More

    ಜನತೆಗೆ ಆರೋಗ್ಯ ಸೇವೆ ಮರೀಚಿಕೆ

    ನರಗುಂದ: ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ನೀಡಲು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆರಂಭವಾದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಆದರೀಗ ಬಹುತೇಕ ಕೇಂದ್ರಗಳ ಬಾಗಿಲು ತೆರೆಯದ ಕಾರಣ ಆರೋಗ್ಯ ಸೇವೆ ಮರೀಚಿಕೆಯಾಗಿದೆ.

    ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ ಅನುದಾನದಡಿ ತಾಲೂಕಿನ ಶಿರೋಳ ಸರ್ಕಲ್​ನಲ್ಲಿ 9, ಚಿಕ್ಕನರಗುಂದ ಸರ್ಕಲ್​ನಲ್ಲಿ 4, ಜಗಾಪೂರ ಸರ್ಕಲ್​ನಲ್ಲಿ 10 ಸೇರಿ ಒಟ್ಟು 23 ಕಿರಿಯ ಮಹಿಳಾ ಆರೋಗ್ಯ ಉಪ ಕೇಂದ್ರಗಳನ್ನು ಸರ್ಕಾರದಿಂದ ನಿರ್ವಿುಸಬೇಕಾಗಿತ್ತು. ಅವುಗಳಲ್ಲಿ ಚಿಕ್ಕನರಗುಂದ-ಬಿ, ಹಿರೇಕೊಪ್ಪ, ಕೊಣ್ಣೂರ-ಎ, ಶಿರೋಳ-ಬಿ, ಹದಲಿ, ಕೊಣ್ಣೂರ-ಎ, ಜಗಾಪೂರ-ಬಿ, ನರಗುಂದ-ಎ, ನರಗುಂದ ಅರ್ಭಣ, ಗ್ರಾಮಗಳಲ್ಲಿ ನಿವೇಶನಗಳಿಲ್ಲದ ಕಾರಣ ಅಲ್ಲಿ ಕೇಂದ್ರದ ಕಟ್ಟಡ ನಿರ್ವಣವಾಗಿಲ್ಲ.

    ವಾಸನ, ಬನಹಟ್ಟಿ, ಸುರಕೋಡ, ಹದಲಿ-ಎ, ಹದಲಿ-ಬಿ, ಭೈರನಹಟ್ಟಿ, ಹಿರೇಕೊಪ್ಪ ಗ್ರಾಮಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ವಿುಸಿರುವ ಕಟ್ಟಡಗಳೆಲ್ಲವೂ ಇದೀಗ ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಇದರಿಂದ ಈ ಎಲ್ಲ ಕಟ್ಟಡಗಳಲ್ಲಿ ಆರೋಗ್ಯ ಸೇವೆ ನೀಡುವುದು ಸ್ಥಗಿತಗೊಂಡಿದೆ.

    ಹುಣಸೀಕಟ್ಟಿ ಗ್ರಾಮಸ್ಥರಿಗೆ ಪ್ರಾರಂಭದಲ್ಲಿ ಐದಾರು ವರ್ಷಗಳ ಕಾಲ ಸಮರ್ಪಕ ಆರೋಗ್ಯ ಸೇವೆ ದೊರೆಯುತ್ತಿತ್ತು. ಇಲ್ಲಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಎಸ್. ಗುಡಿಸಲಮನಿ ಬೇರೆಡೆಗೆ ವರ್ಗಾವಣೆಗೊಂಡು ಹೋದ ನಂತರ ಈ ಭಾಗದ ಜನರಿಗೂ ಆರೋಗ್ಯ ಸೇವೆ ದೊರೆಯದಾಗಿದೆ.

    ಸ್ಥಳೀಯ ಗ್ರಾಪಂ ಸದಸ್ಯರ ಜತೆ ಆರೋಗ್ಯ ಮತ್ತು ಶಿಕ್ಷಣದ ಕುರಿತು ಚರ್ಚೆ, ಚುಚ್ಚುಮದ್ದು ಕಾರ್ಯಕ್ರಮ ಬಲವರ್ಧನೆ, ಗರ್ಭಿಣಿ, ಬಾಣಂತಿಯರಲ್ಲಿ ಉಂಟಾಗುವ ರಕ್ತಹೀನತೆ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಆರೋಗ್ಯ ಸಹಾಯಕಿಯರ ಪ್ರಮುಖ ಕರ್ತವ್ಯವಾಗಿದೆ. ಆದರೆ, ಸಂಕಧಾಳ, ಖಾನಾಪೂರ, ರಡ್ಡೇರನಾಗನೂರ, ಕಣಕೀಕೊಪ್ಪ ಸೇರಿದಂತೆ ವಿವಿಧೆಡೆ ಸಮರ್ಪಕ ಕಟ್ಟಡಗಳಿದ್ದರೂ ಅಲ್ಲಿನ ಸಿಬ್ಬಂದಿ ಮಾತ್ರ ನರಗುಂದ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದವರಿಗೆ ಸಮಯಕ್ಕೆ ಸರಿಯಾಗಿ ಆರೋಗ್ಯ ಸೇವೆ ದೊರಕುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಪಾಳು ಬಿದ್ದಿರುವ ಉಪ ಆರೋಗ್ಯ ಕೇಂದ್ರಗಳಿಗೆ ಕಾಯಂ ಆರೋಗ್ಯ ಸಹಾಯಕಿಯರನ್ನು ನೇಮಿಸಬೇಕು ಎಂಬುದು ಸ್ಥಳೀಯರ ಆಗ್ರಹ.

    ಜ್ವರ ಸೇರಿ ಸಣ್ಣಪುಟ್ಟ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಹತ್ತಾರು ಕಿಲೋಮೀಟರ್ ದೂರದಲ್ಲಿರುವ ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಕೂಡಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಆರೋಗ್ಯ ಸಹಾಯಕಿಯರನ್ನು ನೇಮಿಸಿ ಚಿಕಿತ್ಸೆಗೆ ಅಗತ್ಯ ನೆರವು ಕಲ್ಪಿಸಿ, ಕಟ್ಟಡ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷಿಸಿದರೆ ಹೋರಾಟ ಮಾಡಲಾಗುವುದು.
    | ಶರಣು ಕರಬಸಣ್ಣವರ ವಾಸನ ಗ್ರಾಮಸ್ಥ, ರವಿ ಒಡೆಯರ್ ಹುಣಸೀಕಟ್ಟಿ ಗ್ರಾಮಸ್ಥ

    ಪ್ರಾಥಮಿಕ ಉಪ ಆರೋಗ್ಯ ಕೇಂದ್ರಗಳ ಹೆಸರನ್ನು ಸರ್ಕಾರ ಒಂದು ವರ್ಷದ ಹಿಂದೆ ಬದಲಾವಣೆ ಮಾಡಿದ್ದು, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳೆಂದು ಕರೆಯಲಾಗುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ದುರಸ್ತಿಗೊಳಿಸುವಂತೆ ಹಾಗೂ ಕಟ್ಟಡಗಳೇ ಇಲ್ಲದ ಕೆಲವೊಂದು ಗ್ರಾಮಗಳಲ್ಲಿ ಹೊಸದಾಗಿ ನಿರ್ವಿುಸಿಕೊಡುವಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಡಿಎಚ್​ಒ ಅವರಿಗೆ ವರದಿ ಸಲ್ಲಿಸುತ್ತ ಬರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕಿರಿಯ ಆರೋಗ್ಯ ಸಹಾಯಕಿಯರು ತಮ್ಮ ಕೇಂದ್ರ ಸ್ಥಳದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸುವುದು ಅಗತ್ಯವಿದೆ. ಈ ಕುರಿತು ಸಂಬಂಧಪಟ್ಟ ತಾಲೂಕಿನ ಎಲ್ಲ ಆರೋಗ್ಯ ಸಹಾಯಕಿಯರನ್ನು ವಿಚಾರಿಸಿ, ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡಲು ಸೂಚಿಸುತ್ತೇನೆ.
    | ಆರ್.ಸಿ. ಕೊರವಣ್ಣವರ ತಾಲೂಕು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts