More

    ಕಾಮಸಮುದ್ರದಲ್ಲಿ ಬಳಕೆಗೆ ಬಾರದೆ ತುಕ್ಕು ಹಿಡಿಯುತ್ತಿದೆ ನೀರಿನ ಘಟಕ: ಮನವಿ ಸಲ್ಲಿಸಿದರೂ ಇಲ್ಲ ಪ್ರಯೋಜನ

    | ಜಿ.ನಾಗರಾಜ್​ ಬೂದಿಕೋಟೆ

    ಲಕ್ಷಾಂತರ ರೂ. ವೆಚ್ಚ ಮಾಡಿ ಬಂಗಾರಪೇಟೆ ತಾಲೂಕಿನ ಕಾಮಸಮುದ್ರದಲ್ಲಿ ನಿರ್ಮಿಸಿರುವ ನೀರಿನ ಘಟಕ ಕೆಟ್ಟು ಒಂದು ವರ್ಷ ಕಳೆದಿದ್ದು, ಅಧಿಕಾರಿಗಳ ಬೇಜಬ್ದಾರಿತನದಿಂದ ಗ್ರಾಮಸ್ಥರು ನೀರಿಗಾಗಿ ಅಲೆದಾಡುವುದರ ಜತೆಗೆ ಹೆಚ್ಚು ಹಣ ಕೊಟ್ಟು ಖರೀದಿಸುವ ಅನಿವಾರ್ಯ ಎದುರಾಗಿದೆ.

    ಕಾಮಸಮುದ್ರದಲ್ಲಿ ಸಾವಿರಾರು ಮಂದಿ ವಾಸವಿದ್ದರೂ ಕೇವಲ ಒಂದು ಘಟಕ ತೆರೆಯಲಾಗಿದೆ. ಹೀಗೆ ತೆರೆಯಲಾಗಿರುವ ಘಟಕ ಸಹ ರಿಪೇರಿಯಾಗದೇ ಉಳಿದಿದ್ದು, ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಘಟಕ ಸ್ಥಗಿತಗೊಂಡಿದೆ. ಘಟಕ ದುರಸ್ತಿ ಮಾಡಿಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶುದ್ಧ ನೀರಿಗಾಗಿ ವಟ್ಟಿಗಲ್​, ಲಕ್ಕೇನಹಳ್ಳಿ, ಗೊಲ್ಲಹಳ್ಳಿ ಸೇರಿ ಇತರ ಗ್ರಾಮಗಳಿಗೆ ಹೋಗಿ ತರಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಲವು ಮಂದಿ ಅಶುದ್ಧ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಘಟಕ ದುರಸ್ತಿ ಮಾಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಖಾಸಗಿಯವರಿಂದ ಮನೆಗೆ ಪೂರೈಕೆ: ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಬರದೆ ಮೂಲೆ ಗುಂಪಾಗಿರುವ ಕಾರಣ ಗ್ರಾಮದಲ್ಲಿ ಖಾಸಗಿಯವರು ಎರಡು ಘಟಕಗಳನ್ನು ತೆರೆದಿದ್ದಾರೆ. ಖಾಸಗಿಯವರು ಪ್ರತಿ ಮನೆಗೂ ಟ್ಯಾಂಕರ್​ ಮೂಲಕ ಶುದ್ಧ ನೀರು ಸರಬರಾಜು ಮಾಡುತ್ತಾ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ಸರ್ಕಾರದಿಂದ ಅಳವಡಿಸಿರುವ ಘಟಕದಲ್ಲಿ 5 ರೂ.ಗೆ 20 ಲೀಟರ್​ ನೀರು ಬರುತ್ತಿದ್ದರೆ, ಖಾಸಗಿಯವರು ಮನೆಮನೆಗೂ 20 ಲೀಟರ್​ ನೀರು ಸರಬರಾಜು ಮಾಡಿ ಪ್ರತಿ ಕ್ಯಾನ್​ ನೀರಿಗೆ 10 ರೂ. ಪಡೆಯುತ್ತಿದ್ದಾರೆ.

    ಕಾಮಸಮುದ್ರದಲ್ಲಿ ಬಳಕೆಗೆ ಬಾರದೆ ತುಕ್ಕು ಹಿಡಿಯುತ್ತಿದೆ ನೀರಿನ ಘಟಕ: ಮನವಿ ಸಲ್ಲಿಸಿದರೂ ಇಲ್ಲ ಪ್ರಯೋಜನ
    ನೀರಿನ ಘಟಕದಲ್ಲಿ ಪಾಚಿ ಕಟ್ಟಿ ಗಬ್ಬುನಾರುತ್ತಿದೆ.

    ಘಟಕ ರಿಪೇರಿಯಾಗಿದ್ದು, ಖಾಸಗಿಯವರು ನೀರಿನ ವ್ಯಾಪಾರ ಆರಂಭಿಸಿದ್ದಾರೆ. ಜನ ದುಪ್ಪಟ್ಟು ಹಣ ನೀಡಿ ನೀರು ಖರೀದಿಸುವ ಅನಿವಾರ್ಯ ಎದುರಾಗಿದೆ. ಘಟಕ ದುರಸ್ತಿ ಮಾಡಿಸಿಕೊಡುವಂತೆ ಹಲವು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸರಿಪಡಿಸಲು ಯಾರೂ ಮುಂದಾಗಲಿಲ್ಲ.
    |ಸುರೇಶ್​, ಗ್ರಾಮಸ್ಥ ಕಾಮಸಮುದ್ರ

    ನೀರಿನ ಘಟಕ ಕೆಟ್ಟಿದ್ದ ಕಾರಣ ವಟ್ಟಿಗಲ್​ ಅಥವಾ ಗೊಲ್ಲಹಳ್ಳಿಯಿಂದ ನೀರು ತರುತ್ತಿದ್ದೇವೆ. ಘಟಕ ಸರಿಪಡಿಸಲು ಮುಂದಾಗದೇ ಇರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ನೀರಿಗಾಗಿ ಗ್ರಾಮಗಳಿಗೆ ಅಲೆದಾಡುತ್ತಿರುವ ಸಮಯದಲ್ಲಿ 5 ರೂಪಾಯಿ ಹೆಚ್ಚಾದರೂ ಖಾಸಗಿಯವರು ಮನೆ ಮುಂದೆ ಕುಡಿಯುವ ನೀರು ಪೂರೈಸುತ್ತಾರೆ ಇದರಿಂದ ಸಮಯ ಉಳಿಯುತ್ತಿದೆ.
    | ಹರೀಶ್​, ಗ್ರಾಮಸ್ಥ ಕಾಮಸಮುದ್ರ

    ಕೋಲಾರ ಮೂಲದ ಖಾಸಗಿ ಕಂಪನಿಯವರು ಘಟಕವನ್ನು ಗುತ್ತಿಗೆ ಪಡೆದಿದ್ದಾರೆ. ಗುತ್ತಿಗೆದಾರರು ಸರಿಪಡಿಸಲು ಮುಂದಾಗದ ಕಾರಣ ಗ್ರಾಮದಲ್ಲಿ ಸಮಸ್ಯೆ ಉಂಟಾಗಿದೆ. ಆದಷ್ಟು ಬೇಗ ಗುತ್ತಿಗೆದಾರರ ಜತೆಗೆ ಚರ್ಚಿಸಿ ಘಟಕ ಸರಿಪಡಿಸಲಾಗುತ್ತದೆ.
    | ಶೇಷಾದ್ರಿ ಎಇಇ ಬಂಗಾರಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts