More

    ಎಪಿಎಂಸಿಗೆ ಚೆಲುವನಹಳ್ಳಿ ಜಾಗ ಪರಿಶೀಲಿಸಲು ಸೂಚನೆ

    ಕೋಲಾರ: ತಾಲೂಕಿನ ಚೆಲುವನಹಳ್ಳಿ ಗ್ರಾಮದ ಸಮೀಪ 127 ಎಕರೆ ಕೆರೆ ಜಾಗವು ಒತ್ತುವರಿದಾರರಿಂದ ಸ್ವರೂಪವನ್ನು ಕಳೆದುಕೊಂಡಿದ್ದು, ಎಪಿಎಂಸಿಗೆ ಸೂಕ್ತ ಜಾಗ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

    ಈ ಜಾಗವನ್ನು ಎಪಿಎಂಸಿ ಮಾರುಕಟ್ಟೆಗೆ ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಅವರ ಗಮನಕ್ಕೆ ಸುದ್ದಿಗಾರರು ತಂದಾಗ, ಪರಿಶೀಲನೆ ಮಾಡಿ ಸದರಿ ಜಾಗವನ್ನು ಮಾರುಕಟ್ಟೆಗೆ ಉಪಯೋಗಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಕ್ರಂಪಾಷಾ ತಮ್ಮ ನ್ಯಾಯಾಲಯದಲ್ಲೇ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳುವ ಮೂಲಕ ಸಚಿವರಿಗೆ ತಪು$್ಪ ಮಾಹಿತಿ ನೀಡಿದ್ದಾರೆಯೇ ಎಂಬ ಅನುಮಾನವ್ಯಕ್ತವಾಗಿದೆ.
    ಚೆಲುವನಹಳ್ಳಿ ಸರ್ವೇ ಸಂಖ್ಯೆ73 ಮತ್ತು ಹೊಸ ಸರ್ವೇ ಸಂಖ್ಯೆ 127ರ ಕೆರೆ ಜಮೀನಿಗೆ ಅಕ್ರಮವಾಗಿ ಮಾಡಿಕೊಂಡಿದ್ದ ಖಾತೆ ರದ್ದುಪಡಿಸಿ, ಪಹಣಿಯಲ್ಲಿ ಸರ್ಕಾರಿ ಕೆರೆ ಎಂದು ನಮೂದಿಸುವಂತೆ ಸಹಾಯಕ ಕಮಿಷನರ್​ ಆದೇಶಿಸಿದ್ದಾರೆ. ಅದೇ ಜಾಗದಲ್ಲಿ ಕೆರೆಯನ್ನು ಮರುನಿರ್ಮಾಣ ಮಾಡಲು ಸೂಚಿಸಿದ್ದಾರೆ.
    ಕೆರೆಯ ಜಾಗವನ್ನು ಚೆಲುವನಹಳ್ಳಿ ಗ್ರಾಮಸ್ಥರು ಒತ್ತುವರಿ ಮಾಡಿಕೊಂಡು ದಾಖಲೆಗಳನ್ನು ಸೃಷ್ಟಿಸಿ ಖಾತೆಗಳನ್ನು ಮಾಡಿಕೊಂಡಿದ್ದರು. ಇದರ ವಿರುದ್ಧ ರೈತ ಸಂದ ಮುಖಂಡರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ದಾಖಲೆಗಳನ್ನು ಪರಿಶೀಲಿಸಿ ಖಾತೆಗಳನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ. ಅದರಂತೆ ಸ್ವರೂಪ ಕಳೆದುಕೊಂಡಿರುವ ಕೆರೆ ಜಾಗವನ್ನು ಎಪಿಎಂಸಿ ಮಾರುಕಟ್ಟೆಗೆ ಬಳಸಿಕೊಳ್ಳುವಂತೆ ಉಸ್ತುವಾರಿ ಸಚಿವರಿಗೆ ಸುದ್ದಿಗಾರರು ಸಲಹೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿಗಳು ಒತ್ತುವರಿದಾರರು ತಮ್ಮ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಹೈಕೋರ್ಟ್​ಗೆ ಮೊರೆ ಹೋಗುತ್ತಾರೆ ಎಂದು ಸಚಿವರಿಗೆ ಹೇಳಿದರು. ಇದು ಸಂಶಯಕ್ಕೆ ಕಾರಣವಾಗಿದೆ.
    ಸಹಾಯಕ ಕಮಿಷನರ್​ ಆದೇಶವನ್ನು ಪ್ರಶ್ನಿಸಿ ಒತ್ತುವರಿದಾರರು ಈವರೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಒತ್ತುವರಿದಾರರು ಹೈಕೋರ್ಟ್​ ಮೊರೆ ಹೋಗುತ್ತಾರೆಂದು ಜಿಲ್ಲಾಧಿಕಾರಿಗಳಿಗೆ ಹೇಳಿದ್ದು ಯಾರು? ಸರ್ಕಾರಿ ಕೆರೆ ಎಂಬ ಸ್ಪಷ್ಟ ದಾಖಲೆಗಳಿರುವಾಗ ರಕ್ಷಣೆ ಮಾಡುವುದು ಬಿಟ್ಟು ನ್ಯಾಯಾಲಯದ ಮೋರೆ ಹೋಗುವ ವಿಚಾರ ಹೇಳಿದ್ದು ಯಾಕೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts