More

    ಒಂದು ವಾರ ನೋಂದಣಿ ಮಾಡಿಸಲ್ಲ

    ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಉತ್ತರ ಉಪ ನೋಂದಣಾಧಿಕಾರಿಗಳಾದ ಸೌಮ್ಯಲತಾ ಹಾಗೂ ಪ್ರತಿಭಾ ಬೀಡಿಕರ ಅವರನ್ನು ವರ್ಗಾವಣೆ ಮಾಡಲು ಆಗ್ರಹಿಸಿ ಪ್ರತಿಭಟನಾರ್ಥ ಒಂದು ವಾರ ಯಾವುದೇ ನೋಂದಣಿ ಮಾಡಿಸಲು ಹೋಗುವುದಿಲ್ಲ ಎಂದು ಕ್ರೆಡೈ ಹುಬ್ಬಳ್ಳಿ- ಧಾರವಾಡ ಅಧ್ಯಕ್ಷ ಸಾಜೀದ ಫರಾಶ ತಿಳಿಸಿದರು.
    ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟ್ಯಂತರ ರೂ. ಆದಾಯ ತಂದು ಕೊಡುವ ನೋಂದಣಿದಾರರೊಂದಿಗೆ ಈ ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಮನಸೋ ಇಚ್ಛೆ ಮಾತನಾಡುತ್ತಾರೆ. ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ತಮಗಿಷ್ಟ ಬಂದಂತೆ ಪ್ರತಿದಿನ ಒಂದೊಂದು ನಿಯಮ ಮಾಡುತ್ತಾರೆ. ಆಧಾರ್ ಕಾರ್ಡ್ ತಂದರೂ ಹಾಫ್ ಕಾರ್ಡ್ ಬೇಡ, ಫುಲ್ ಕಾರ್ಡ್ ಬೇಕು ಎಂದು ವಾಪಸ್ ಕಳಿಸುತ್ತಾರೆ. ಸಿಮ್ ಕಾರ್ಡ್​ಗೆ ನೋಂದಣಿಯಾದ ಮೊಬೈಲ್ ನಂಬರೇ ಬೇಕು ಎನ್ನುತ್ತಾರೆ. ಡೆವಲಪರ್​ಗಳು, ವಕೀಲರಿಗೆ ಇನ್ನಿಲ್ಲದ ಕಾನೂನು ಹೇಳಿ ಸತಾಯಿಸುತ್ತಾರೆ. ಇನ್ನು ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು. ಈ ಕಚೇರಿಯಲ್ಲಿ ಕೇವಲ ನಾಲ್ಕು ಕಂಪ್ಯೂಟರ್​ಗಳಿದ್ದು, ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ನಿತ್ಯ ನೂರಾರು ಜನ ಬಂದರೂ ಕೇವಲ 40ರಿಂದ 50 ನೋಂದಣಿ ಮಾತ್ರ ಆಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಖೋತಾ ಆಗುತ್ತಿದೆ. ಆದ್ದರಿಂದ, ಸರ್ಕಾರ ಹೆಚ್ಚುವರಿ ನಾಲ್ಕು ಕಂಪ್ಯೂಟರ್​ಗಳು ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
    ಈ ಕುರಿತು ಕಂದಾಯ ಸಚಿವ ಆರ್. ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾ ನೋಂದಣಾಧಿಕಾರಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಸಿಸಿಐ ಚೇರ್ಮನ್ ಮಹೇಂದ್ರ ಲದ್ದಡ, ಉಪಾಧ್ಯಕ್ಷ ಸಿದ್ದೇಶ್ವರ ಕಮ್ಮಾರ, ಕ್ರೆಡೈ ಖಜಾಂಚಿ ಬ್ರಿಯಾನ್ ಡಿಸೋಜಾ, ಇತರರು ಇದ್ದರು.
    12 ವರ್ಷದಿಂದ ಹುಬ್ಬಳ್ಳಿಯಲ್ಲೇ ಅಧಿಕಾರ!: ಉಪ ನೋಂದಣಾಧಿಕಾರಿ ಪ್ರತಿಭಾ ಬೀಡಿಕರ 12 ವರ್ಷಗಳಿಂದ ಹುಬ್ಬಳ್ಳಿಯಲ್ಲೇ ಕರ್ತವ್ಯದಲ್ಲಿದ್ದಾರೆ. ದಕ್ಷಿಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 4 ವರ್ಷ ಸೇವೆಯಲ್ಲಿದ್ದರು. ಬಳಿಕ 8 ವರ್ಷಗಳಿಂದ ವಿದ್ಯಾನಗರದ ಉತ್ತರ ನೋಂದಣಾಧಿಕಾರಿಯಾಗಿ ಇದ್ದಾರೆ. ವರ್ಗಾವಣೆಯಾದರೂ ತಡೆಯಾಜ್ಞೆ ತಂದು ಮತ್ತೆ ಇಲ್ಲಿಗೇ ವಾಪಸಾಗಿದ್ದಾರೆ ಎಂದು ಸಾಜೀದ ಫರಾಶ ತಿಳಿಸಿದರು.
    ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಿ: ವಿದ್ಯಾನಗರ ನೇಕಾರ ಭವನದಲ್ಲಿರುವ ಉತ್ತರ ಉಪ ನೋಂದಣಾಧಿಕಾರಿ ಕಚೇರಿಯಿಂದ ಅನನುಕೂಲವಾಗಿದೆ. ಸೂಕ್ತ ರ್ಪಾಂಗ್ ವ್ಯವಸ್ಥೆ ಇಲ್ಲ. ಸಮೀಪದಲ್ಲಿ ಉತ್ತಮ ಹೋಟೆಲ್, ಕಂಪ್ಯೂಟರ್ ಸೆಂಟರ್ ಇಲ್ಲ. ಕಚೇರಿಯಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಸೂಕ್ತ ಮೂಲ ಸೌಕರ್ಯವಿಲ್ಲ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಹಾಗಾಗಿ, ಜಿಲ್ಲಾಡಳಿತ ಈ ಕಚೇರಿಯನ್ನು ಸದ್ಯ ಖಾಲಿ ಇರುವ ಮಿನಿ ವಿಧಾನಸೌಧದ ಮೂರನೇ ಮಹಡಿಗೆ ಸ್ಥಳಾಂತರಿಸಬೇಕು. ಮಿನಿ ವಿಧಾನಸೌಧದ ಅಕ್ಕಪಕ್ಕದಲ್ಲೇ ಬ್ಯಾಂಕ್​ಗಳು ಇರುವ ಕಾರಣ ಎಲ್ಲರಿಗೂ ಅನುಕೂಲವಾಗುತ್ತದೆ. ಒಂದೇ ಸೂರಿನಲ್ಲಿ ಎಲ್ಲ ಸೌಲಭ್ಯ ಸಿಕ್ಕಂತಾಗುತ್ತದೆ ಎಂದು ಸಾಜೀದ ಫರಾಶ ಒತ್ತಾಯಿಸಿದರು.

    ಇನ್ನೂ ಎರಡು ಕಚೇರಿಗಳಾಗಲಿ: ಹುಬ್ಬಳ್ಳಿ ವೇಗವಾಗಿ ಬೆಳೆಯುತ್ತಿದ್ದು ಎರಡು ಕಚೇರಿಗಳು ಸಾಲುತ್ತಿಲ್ಲ. ಇನ್ನೂ ಹೆಚ್ಚುವರಿಯಾಗಿ ಪೂರ್ವ ಮತ್ತು ಪಶ್ಚಿಮ ಎರಡು ಉಪ ನೋಂದಣಾಧಿಕಾರಿ ಕಚೇರಿಗಳನ್ನು ಸರ್ಕಾರ ಮಂಜೂರು ಮಾಡಬೇಕು ಎಂದು ವಿನಂತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts