More

    ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ಗೆ ಎದುರಾಗಿದೆಯೇ ಸಂಕಟ? ಹುಟ್ಟುಹಬ್ಬಕ್ಕೆ ದೇಶಕ್ಕೆ ರಜೆ ಕೊಟ್ಟು ಕಿಮ್‌ ಹೋದದ್ದೆಲ್ಲಿ?

    ವಾಷಿಂಗ್ಟನ್: ಚಿತ್ರ-ವಿಚಿತ್ರ ಕಾನೂನು, ನಡವಳಿಕೆ ಹಾಗೂ ಕ್ಷಿಪಣಿ ಪ್ರಯೋಗಗಳಿಂದ ಭೀತಿ ಹುಟ್ಟಿಸುವಲ್ಲಿ ಪ್ರಸಿದ್ಧಿ ಪಡೆದಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.

    ಇದೇ 15ರಂದು ಅವರ ಜನ್ಮದಿನವಿತ್ತು. ಈ ಹಿನ್ನೆಲೆಯಲ್ಲಿ ಅಂದು ಇಡೀ ದೇಶಕ್ಕೆ ರಜೆ ಘೋಷಿಸಲಾಗಿತ್ತು. ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸುವ ಸಿದ್ಧತೆ ನಡೆಸಿದ್ದರೂ ಕಿಮ್‌ ಪಾಲ್ಗೊಂಡಿರಲಿಲ್ಲ. ನಾಲ್ಕು ದಿನಗಳ ಹಿಂದಷ್ಟೇ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಅವರು, ಹುಟ್ಟುಹಬ್ಬದ ದಿನ ಗೈರಾಗಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯ ಶರವೇಗದಲ್ಲಿ ಎಲ್ಲೆಡೆ ಹರಡಿ ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು,

    ನಂತರ ಅವರು ಏಪ್ರಿಲ್ 12ರಂದೇ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಸುದ್ದಿಯಾಗಿತ್ತು. ಈ ಚಿಕಿತ್ಸೆಯ ಬಳಿಕ ಕಿಮ್‌ ಜಾಂಗ್‌ ಉನ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

    ಈ ಕುರಿತು ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಅಲ್ಲಿಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಎಂದು ಹೇಳಲಾಗುತ್ತಿದ್ದರೂ ಕಿಮ್‌ಗೆ ಇರುವ ಸಮಸ್ಯೆಗಳ ಬಗ್ಗೆ ಅನೇಕ ರೀತಿಯಲ್ಲಿ ಸುದ್ದಿಗಳು ಹುಟ್ಟಿಕೊಂಡಿವೆ.

    2014ರಲ್ಲಿಯೇ ತಿಂಗಳುಗಟ್ಟಲೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಕಿಮ್‌ ಆರೋಗ್ಯದ ಬಗ್ಗೆಯೂ ಹಲವಾರು ಸುದ್ದಿಗಳು ಹುಟ್ಟಿಕೊಂಡಿದ್ದವು. ಆದರೆ ತಮಗೆ ಏನೂ ಆಗಿಲ್ಲ ಎನ್ನುವಂತೆ ಒಮ್ಮೆಲೇ ಅವರು ಪ್ರತ್ಯಕ್ಷರಾಗಿದ್ದರು. ಈಗಲೂ ಹಾಗಾಗುವ ಸಾಧ್ಯತೆಗಳೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.

    ವಿಶ್ವಾದ್ಯಂತ ಎಲ್ಲೆಡೆ ಕರೊನಾ ಭೀತಿಯಿಂದ ಜನರು ತತ್ತರಿಸಿರುವ ಸಂದರ್ಭದಲ್ಲಿ ಅತ್ತ ಸಾಲು ಸಾಲು ಕ್ಷಿಪಣಿ ಪ್ರಯೋಗ ನಡೆಸಿ ಭಾರಿ ಸುದ್ದಿ ಮಾಡಿದ್ದರು ಕಿಮ್‌ . (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts