More

    ಮೊರ್ಬಿ ಸೇತುವೆ ಕುಸಿತ ಪ್ರಕರಣ: ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆ, 9 ಜನರ ಬಂಧನ

    ಅಹಮದಾಬಾದ್: ಗುಜರಾತ್​ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ವಿುಸಲಾಗಿದ್ದ ಶತಮಾನಗಳಷ್ಟು ಹಳೆಯ ತೂಗುಸೇತುವೆ ಭಾನುವಾರ ಕುಸಿದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೇರಿದೆ. ಮೃತರಲ್ಲಿ 47 ಮಕ್ಕಳು ಸೇರಿದ್ದಾರೆ. ಈವರೆಗೆ 185 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವು ಮಂದಿ ನೀರಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.

    ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಲು ನದಿಯ ನೀರಿನ ಪ್ರಮಾಣ ಕಡಿಮೆ ಮಾಡಲು ಚೆಕ್​ಡ್ಯಾಂ ತೆರೆಯಲಾಗಿದೆ. ಮುಂದಿನ 24 ಗಂಟೆಗಳವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ದುರಂತದಲ್ಲಿ ರಾಜ್​ಕೋಟ್​ನ ಬಿಜೆಪಿ ಸಂಸದ ಮೋಹನ್​ಬಾಯ್ ಕಲ್ಯಾಣ್ ಜಿ ಕುಂದರಿಯಾ ಅವರ 12 ಮಂದಿ ಸಂಬಂಧಿಕರು ಪ್ರಾಣ ಕಳೆದುಕೊಂಡಿದ್ದಾರೆ. ‘ಈ ದುರ್ಘಟನೆಯಲ್ಲಿ ಐವರು ಮಕ್ಕಳು, ನಾಲ್ವರು ಮಹಿಳೆಯರು ಸೇರಿ ನನ್ನ ಹಿರಿಯ ಸಹೋದರನ ಆಪ್ತ ಸಂಬಂಧಿಕರನ್ನು ಕಳೆದುಕೊಂಡಿದ್ದೇನೆ’ ಎಂದು ಕುಂದರಿಯಾ ಹೇಳಿದ್ದಾರೆ.

    ಕಂಪನಿ ಸಿಬ್ಬಂದಿ ಬಂಧನ: ದುರಂತಕ್ಕೆ ಕಾರಣವೆನ್ನಲಾದ ಸೇತುವೆಯನ್ನು ನವೀಕರಿಸಿದ್ದ ಒರೆವಾ ಕಂಪನಿಯ ಇಬ್ಬರು ಮ್ಯಾನೇಜರ್ ಮತ್ತು ಟಿಕೆಟ್ ಬುಕ್ಕಿಂಗ್ ಕ್ಲರ್ಕ್​ಗಳು ಸೇರಿ 9 ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇದೇ ವೇಳೆ ಒರೆವಾ ಕಂಪನಿಯು ನಿಗದಿತ ಅವಧಿಗಿಂತ ಮುಂಚೆಯೇ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದನ್ನು ದಾಖಲೆಗಳು ಬಹಿರಂಗಪಡಿಸಿವೆ. ಕಳೆದ ಮಾರ್ಚ್​ನಲ್ಲಿ ಒರೆವಾ ಕಂಪನಿಗೆ ಸೇತುವೆ ದುರಸ್ತಿ ಕಾಮಗಾರಿ ವಹಿಸಲಾಗಿತ್ತು. ಕಂಪನಿಯು ನಿರ್ವಹಣೆ ಮತ್ತು ದುರಸ್ತಿಗಾಗಿ ಸೇತುವೆಯನ್ನು 8ರಿಂದ 12 ತಿಂಗಳ ಕಾಲ ಮುಚ್ಚುವುದಾಗಿ ಹೇಳಿ, ಕೇವಲ 7 ತಿಂಗಳಲ್ಲಿ ಗುಜರಾತಿ ಹೊಸವರ್ಷದಂದು ಸಾರ್ವಜನಿಕರಿಗೆ ಮುಕ್ತಗೊಳಿಸಿತು. ಆದರೆ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ಕಂಪನಿಯು ಸುರಕ್ಷತಾ ಪ್ರಮಾಣ ಪತ್ರ ಪಡೆದುಕೊಂಡಿರಲಿಲ್ಲ ಎಂದು ಮೊರ್ಬಿ ನಗರಸಭೆಯ ಮುಖ್ಯಸ್ಥ ಸಂದೀಪ್ ಸಿಂಗ್ ಝುಲಾ ಆರೋಪಿಸಿದ್ದಾರೆ.

    1979ರಲ್ಲಿ ಅಣೆಕಟ್ಟೆ ಒಡೆದಿತ್ತು
    ಎಡೆಬಿಡದೆ ಸುರಿದ ಮಳೆಯಿಂದಾಗಿ 1978ರ ಆಗಸ್ಟ್ 11ರಂದು ಮಚ್ಚು ಅಣೆಕಟ್ಟು ಒಡೆದು, ಕೇವಲ 15 ನಿಮಿಷದಲ್ಲಿ ನೀರು ಇಡೀ ನಗರವನ್ನೇ ಆವರಿಸಿತ್ತು. ಈ ದುರಂತದಲ್ಲಿ ಕನಿಷ್ಠ 1,500 ಜನರು, 13 ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿದ್ದವು. ಈ ದುರಂತ ಸಂಭವಿಸಿದ ಕೆಲ ದಿನಗಳ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮೊರ್ಬಿಗೆ ಭೇಟಿ ನೀಡಿದ್ದಾಗ ಸತ್ತ ಮನುಷ್ಯ ಮತ್ತು ಪ್ರಾಣಿಗಳ ದುರ್ವಾಸನೆಯಿಂದಾಗಿ ಅವರು ಪ್ರವಾಸ ಮಾಡುವುದೇ ಕಷ್ಟಕರವಾಗಿತ್ತು.

    ಇಂದು ಪ್ರಧಾನಿ ಭೇಟಿ
    ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದುರಂತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಗುಜರಾತಿನ ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನಾನು ಏಕ್ತಾ ನಗರದಲ್ಲಿ ಇದ್ದೇನೆ. ಆದರೆ ಮನಸ್ಸು ಮೊರ್ಬಿ ಸಂತ್ರಸ್ತರ ಜತೆಗಿದೆ. ಒಂದೆಡೆ ನೋವಿನಿಂದ ಕೂಡಿದ ಹೃದಯವಿದ್ದರೆ ಮತ್ತೊಂದೆಡೆ ಕರ್ತವ್ಯದ ಹಾದಿ ಇದೆ ಎಂದು ಹೇಳಿದರು.

    ಉಡಾಫೆ ವರ್ತನೆ ದುರಂತಕ್ಕೆ ಕಾರಣ
    ತೂಗುಸೇತುವೆಗೆ ಭೇಟಿ ನೀಡಿದ್ದ ಯುವಕರ ಗುಂಪಿನ ಉಡಾಫೆ ವರ್ತನೆಯೇ ದುರಂತಕ್ಕೆ ಕಾರಣ ಎಂದು ಪ್ರವಾಸಿಗರೊಬ್ಬರು ದೂರು ನೀಡಿದ್ದಾರೆ. ಕುಟುಂಬದ ಜತೆ ತೂಗುಸೇತುವೆಗೆ ಭೇಟಿ ನೀಡಿದ್ದೆ. ಸೇತುವೆ ಮೇಲೆ ನಿಂತಿದ್ದ ಕೆಲ ಯುವಕರು ಜೋರಾಗಿ ಕುಣಿದಾಡುತ್ತ, ಅದನ್ನು ಅಲುಗಾಡಿಸುತ್ತಿದ್ದರು. ಭಯಗೊಂಡ ನಾವು ಸೇತುವೆ ಮೇಲೆ ತೆರಳದೆ ಅರ್ಧಕ್ಕೆ ಹಿಂದಿರುಗಿದೆವು. ನಾವು ಮರಳಿದ ಕೆಲ ಗಂಟೆಗಳ ಬಳಿಕ ನಮ್ಮ ಊಹೆ ನಿಜವಾಯಿತು. ಸಂಜೆ 6.30ರ ಹೊತ್ತಿಗೆ ಸೇತುವೆ ಕುಸಿದ ಸುದ್ದಿಬಂತು ಎಂದು ಸೇತುವೆ ನೋಡಲು ಹೋಗಿದ್ದ ಅಹಮದಾಬಾದ್ ನಿವಾಸಿ ವಿಜಯ್ ಗೋಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ತೂಗುಸೇತುವೆ ಭದ್ರತಾ ಸಿಬ್ಬಂದಿ ಮತ್ತು ಗುತ್ತಿಗೆದಾರರಿಗೆ ಹೇಳಿದರೂ ಪ್ರಯೋಜನವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

    10 ವರ್ಷ ಬಾಳಿಕೆ ಬರುತ್ತದೆ!
    ತೂಗು ಸೇತುವೆಯನ್ನು ಶೇ. 100ರಷ್ಟು ನವೀಕರಣ ಮಾಡಲಾಗಿದ್ದು, ಇನ್ನೂ 8-10 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ಒರೆವಾ ಕಂಪನಿ ಹೇಳಿತ್ತು. ಸೇತುವೆಯನ್ನು ಮಾರ್ಪಡಿಸಿದ ತಾಂತ್ರಿಕ ವಿಶೇಷಗಳೊಂದಿಗೆ ನವೀಕರಿಸಲಾಗಿದೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಒರೆವಾ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಬಾಯ್ ಪಟೇಲ್, ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಕೆಲ ದಿನಗಳ ಹಿಂದೆ ಹೇಳಿದ್ದರು. ಜನರು ಸೇತುವೆಗೆ ಹಾನಿಯಾಗದಂತೆ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೆ ಮುಂದಿನ 15 ವರ್ಷಗಳವರೆಗೆ ಈ ಸೇತುವೆಯನ್ನು ಉಳಿಸಿಕೊಳ್ಳಬಹುದಿತ್ತು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

    ಪುತಿನ್ ಸಂತಾಪ
    ದುರಂತದಲ್ಲಿ ಮೃತಪಟ್ಟವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಆತ್ಮೀಯ ರಾಷ್ಟ್ರಪತಿ ದ್ರೌಪದಿ ಮುಮು ಮತ್ತು ಪ್ರಿಯ ಪ್ರಧಾನಿಗಳೇ, ಗುಜರಾತ್ ರಾಜ್ಯದಲ್ಲಿನ ಸೇತುವೆ ದುರಂತದ ಬಗ್ಗೆ ನನ್ನ ಸಂತಾಪವನ್ನು ಸ್ವೀಕರಿಸಿ’ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ಸಂದೇಶವನ್ನು ಕ್ರೆಮ್ಲಿನ್ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಗಾಯಗೊಂಡವರೆಲ್ಲ ಶೀಘ್ರ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ.

    ಕ್ರಿಮಿನಲ್ ಕೇಸ್ ದಾಖಲು
    ದುರಂತ ಕುರಿತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ತನಿಖೆಗೆ ಐವರು ಸದಸ್ಯರ ಉನ್ನತ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಗುಜರಾತ್​ನ ಗೃಹ ಸಚಿವ ಹರ್ಷ ಸಂಘವಿ ತಿಳಿಸಿದ್ದಾರೆ.

    ಪ್ರವೇಶ ಶುಲ್ಕ
    ಮೊರ್ಬಿ ಪುರಸಭೆ ಅಧಿಕಾರಿಗಳು ಮತ್ತು ಒರೆವಾ ಗುಂಪಿನ ಭಾಗವಾಗಿರುವ ಅಜಂತಾ ಪ್ರೖೆವೇಟ್ ಲಿಮಿಟೆಡ್ ನಡುವೆ 2022ರ ಮಾರ್ಚ್​ನಲ್ಲಿ 15 ವರ್ಷದ ಒಪ್ಪಂದ ಏರ್ಪಟ್ಟಿತ್ತು. ಅದರಲ್ಲಿ ಒರೆವಾ ಕಂಪನಿ ಟಿಕೆಟ್ ರೂಪದಲ್ಲಿ ಸಂಗ್ರಹಿಸಿದ್ದ ಪ್ರವೇಶಶುಲ್ಕವನ್ನು ಸೇತುವೆ ದುರಸ್ತಿ, ನಿರ್ವಹಣೆ, ಶುಚಿಗೊಳಿಸುವಿಕೆಗೆ ಬಳಸಿಕೊಳ್ಳಬೇಕು ಎಂದು ಒಪ್ಪಂದದಲ್ಲಿ ಹೇಳಲಾಗಿತ್ತು. ಅದರಂತೆ ಕಂಪನಿಯು ಭಾನುವಾರ ಪ್ರವಾಸಿಗರಿಗೆ ತಲಾ 17 ರೂ.ನಂತೆ ಟಿಕೆಟ್ ಮಾರಾಟ ಮಾಡಿತ್ತು. ಆದರೆ ಜನದಟ್ಟಣೆ ನಿಯಂತ್ರಣಕ್ಕೆ ಸ್ಥಳೀಯ ಆಡಳಿತವಾಗಲಿ, ಒರೆವಾ ಕಂಪನಿಯಾಗಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ತೂಗುಸೇತುವೆ ಕುಸಿದು ಘೋರ ದುರಂತ: 132ಕ್ಕೇರಿದ ಸಾವಿನ ಸಂಖ್ಯೆ, ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಆತಂಕ…

    ಗುಜರಾತ್​ನಲ್ಲಿ ತೂಗುಸೇತುವೆ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಕೇಂದ್ರ-ರಾಜ್ಯ ಸರ್ಕಾರ

    ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನಿಗೆ ವಿಷವುಣಿಸಿದ ಪ್ರೇಯಸಿ! ಸಾಯೋ ಮುನ್ನ ಯುವಕ ಆಡಿದ ಮಾತು ಮನಕಲಕುವಂತಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts