More

    ದಂಡ ಪಾವತಿಗೆ ಮೀನಮೇಷ ಎಣಿಸುತ್ತಿರುವ ಪಿಡಿಒಗಳು

    ಸಿದ್ದಾಪುರ: ಗೈರಾಣಿ ಭೂಮಿಯಲ್ಲಿ ಸಾರ್ವಜನಿಕರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಅನುಮತಿ ನೀಡಿದ ಕಾರಣಕ್ಕೆ ಪಿಡಿಒಗಳಿಂದ ದಂಡ ವಸೂಲಾತಿಗೆ ಸಂಬಂಧಪಟ್ಟ ನಿಗಮದ ಅಧಿಕಾರಿಗಳು ಸೂಚಿಸಿದರೂ ದಂಡ ಪಾವತಿಗೆ ಮಾತ್ರ ಪಿಡಿಒಗಳು ಮೀನಾಮೇಷ ಎಣಿಸುತ್ತಿದ್ದಾರೆ.

    ಸಮೀಪದ ಮುಸ್ಟೂರು ಗ್ರಾಪಂ ವ್ಯಾಪ್ತಿಯ ಗೈರಾಣಿ ಪ್ರದೇಶದ ಸರ್ವೇ ನಂ. 210/1 ರಲ್ಲಿ ಬಸವ ವಸತಿ ಯೋಜನೆ ಹಾಗೂ ಬಸವ ವಸತಿ ಯೋಜನೆ(ಹೆಚ್ಚುವರಿ)ಯಡಿ 2016-17 ಹಾಗೂ 2017-18ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಅಂದಿನ ಪಿಡಿಒಗಳು ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಸರ್ಕಾರಿ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಂದ ವಸತಿ ಯೋಜನೆಯಡಿ ನಿವಾಸ ನಿರ್ಮಾಣಕ್ಕೆ ಪಡೆದ ಅನುದಾನ ಹಿಂಪಡೆಯುವಂತೆ ಬೆಂಗಳೂರಿನ ಆರ್‌ಜಿಆರ್‌ಎಚ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಕಾರಟಗಿ ತಾಪಂಗೆ ಸೂಚನೆ ನೀಡಿದ್ದರು.

    ಒಂದು ವೇಳೆ ಮನೆ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳು ಸರ್ಕಾರದ ಅನುದಾನ ಹಿಂತಿರುಗಿಸದಿದ್ದರೆ, ಜನರಿಗೆ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ ಮುಸ್ಟೂರು ಗ್ರಾಪಂ ಪಿಡಿಒಗಳಿಂದ ಶೇ.11ರ ಬಡ್ಡಿ ದರದಲ್ಲಿ ದಂಡ ವಸೂಲಾತಿಗೆ ಸೂಚಿಸಲಾಗಿತ್ತು. ಇದಕ್ಕೆ ಮನ್ನಣೆ ನೀಡದಿದ್ದರೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಹಾಗೂ ಸಿವಿಲ್ ದಾವೆ ಹೂಡುವಂತೆ ಕಾರಟಗಿ ತಾಪಂ ಇಒಗೆ ಸೂಚಿಸಿದ್ದರು.

    ಕಾಲಾವಕಾಶಕ್ಕೆ ನೀಡುವಂತೆ ಮನವಿ:
    ತಪ್ಪು ಮಾಡಿರುವ ಮೂವರು ಪಿಡಿಒಗಳ ಪೈಕಿ ರಾಮಕೃಷ್ಣ ದೇಸಾಯಿ ಒಟ್ಟು 1,34,000 ರೂ. ದಂಡ ಪಾವತಿಸಬೇಕಿತ್ತು. ಈ ಪೈಕಿ 75 ಸಾವಿರ ರೂ. ದಂಡವನ್ನು 2023 ಸೆ.13 ರಂದು ಪಾವತಿ ಮಾಡಿದ್ದಾರೆ. ಉಳಿದ 59,000 ರೂ. ದಂಡ ಪಾವತಿಗೆ ಕಾಲಾವಕಾಶ ಕೇಳಿದ್ದಾರೆ ಎಂದು ತಾಪಂ ಇಒ ನರಸಪ್ಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸರ್ಕಾರಿ ಗೈರಾಣಿ ಪ್ರದೇಶದ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಕಾನೂನಿನಡಿ ಅವಕಾಶವಿಲ್ಲ. ಆದರೆ, ಮುಸ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ 2016-17 ಹಾಗೂ 2017-18ರಲ್ಲಿ ಸರ್ಕಾರಿ ಅನುದಾನ ಪಡೆದು ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಮನೆ ಕಟ್ಟಿಕೊಳ್ಳಲು ಅನುಮತಿ ನೀಡಿದ ಪಿಡಿಒಗಳಿಗೆ ಶೇ.11ರ ಬಡ್ಡಿ ದರದಲ್ಲಿ ದಂಡ ಪಾವತಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಮುಂದಿನ ನೋಟೀಸ್‌ಗೂ ಮನ್ನಣೆ ನೀಡದಿದ್ದರೆ ಕೋರ್ಟ್‌ನಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ದಾವೆ ಹೂಡಲಾಗುವುದು.
    ನರಸಪ್ಪ, ತಾಪಂ ಇಒ, ಕಾರಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts