುವ ಎಲ್ಲ ಸಿಬ್ಬಂದಿಗೂ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಿದೆ.

    ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ನಿತ್ಯವೂ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

    ಅನಾರೋಗ್ಯವಿದ್ದರೆ ಮನೆಯಲ್ಲಿರಿ: ಜಿಲ್ಲೆಯ 506 ಗ್ರಾಪಂಗಳ ವ್ಯಾಪ್ತಿಯಲ್ಲಿ 8450ಕ್ಕೂ ಅಧಿಕ ಪಿಡಿಒ, ಕಾರ್ಯದರ್ಶಿ, ಆಶಾ ಕಾರ್ಯಕರ್ತೆಯರು, ಸ್ವಚ್ಛತಾ ಕಾರ್ಮಿಕರು ನಿತ್ಯ ಬೆಳಗ್ಗೆ 10ರಿಂದ ಸಂಜೆ 5ರ ವರೆಗೂ ಗ್ರಾಮಗಳಲ್ಲಿ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವುದು, ವೈರಸ್ ಲಕ್ಷಣ ಕಂಡು ಬಂದರೆ ಅವರನ್ನು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಹಳ್ಳಿಗಳಿಗೆ ಬಂದಿರುವವರ ಆರೋಗ್ಯದ ಮೇಲೆಯೂ ನಿಗಾ ವಹಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಎಲ್ಲ ಸಿಬ್ಬಂದಿ ನಿತ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ತಕ್ಷಣ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯಬೇಕು. ಅನಾರೋಗ್ಯ ಪೀಡಿತ ಸಿಬ್ಬಂದಿ ಕಚೇರಿಗೆ ಬಾರದೆ ಮನೆಯಲ್ಲಿರುವಂತೆ ಸೂಚನೆ ನೀಡಲಾಗಿದೆ.

    ತಪಾಸಣೆಗೆ ಸೂಚನೆ: ಈಗಾಗಲೇ ಕರೊನಾ ವೈರಸ್ ತಡೆಗಟ್ಟುವ ಕಾರ್ಯಾಚರಣೆಯಲ್ಲಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಿವಿಧ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಗ್ರಾಮೀಣ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಕಂದಾಯ, ಜಿಲ್ಲಾ ಪಂಚಾಯಿತಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಪೊಲೀಸರಿಗೆ ಊಟದ ವ್ಯವಸ್ಥೆ

    ಕರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಲಾಕ್‌ಡೌನ್‌ಗೆ ಆದೇಶಿಸಿ ಅದರ ನಿರ್ವಹಣೆ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿ, ಚಾಲಕರು, ಕಚೇರಿ ಸಿಬ್ಬಂದಿ ದಿನದ 24 ಗಂಟೆಯೂ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿಬ್ಬಂದಿಯ ಆರೋಗ್ಯ ಸಂರಕ್ಷಣೆಗಾಗಿ ವೈದ್ಯಕೀಯ ಸೌಲಭ್ಯಗಳ ಜತೆಗೆ ನಿತ್ಯ ಬೆಳಗ್ಗೆ ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಮನೆಗೆ ಹೋಗಿ ಊಟ ಮಾಡಿ ಬರುವವರಿಗೆ ಅವಕಾಶ ಕಲ್ಪಿಸಲಾಗಿದೆ. ಆಯಾ ಠಾಣೆ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು, ಪೊಲೀಸ್ ಸಿಬ್ಬಂದಿ, ವಾಹನ ಚಾಲಕರು, ವಿವಿಧ ಇಲಾಖೆ ಅಧಿಕಾರಿಗಳಿಗೆ ನಿತ್ಯವೂ ದೇಹದ ಉಷ್ಣಾಂಶ ತಪಾಸಣೆ ಮಾಡಿಸಲಾಗುತ್ತಿದೆ. ಮಾಸ್ಕ್ ಸೇರಿದಂತೆ ಇನ್ನಿತರ ಆರೋಗ್ಯ ಸಂರಕ್ಷಣೆ ಪರಿಕರ ನೀಡಲಾಗುತ್ತಿದೆ. ಸರ್ಕಾರಿ ನೌಕರರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
    | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

    ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಗ್ಯದ ಕುರಿತು ವಿಶೇಷ ನಿಗಾ ವಹಿಸಲಾಗಿದೆ. ಕರ್ತವ್ಯದ ವೇಳೆ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವಂತೆಯೂ ಸೂಚನೆ ನೀಡಲಾಗಿದೆ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸಿಬ್ಬಂದಿಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ತಕ್ಷಣ ರಿಪೋರ್ಟ್ ಮಾಡಿಕೊಳ್ಳಲು ಸೂಚಿಸಲಾಗಿದೆ.
    | ಬಿ.ಎಸ್. ಲೋಕೇಶಕುಮಾರ್ ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts