More

    ಸುರಹೊನ್ನೆ ಶಾಲೆಗೆ ಪಿಎಂಶ್ರೀ ಗರಿ

    ಷಣ್ಮುಖ ಬಿ.ಈ. ನ್ಯಾಮತಿ: ಶಾಲಾ ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೀಯ ಪಿಎಂಶ್ರೀ(ಪಿಎಂ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗೆ ತಾಲೂಕಿನ ಸುರಹೊನ್ನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.

    ರಾಜ್ಯದ 129 ಶಾಲೆಗಳಲ್ಲಿ ಜಿಲ್ಲೆಯ 6 ಶಾಲೆಗಳು ಆಯ್ಕೆಯಾಗಿದ್ದು, ಅದರಲ್ಲಿ ಸುರಹೊನ್ನೆ ಶಾಲೆ, ದಾವಣಗೆರೆ ತಾಲೂಕಿನ ಹಳೇಬಾತಿ ಗುಡ್ಡದ ಕ್ಯಾಂಪ್‌ನ ಸರ್ಕಾರಿ ಶಾಲೆ, ಹರಿಹರ ತಾಲೂಕಿನ ದೊಗ್ಗಳ್ಳಿ ಶಾಲೆ, ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಶಾಲೆ, ಚನ್ನಗಿರಿ ತಾಲೂಕಿನ ಚಿರಡೋಣಿ ಶಾಲೆ, ಜಗಳೂರು ತಾಲೂಕಿನ ತಮಲೇಹಳ್ಳಿ ಶಾಲೆ ಸೇರಿವೆ.

    ಈ ಶಾಲೆಗಳಿಗೆ ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳವರೆಗೆ ವಿಶೇಷ ಅನುದಾನ ನೀಡಲಿದ್ದು, ಮಾದರಿಯಾಗಿ ಅಭಿವೃದ್ಧಿಪಡಿಸಿ ಇತರೆ ಶಾಲೆಗಳಿಗೆ ಪ್ರೇರಣೆ ನೀಡುವ ಉದ್ದೇಶವಿದೆ.

    ಯೋಜನೆಗೆ ಆಯ್ಕೆಯಾಗಲು ಶಾಲೆ ಸ್ವಂತ ಕಟ್ಟಡ ಹೊಂದಿರಬೇಕು, ಹೆಚ್ಚಿನ ವಿದ್ಯಾರ್ಥಿಗಳ ಸಂಖ್ಯೆ, ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತಡೆಗೋಡೆ, ಅಗ್ನಿ ಸುರಕ್ಷತೆ, ಗ್ರಂಥಾಲಯ, ವಿದ್ಯುತ್ ವ್ಯವಸ್ಥೆ, ಪ್ರಯೋಗಾಲಯ, ಕ್ರೀಡಾ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಹೊಂದಿರುವ ಅರ್ಹತೆ ಮೇರೆಗೆ ಆಯ್ಕೆ ಮಾಡಲಾಗಿದೆ.

    ಗ್ರಾಮ ಪಂಚಾಯಿತಿಗಳ ಅನುಮತಿಯೊಂದಿಗೆ ಆನ್‌ಲೈನ್ ಮೂಲಕ ಕಳೆದ ವರ್ಷ ಅರ್ಜಿ ಸಲ್ಲಿಸಲಾಗಿದ್ದು, 2023-24ನೇ ಸಾಲಿನಲ್ಲಿ ಆಯ್ಕೆಯಾಗಿದೆ. ಶಾಲೆಯಲ್ಲಿ ಪ್ರಸ್ತುತ 1 ರಿಂದ 8ನೇ ತರಗತಿವರೆಗೂ 253 ವಿದ್ಯಾರ್ಥಿಗಳು, ಹತ್ತು ಶಿಕ್ಷಕರು ಇದ್ದಾರೆ. 6ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ.

    ನಾವು ಮೊದಲಿನಿಂದ ಶಿಕ್ಷಣದ ಜತೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿದ್ದೆವು. ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವುದರಿಂದ ಹಿಡಿದು ವೈಯಕ್ತಿಕ ಕಾಳಜಿ ವಹಿಸಿ ಪ್ರತಿಯೊಬ್ಬರೂ ಕಲಿಕೆಯಲ್ಲಿ ತೊಡಗುವಂತೆ ಮಾಡುತ್ತೇವೆ ಎನ್ನುತ್ತಾರೆ ಶಿಕ್ಷಕಿ ವಿಜಯಲಕ್ಷ್ಮಿ.

    ಶಾಲಾಭಿವೃದ್ಧಿ ಸಂಘವು ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸುವ ಜತೆಗೆ, ಎಸ್‌ಡಿಎಂಸಿ, ಗ್ರಾಮಸ್ಥರ ನೆರವು ಹೆಚ್ಚಿದೆ ಎನ್ನುತ್ತಾರೆ ಶಿಕ್ಷಕಿಯರಾದ ಹೇಮಾವತಿ, ಸುಧಾ ಬಿ.ಜಿ., ಕಮಲಾಕ್ಷಿ ಎಂ.ಜಿ., ಜ್ಯೋತಿ ಜಿ.ಕೆ.

    ಗ್ರಾಮ ಪಂಚಾಯಿತಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘವು ಶಾಲೆಗೆ ಬೇಕಾದ ಕಂಪ್ಯೂಟರ್, ಶುದ್ಧ ನೀರಿನ ಯಂತ್ರ, ಪ್ರಿಂಟರ್ ಮತ್ತಿತರ ಕೊಡುಗೆ ನೀಡಿದ್ದಾರೆ ಎಂದು ಲಲಿತಮ್ಮ ಎಂ.ಪಿ., ಎಂ. ಬನಶಂಕರಮ್ಮ ಸ್ಮರಿಸಿದರು.

    ನಮ್ಮ ಶಾಲೆಗೆ ಎಲ್ಲ ರೀತಿಯ ಮೂಲಸೌಕರ್ಯ ಇರುವ ಹಿನ್ನೆಲೆಯಲ್ಲಿ ಪಿಎಂಶ್ರೀ ಯೋಜನೆಗೆ ಕಳೆದ ಡಿಸೆಂಬರ್‌ನಲ್ಲಿ ಅರ್ಜಿ ಹಾಕಲಾಗಿತ್ತು. ಇದೀಗ, ಕೇಂದ್ರ ವಿಶೇಷ ಅನುದಾನದಿಂದ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಹಾಗೂ ಮಾದರಿ ಶಾಲೆಯನ್ನಾಗಿ ಮಾಡಲು ಸಹಾಯವಾಗಿದೆ.
    l ಎನ್.ಎಸ್. ಮೋಹನ್, ಮುಖ್ಯ ಶಿಕ್ಷಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts