More

    ನೀರು ಕುಡಿಯಲು ಮಾತ್ರ, ಬೆಳೆಗಿಲ್ಲ


    ಕೆಆರ್‌ಎಸ್: ಈ ವರ್ಷ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮುಂದಿನ ಬೇಸಿಗೆ ಬೆಳೆಗೆ ನೀರು ಸಿಗುವುದಿಲ್ಲ ಎನ್ನುವ ಸ್ಪಷ್ಟತೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಿಕ್ಕಿದೆ. ಜತೆಗೆ, ಮಳೆಯಾಗದಿದ್ದರೆ ಎರಡು ತಿಂಗಳು ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಮುನ್ಸೂಚನೆ ವ್ಯಕ್ತವಾಗಿದೆ.

    ಕೆಆರ್‌ಎಸ್‌ನ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಹಲವು ಹೊತ್ತು ಚರ್ಚಿಸಲಾಯಿತು. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದಾಗಿ ರೈತರು ಬೇಸಿಗೆ ಬೆಳೆ ಹಾಕಬಾರದೆಂದು ಮನವಿ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

    ಸಭೆ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ವರುಣನ ಅವಕೃಪೆಯಿಂದ ಈ ಬಾರಿ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಅಣೆಕಟ್ಟೆಗಳು ಭರ್ತಿಯಾಗಿಲ್ಲ. ಆದರೂ ರೈತರ ಹಿತದೃಷ್ಟಿಯಿಂದ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ನವೆಂಬರ್ ಅಂತ್ಯದವರೆಗೂ ನೀರು ಹರಿಸಲಾಗಿದೆ. ನದಿ ಪಾತ್ರದ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆ ರಕ್ಷಣೆಗೆ ನಿಯಮಿತವಾಗಿ ಸಂಕಷ್ಟ ಸಮಯದಲ್ಲೂ ನೀರು ಹರಿಸಲಾಗಿದೆ. ಮುಂದಿನ ಮುಂಗಾರು ಮಳೆವರೆಗೂ ಜನ, ಜಾನುವಾರುಗಳಿಗೆ ಅಗತ್ಯ ಆಹಾರ ಮತ್ತು ಮೇವು ದಾಸ್ತಾನಿಗೆ ಮುಂದಾಗಿ ಸಹಕರಿಸಬೇಕೆಂದು ಮನವಿ ಮಾಡಿದರು.

    ಪ್ರಸ್ತುತ ಅಣೆಕಟ್ಟೆಯಲ್ಲಿ ಕುಡಿಯುವ ನೀರು ಮಾತ್ರ ಲಭ್ಯವಿದೆ. ತೀರ್ಮಾನ ಮಾಡಲು ಈ ಹಿಂದೆ ಇದ್ದಂತೆ ಪೂರ್ಣ ಅಧಿಕಾರ ಸಲಹಾ ಸಮಿತಿಗಿಲ್ಲ. ಸುಪ್ರೀಂಕೋರ್ಟ್ ಪ್ರಕಾರ ಎರಡು ಸಮಿತಿ ರಚನೆಯಾಗಿವೆ. ರೈತರ ಹಿತ ಕಾಪಾಡುವ ದೃಷ್ಟಿಯಿಂದ ಲೀಗಲ್ ಟೀಂ ಜತೆ ಮಾತನಾಡಿದ್ದೇವೆ. ಎಲ್ಲ ಭತ್ತದ ಬೆಳೆ ಕಟಾವಿಗೆ ಬಂದಿದೆ. ಸಂಪೂರ್ಣವಾಗಿ ಬೆಳೆ ಕೈಸೇರಿ ರೈತರಿಗೆ ಅನುಕೂಲವಾಗಿದೆ ಎಂದರು.

    ಸದ್ಯದ ಪರಿಸ್ಥಿತಿಯಲ್ಲಿ ಡ್ಯಾಂನಲ್ಲಿ 16 ಟಿಎಂಸಿ ನೀರು ಮಾತ್ರ ಇದೆ. ಈ ಪೈಕಿ ಬೇಸಿಗೆಯಲ್ಲಿ 2 ರಿಂದ 3 ಟಿಎಂಸಿ ಆವಿಯಾಗಿ ಹೋಗಿ 13 ಟಿಎಂಸಿ ಮಾತ್ರ ಉಳಿಯುತ್ತದೆ. ತಿಂಗಳಿಗೆ 2.1 ಟಿಎಂಸಿ ನೀರನ್ನು ಕುಡಿಯಲು ಹಾಗೂ ಬೆಳೆಗೆ ಅಂದಾಜು ಮಾಡಲಾಗಿದೆ. ಜೂನ್‌ವರೆಗೂ 16 ಟಿಎಂಸಿ ಕುಡಿಯಲು ನೀರು ಬೇಕಾಗುತ್ತದೆ. ಒಂದು ವೇಳೆ ಮೇ, ಜೂನ್‌ನಲ್ಲಿ ಮಳೆ ಬಾರದಿದ್ದರೆ ಎರಡು ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಬೇಸಿಗೆ ಬೆಳೆಯನ್ನು ಬೆಳೆಯಬಾರದೆಂದು ರೈತರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

    ಮುಂಗಾರಿನಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಕೊಟ್ಟಿದ್ದೇವೆ. ಈಗಾಗಲೇ ಬರ ಘೋಷಣೆಯಾಗಿದೆ. ಬರ ಪರಿಹಾರ ಕೊಡಲು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ಆದರೆ ಅನುದಾನ ಬರುವುದು ತಡವಾಗಿರುವುದರಿಂದ ಪ್ರತಿ ಎಕರೆಗೆ 2 ಸಾವಿರ ರೂ. ಕೊಡಲು ಸಿಎಂ ಘೋಷಣೆ ಮಾಡಿದ್ದಾರೆ. ಪರಿಹಾರದಲ್ಲಿ ರೈತರಿಗೆ ಅನ್ಯಾಯ ಆಗಲ್ಲ. ಪ್ರಾಧಿಕಾರಗಳಿಂದ ಕರ್ನಾಟಕಕ್ಕೆ ಹಿನ್ನಡೆ ಆಗುತ್ತಿದೆ ಎಂದ ಅವರು, ತಮಿಳುನಾಡಿಗೆ ಎರಡೂ ತಿಂಗಳಿಂದ ನೀರು ಬಿಟ್ಟಿಲ್ಲ. ಪ್ರಾಧಿಕಾರ ನೀಡಿರುವ ಸೂಚನೆಯಂತೆ ನದಿ ಪಾತ್ರದ ಪ್ರಾಣಿ, ಪಕ್ಷಿಗಳಿಗೆಂದು 1 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇದು ಹಿಂದಿನಿಂದಲೂ ಇರುವ ಆದೇಶ ಕೊಟ್ಟಿದ್ದಾರೆ ಅಷ್ಟೆ. ನಮಗೆ ಕುಡಿಯಲು ನೀರಿನ ಆತಂಕದ ಪರಿಸ್ಥಿತಿ ಇದೆ. ಆದ್ದರಿಂದ ತಮಿಳುನಾಡಿಗೆ ಬಿಡುವುದಕ್ಕೆ ಹೇಗೆ ಸಾಧ್ಯ? ಆದ್ದರಿಂದ ರೈತರು ಹೋರಾಟ ಕೈ ಬಿಡಲು ಮನವಿ ಮಾಡುತ್ತೇವೆ ಎಂದು ಹೇಳಿದರು.

    ಸಭೆಯಲ್ಲಿ ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಕದಲೂರು ಉದಯ್, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಕಾವೇರಿ ನೀರಾವರಿ ನಿಗಮದ ದಕ್ಷಿಣ ವಲಯ ಮುಖ್ಯ ಇಂಜಿನಿಯರ್ ವೆಂಕಟೇಶ್, ಮಂಡ್ಯ ವೃತ್ತದ ಅಧೀಕ್ಷಕ ಇಂಜಿನಿಯರ್ ರಘುರಾಮ, ವರುಣ ವೃತ್ತದ ಇಂಜಿನಿಯರ್ ಎಸ್.ಇ.ಶಿವಮಾದಯ್ಯ, ತಹಸೀಲ್ದಾರ್ ಪ್ರಶಾಂತ್, ಕಾರ್ಯಪಾಲಕ ಇಂಜಿನಿಯರ್ ಜಯಂತ್ ಇತರರಿದ್ದರು.


    ಸಭೆಗೆ ಮೈಸೂರು ಜನಪ್ರತಿನಿಧಿಗಳ ಗೈರು: ನೀರಾವರಿ ಸಲಹಾ ಸಮಿತಿ ಸಭೆಗೆ ಮೈಸೂರಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗೈರಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ನೀರು ಬಿಡುವುದಾಗಿದ್ದರೆ ಎಲ್ಲರೂ ಪಾಲ್ಗೊಳ್ಳುತ್ತಿದ್ದರು. ಆದ್ದರಿಂದ ಬಂದಿಲ್ಲ. ಮೈಸೂರಿಗೆ ಸಿಎಂ ಬಂದಿರುವುದರಿಂದ ಎಲ್ಲರೂ ಬ್ಯುಸಿಯಾಗಿದ್ದಾರೆಂದರು.

    ಇಂಜಿನಿಯರ್‌ಗೆ ಶಾಸಕ ತರಾಟೆ: ಮದ್ದೂರು ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆಯಲ್ಲಿ ಹರಿಯುವ ನೀರಿನ ಮಾಹಿತಿಯನ್ನು ಶಾಸಕ ಕದಲೂರು ಉದಯ್ ಕೇಳಿದರು. ಇದಕ್ಕೆ ಸಮರ್ಪಕ ಉತ್ತರ ನೀಡದ ಇಇ ಬಾಬು ಕೃಷ್ಣದೇವ ಅವರನ್ನು ತರಾಟೆಗೆ ತೆಗೆದುಕೊಂಡರು. ಮದ್ದೂರು ವಿಭಾಗಕ್ಕೆ ಬಂದು ಎಷ್ಟು ತಿಂಗಳಾಗಿದೆ, ಇಂಜಿನಿಯರ್ ಆದರೂ ನೀರು ಹರಿಯುವ ಜಾಗದ ಮಾಹಿತಿಯಿಲ್ಲ. ಇನ್ಯಾವ ಕೆಲಸ ಮಾಡುತ್ತೀರಾ? ನಾನು ಎಲ್ಲದರ ಮಾಹಿತಿ ಪಡೆದಿದ್ದೇನೆ. ಆದರೂ ತಪ್ಪು ಮಾಹಿತಿ ನೀಡಿದರಲ್ಲ ಎಂದು ತರಾಟೆಗೆ ತೆಗೆಕೊಂಡರು. ಮಧ್ಯ ಪ್ರವೇಶಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ಇಲ್ಲಿ ಪತ್ರಕರ್ತರಿದ್ದಾರೆ, ಆಮೇಲೆ ಮಾತಾಡಿ ಎಂದು ಸಮಾಧಾನಪಡಿಸಿದರು.

    ಫೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts