More

    ಮಂಗಳೂರಲ್ಲಿ ದೀಪಾವಳಿ ಬಳಿಕವೂ ವಾಯು ಗುಣಮಟ್ಟ ನಿರಾತಂಕ

    ಭರತ್ ಶೆಟ್ಟಿಗಾರ್, ಮಂಗಳೂರು

    ದೇಶದ ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರಿನ ವಾಯು ಗುಣಮಟ್ಟ ಉತ್ತಮವಾಗಿದ್ದು, ಸದ್ಯ ಯಥಾಸ್ಥಿತಿ ಕಾಯ್ದುಕೊಂಡಿದೆ. ದೀಪಾವಳಿ ಅವಧಿಯಲ್ಲೂ ಅಷ್ಟೇನೂ ಮಾಲಿನ್ಯ ಕಂಡು ಬಂದಿಲ್ಲ ಎನ್ನುತ್ತದೆ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ ಅಂಶ.

    ತಿಂಗಳ ಹಿಂದೆ ನಗರದ ಹೊರವಲಯದ ಕೆಲವು ಭಾಗಗಳಲ್ಲಿ ಧೂಳು ಮಿಶ್ರಿತ ವಾತಾವರಣ ಕಂಡು ಬಂದಿತ್ತು. ಸುಮಾರು ಒಂದು ವಾರದವರೆಗೆ ಹಾಗೇ ಇತ್ತು. ಬಳಿಕ ಮಳೆ ಸುರಿದು ಸದ್ಯ ವಾತಾವರಣ ಶುಭ್ರವಾಗಿದೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ ಧೂಳುಮಯ ವಾತಾವರಣವಿತ್ತು ಎನ್ನುವುದನ್ನು ಇಲ್ಲಿ ನೆನಪಿಸಬಹುದಾಗಿದೆ. ನಗರ ವ್ಯಾಪ್ತಿಯಲ್ಲಿ ಹಸಿರು ಪರಿಸರ ಇರುವುದರಿಂದ ಆತಂಕ ಪಡಬೇಕಾಗಿಲ್ಲ. ಅವಕಾಶ ಇರುವಲ್ಲಿ ಇನ್ನಷ್ಟು ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ವಾತಾವರಣವನ್ನೂ ಶುಭ್ರವಾಗಿಟ್ಟುಕೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.

    ಸದ್ಯದ ಮಾಪನ ಹೇಗಿದೆ: ಮಂಗಳೂರು ನಗರದಲ್ಲಿ ವಾಯುಗುಣಮಟ್ಟಕ್ಕೆ ಸಂಬಂಧಿಸಿ ಲಭ್ಯವಾಗಿರುವ ಮಾಹಿತಿ ಪ್ರಕಾರ ವಾತಾವರಣದಲ್ಲಿ ಧೂಳಿನ ಕಣಗಳ ಪರ್ಟಿಕ್ಯುಲರ್ ಮ್ಯಾಟರ್(ಪಿಎಂ)-2.5 ದಿನದಲ್ಲಿ ಸರಾಸರಿ 30 ಮೈಕ್ರೋಗ್ರಾಮ್/ಕ್ಯುಬಿಕ್ ಮೀಟರ್ ದಾಖಲಾಗುತ್ತಿದೆ. ಪಿಎಂ-10 ಮಾಹಿತಿ ಲಭ್ಯವಾಗಿಲ್ಲ. ಸಲ್ಫರ್(ಎಸ್‌ಒ2) ಅಂಶ ದಿನಕ್ಕೆ 10 ಮೈಕ್ರೋಗ್ರಾಮ್/ ಕ್ಯುಬಿಕ್ ಮೀಟರ್, ಕಾರ್ಬನ್ ಮೋನಾಕ್ಸೈಡ್(ಸಿಒ) 1 ಮೈಕ್ರೋಗ್ರಾಮ್/ ಕ್ಯುಬಿಕ್ ಮೀಟರ್, ಅಮೋನಿಯಾ 54 ಮೈಕ್ರೋಗ್ರಾಮ್/ ಕ್ಯುಬಿಕ್ ಮೀಟರ್ ಇದೆ. ಓಜೋನ್(ಒ3) ಹಗಲು 20ರಷ್ಟಿದ್ದರೆ, ರಾತ್ರಿ ಸ್ವಲ್ಪ ಹೆಚ್ಚಿರುತ್ತದೆ. ಮಂಗಳೂರಿನ ಮಟ್ಟಿಗೆ ಇದು ಆತಂಕ ಪಡಬೇಕಾದ ಅಂಕಿ ಅಂಶ ಅಲ್ಲ. ಆದರೆ ಕೈಗಾರಿಕಾ ಪ್ರದೇಶವಾಗಿರುವ ಬೈಕಂಪಾಡಿ, ಸುರತ್ಕಲ್ ಭಾಗದಲ್ಲಿ ಈ ಪ್ರಮಾಣ ತುಸು ಹೆಚ್ಚಿದೆ. ಆಯಾ ಕೈಗಾರಿಕೆಗಳು ಮಾಪನ ಯಂತ್ರಗಳನ್ನು ಅಳವಡಿಸಿ, ಗುಣಮಟ್ಟವನ್ನು ಪರಿಶೀಲಿಸುವ ಕೆಲಸ ಮಾಡುತ್ತಿದೆ.

    ಸ್ಮಾರ್ಟ್ ಸಿಟಿಯಿಂದ ಮಾಪನಯಂತ್ರ: ನಗರದ ವಿವಿಧೆಡೆ ವಾಯುಗುಣ ಮಟ್ಟದ ನಿಖರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯಿಂದ ನಗರದ 5 ಕಡೆಗಳಲ್ಲಿ ಮಾಪನಯಂತ್ರ ಅಳವಡಿಸಲಾಗಿದೆ. ಲಾಲ್‌ಭಾಗ್‌ನ ಪಾಲಿಕೆ ಕಟ್ಟಡ, ಹಂಪನಕಟ್ಟೆಯ ಪುರಭವನ, ಅಂಬೇಡ್ಕರ್ ವೃತ್ತದ ಬಳಿ, ಬೋಳಾರ ಬಿಇಒ ಕಚೇರಿ, ಬಂದರ್‌ನ ಕ್ರೆಸೆಂಟ್ ಶಾಲೆ ಬಳಿ ಮಾಪನ ಯಂತ್ರಗಳಿವೆ. ಸಾರ್ವಜನಿಕರೂ ಇದರ ಮಾಹಿತಿಯನ್ನು ನೇರವಾಗಿ ಪಡೆಯಲು ಒನ್ ಟಚ್ ಮಂಗಳೂರು ಆ್ಯಪ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಇಲ್ಲಿಂದ ಪಡೆಯಲಾಗುವ ಅಂಕಿ ಅಂಶಗಳು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಲಭ್ಯವಾಗುತ್ತದೆ.

    ಮಂಗಳೂರಲ್ಲಿ ವಾಯುಗುಟ್ಟದಲ್ಲಿ ಭಯಪಡುವಂತಹ ಯಾವುದೇ ಬದಲಾವಣೆ ಸದ್ಯ ಉಂಟಾಗಿಲ್ಲ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಐದು ಪ್ರದೇಶದಲ್ಲಿ ವಾಯುಗುಣಮಟ್ಟ ಮಾಪನ ಯಂತ್ರಗಳನ್ನು ಅಳವಡಿಸಲಾಗಿದ್ದು ಕ್ಷಣ ಕ್ಷಣದ ಮಾಹಿತಿ ದೊರೆಯುತ್ತದೆ. ವಾಹನಗಳ ನಿರಂತರ ಸಂಚಾರದಿಂದ ಕೆಲವು ಸಂದರ್ಭದಲ್ಲಿ ಮಟ್ಟ ಹೆಚ್ಚಾಗಿರುತ್ತದೆ, ಆದರೆ ಸ್ವಲ್ಪ ಹೊತ್ತಿನಲ್ಲಿ ತಿಳಿಯಾಗುತ್ತದೆ.

    ಅರುಣ್ ಪ್ರಭಾ ಕೆ.ಎಸ್.
    ಜನರಲ್ ಮ್ಯಾನೇಜರ್, ಸ್ಮಾರ್ಟ್ ಸಿಟಿ ಲಿ.

    ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸರ್ಕೀಟ್‌ಹೌಸ್ ಬಳಿ ಮಾಪನಯಂತ್ರ ಅಳವಡಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಸದ್ಯ ವಾಯುಗುಣಮಟ್ಟ ಉತ್ತಮವಾಗಿದ್ದು, ಮಾಪನ ಪ್ರಮಾಣಕ್ಕಿಂತ ಕಡಿಮೆಯೇ ಇದೆ. ಅಭಿವೃದ್ಧಿ ಜತೆಗೆ ಹಸಿರು ಪರಿಸರದ ಬೆಳೆಸುವಲ್ಲಿಯೂ ಪ್ರಾಮುಖ್ಯತೆ ನೀಡುತ್ತಿರುವುದುರಿಂದ ಆತಂಕ ಪಡಬೇಕಾದ ಅವಶ್ಯತೆಯಿಲ್ಲ.

    ಕೀರ್ತಿ ಕುಮಾರ್
    ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts