More

    ಬೆಳಗಾವಿಯಲ್ಲಿ ಶೂ, ಸಾಕ್ಸ್ ಖರೀದಿಗೆ ಆಕ್ಷೇಪ

    ಮೂಡಿಗೆರೆ: ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಲು ಮೂಡಿಗೆರೆ ಶಿಕ್ಷಣ ಇಲಾಖೆಗೆ ಸರ್ಕಾರದಿಂದ 46 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅದನ್ನು ಬಳಸಿಕೊಂಡು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ನಿಯಮ ಬಾಹಿರವಾಗಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆಗೆ ಮುಂದಾಗಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸಲ್ಲಾವುದ್ದೀನ್ ದೂರಿದರು.
    ಪ್ರತಿ ವರ್ಷ ಸರ್ಕಾರಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮಾಡಲು ಎಸ್‌ಡಿಎಂಸಿ ಉಪ ಸಮಿತಿ ರಚಿಸಿಕೊಂಡು ಆ ಸಮಿತಿ ಮೂಲಕ ಶೂ, ಸಾಕ್ಸ್ ಅಂಗಡಿಗಳಿಂದ ಕೊಟೇಷನ್ ಪಡೆದು ಕಡಿಮೆ ಬೆಲೆ ಹಾಗೂ ಗುಣಮಟ್ಟದ ಶೂ, ಸಾಕ್ಸ್ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಬೇಕು. ಆದರೆ ತಾಲೂಕಿನ ಶಾಲೆಗಳಲ್ಲಿ ಉಪ ಸಮಿತಿ ಮಾಡಿದೆ ನೇರವಾಗಿ ಬಿಇಒ ಮೂಲಕ ಶೂ, ಸಾಕ್ಸ್ ಖರೀದಿಸಿ ಹಂಚಿಕೆ ಮಾಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಈ ಹಿಂದೆ ಶೂ, ಸಾಕ್ಸ್ ವಿತರಣೆ ಮಾಡುವಾಗ ಶಾಲೆಯ ಎಸ್‌ಡಿಎಂ ಜಿಲ್ಲಾ ಕೇಂದ್ರದ ಅಂಗಡಿಗಳಿಂದ ಶೂ, ಸಾಕ್ಸ್ ಖರೀದಿ ಮಾಡಿ ಹಂಚಿಕೆ ಮಾಡುತ್ತಿದ್ದರು. ಈ ವರ್ಷ ಬೆಳಗಾವಿಯಿಂದ ಕೊಟೇಷನ್ ಹಾಗೂ ಶೂ, ಸಾಕ್ಸ್ ತರಿಸಿಕೊಂಡು ವಿತರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಂಗಡಿಗಳಲ್ಲಿ ಶೂ, ಸಾಕ್ಸ್ ಸಿಗುವುದಿಲ್ಲವೇ? ಬೆಳಗಾವಿಯಿಂದ ಖರೀದಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು.
    ಬೆಳಗಾವಿಯಿಂದ ಶೂ, ಸಾಕ್ಸ್ ತರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಅವ್ಯವಹಾರ ನಡೆಸಲು ಮುಂದಾಗಿದ್ದಾರೆ. ತಾಲೂಕಿನ ಕೆಲ ಶಾಲೆಗಳಿಗೆ ಈಗಾಗಲೇ ಬೆಳಗಾವಿಯಿಂದ ಶೂ, ಸಾಕ್ಸ್ ಖರೀದಿ ಮಾಡಲಾಗಿದೆ. ಇನ್ನುಳಿದ ಶಾಲೆಗಳಿಗೆ ಖರೀದಿ ಮಾಡಬೇಕಿದೆ. ಇನ್ನು ಮುಂದೆ ಖರೀದಿಸುವ ಶಾಲೆಗಳು ಹಿಂದೆ ಇದ್ದ ನಿಯಮದಂತೆ ಶೂ, ಸಾಕ್ಸ್ ಖರೀದಿಸಿ ಎಸ್‌ಡಿಎಂಸಿ ನಿಯಮದಂತೆ ವಿದ್ಯಾರ್ಥಿಗಳಿಗೆ ವಿತರಿಸಿಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ ನಿಯಮ ಬಾಹಿರವಾಗಿ ಶೂ, ಸಾಕ್ಸ್ ಖರೀದಿಗೆ ಅವಕಾಶ ನೀಡಬಾರದು. ನಿಯಮ ಬಾಹಿರವಾಗಿ ದೂರದ ಜಿಲ್ಲೆಯಿಂದ ಖರೀದಿಸಿ ಅಕ್ರಮ ಎಸೆಗಿರುವ ಬಿಇಒ ಅವರನ್ನು ಅಮಾನತ್ತುಪಡಿಸಬೇಕು. ಇಲ್ಲವಾದರೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts